ಸಾರಾಂಶ
ಮುರಳೀಧರ್ ಶಾಂತಳ್ಳಿ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆಕೊಡಗಿನಲ್ಲಿ ಮಳೆ ಸುರಿಯಲು ಆರಂಭಿಸಿದ್ದು, ಮತ್ತೆ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಗುಡ್ಡ ಪ್ರದೇಶ ಸುತ್ತಮುತ್ತ ಭೂಮಿ ಒಳಗೆ ಶಬ್ದ ಬರುವ ಕುರಿತು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಡಿಲಿನ ಹೊಡೆತಕ್ಕೆ ಮನೆಯೊಂದು ಸಂಪೂರ್ಣ ನಾಶವಾಗಿದೆ.
ಎರಡು ದಿನಗಳ ಹಿಂದೆ ಗಾಳಿಬೀಡು ಗ್ರಾಮದಲ್ಲಿಯೇ ಭೂಮಿ ಒಳಗೆ ಗುಡುಗಡು ಸದ್ದು ಕೇಳಿಸಿದೆ ಎಂಬ ಸುದ್ದಿ ಮುನ್ನೆಲೆಗೆ ಬಂದಿದ್ದು, ೨೦೧೮ರ ಅಂದಿನ ಕರಾಳ ಮಳೆಗಾಲವನ್ನು ಜಿಲ್ಲೆಯ ಜನತೆ ಮೆಲುಕುಹಾಕುವಂತೆ ಮಾಡಿರುವುದಲ್ಲದೇ ಆತಂಕ ಶುರುವಾಗಲು ಆರಂಭಿಸಿದೆ!ಮುಂಗಾರು ಮಳೆಯ ರಭಸಕ್ಕೆ ೨೦೧೮ರಲ್ಲಿ ಇಡೀ ಕೊಡಗು ಜಿಲ್ಲೆ ನಲುಗಿ ಹೋಯಿತು. ೨೦೧೮ರ ಆಗಸ್ಟ್ ತಿಂಗಳು ಕೊಡಗಿನ ಇತಿಹಾಸದಲ್ಲಿ ಅತ್ಯಂತ ಕರಾಳ ಮಾಸವಾಯಿತು. ಕೊಡಗಿನ ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕಿನ ಬೆಟ್ಟಗುಡ್ಡಗಳು, ಹೊಳೆ, ನದಿಗಳು ಉಕ್ಕಿ ಹರಿದು ಹಲವರ ಪ್ರಾಣವನ್ನು ತೆಗೆದುಕೊಂಡಿತ್ತಲ್ಲದೆ, ಸಾವಿರಾರು ಗ್ರಾಮಸ್ಥರನ್ನು ಅಕ್ಷರಶಃ ಬೀದಿ ಪಾಲು ಮಾಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ನಂತರ ೨೦೧೯ ರಲ್ಲೂ ಕೂಡ ವಿರಾಜಪೇಟೆಯ ತೋರ, ಕೊಂಡಂಗೇರಿ, ಕಾವೇರಿ ನದಿ ಪಾತ್ರದ ಮನೆಗಳು ಮತ್ತು ಜೀವನ ಕೊಚ್ಚಿಹೋಯಿತಲ್ಲದೇ, ೨೦೨೦ರಲ್ಲಿ ದಕ್ಷಿಣ ಭಾರತದ ಪುಣ್ಯಕ್ಷೇತ್ರ ಹಾಗೂ ಕೊಡಗಿನ ಕುಲ ದೇವತೆ ತಲಕಾವೇರಿಯಲ್ಲಿ ತೀವ್ರತರವಾದ ಭೂಕುಸಿತ ಉಂಟಾಗಿ ಅಲ್ಲಿನ ದೇವಾಲಯ ಸಮಿತಿ ಪ್ರಮುಖರಾದ ಟಿ.ಎಸ್.ನಾರಾಯಣಾಚಾರ್ ಮತ್ತು ಅವರ ಕುಟುಂಬದ ಸದಸ್ಯರೇ ಭೂಮಿ ಪಾಲಾಗಿದ್ದು ೨೦೨೦ರ ಘೋರ ದುರಂತವಾಯಿತು.ಜಲಾಶಯ ನೀರು ಸಂಗ್ರಹ ಹೆಚ್ಚಳ ವಿಶ್ಲೇಷಣೆ:
೨೦೧೮ರಲ್ಲಿ ಹಾರಂಗಿ ಜಲಾಶಯದಿಂದ ಅತ್ಯಂತ ಹೆಚ್ಚು ಅಂದರೆ ನಿತ್ಯ ೫೦ಸಾವಿರ ಕ್ಯುಸೆಕ್ ನೀರು ಹೊರ ಹರಿಸಿದ ಕಾರಣ ಹಾರಂಗಿ ಜಲಾನಯನ ಪ್ರದೇಶದಲ್ಲಿ ಆತಂಕ ಸೃಷ್ಟಿಸಿತ್ತು. ಕುಶಾಲನಗರ, ಕೂಡಿಗೆ, ಕಣಿವೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾವೇರಿ ನದಿ ಪಾತ್ರದಲ್ಲಿನ ಮನೆಗಳು ಮುಳುಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಹಾರಂಗಿ ಜಲಾಶಯದಲ್ಲಿ ನೀರು ಪೂರ್ಣಪ್ರಮಾಣದಲ್ಲಿ ಸಂಗ್ರಹಿಸಿದ್ದು ಭೂಕುಸಿತಕ್ಕೆ ಕಾರಣವಾಯಿತು ಎಂದು ಅಂದು ತಜ್ಞರು ವಿಶ್ಲೇಷಿಸಿದ್ದರು. ಅದರ ನಂತರ ಸತತ ಆರು ವರ್ಷಗಳಲ್ಲಿ ನೀರಿನ ಹೊರಹರಿವನ್ನು ಕಾವೇರಿ ನೀರಾವರಿ ನಿಗಮದ ಅಭಿಯಂತರರು ಸೂಕ್ಷ್ಮವಾಗಿ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ.ಮಳೆ ಜೊತೆಗೆ ಕಾಡುವ ಆತಂಕ:
ಈ ಬಾರಿ ಮುಂಗಾರು ಆರಂಭ ಆಗಬೇಕಷ್ಟೆ. ಆದರೆ ಮುಂಗಾರು ಮಳೆ ಆರಂಭವಾಯಿತೆಂದರೆ ಮತ್ತೆ ಗ್ರಾಮೀಣ ಪ್ರದೇಶದ ಜನತೆಗೆ ಆತಂಕ ಶುರುವಾಗುತ್ತದೆ. ಬೆಟ್ಟ, ಗುಡ್ಡಗಳ ಮೇಲೆ ತಮ್ಮ ಬದುಕನ್ನು ಕಟ್ಟಿಕೊಂಡಿರುವ ರೈತರು, ಮಳೆಯ ಜೊತೆಗೆ ಭೂಕುಸಿತಕ್ಕೆ ಹೆದರಬೇಕಾದ ಅನಿವಾರ್ಯತೆ ಕಳೆದ ಆರು ವರ್ಷಗಳಿಂದ ಜಿಲ್ಲೆಯ ಜನತೆಗೆ ಇದೆ. ಇದಕ್ಕೆ ಪೂರಕವಾಗಿ ಮೇ ೧೦ರಂದು ಮಡಿಕೇರಿಯ ಗಾಳಿಬೀಡು ಗ್ರಾಪಂ ವ್ಯಾಪ್ತಿಯ ಕಾಲೂರಿನ ಬಾರಿಕೆಮೊಟ್ಟೆಯಲ್ಲಿ ಸಿಡಿಲು ಬಡಿದು ಮನೆಯೊಂದು ಸಂಫೂರ್ಣ ನಾಶವಾಗಿದೆ. ಸೋಮವಾರ ಇದೇ ಗಾಳಿಬೀಡಿನಲ್ಲಿ ಭೂಮಿ ಒಳಗೆ ಗುಡುಗುಡು ಸದ್ದಾಗಿದೆ ಎಂದು ಗ್ರಾಮಸ್ಥರು ಹೇಳಿಕೆ ನೀಡಿದ್ದಾರೆ. ಮುಂಗಾರಿಗೆ ಮುಂಚಿತವಾಗಿ ನಡೆದಿರುವ ಈ ಅನಾಹುತಗಳು ನಾಗರಿಕರಲ್ಲಿ ಆತಂಕ ಸೃಷ್ಟಿವೆ.೨೦೧೮ರಲ್ಲೂ ಕೂಡ ಕೋಟೆಬೆಟ್ಟ, ಮಕ್ಕಳಗುಡಿಬೆಟ್ಟ ಪ್ರದೇಶದಲ್ಲಿ ಆರಂಭದಲ್ಲಿ ಭೂಮಿ ಕಂಪಿಸಿ, ನಂತರ ದಿಢೀರ್‌ಆಗಿ ಕೋಟೆಬೆಟ್ಟ, ಗರ್ವಾಲೆ ಗ್ರಾಮ ಪಂಚಾಯಿತಿ ಮತ್ತು ಮಾದಾಪುರ ಗ್ರಾಮ ಪಂಚಾಯಿತಿ , ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂತಿಪಾಲ, ಮೇಘತ್ತಾಳು, ಹೆಮ್ಮೆತ್ತಾಳು, ಉದಯಗಿರಿ, ಮಕ್ಕಂದೂರು, ಹಟ್ಟಿಹೊಳೆ ಸೇರಿದಂತೆ ಹಲವು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಹಲವರು ಬದುಕು ಬೀದಿ ಪಾಲಾಯಿತು. ಸಾವಿರಾರು ಕುಟುಂಬಗಳು ಮನೆಯಿಲ್ಲದೆ ಸಾಂತ್ವನ ಕೇಂದ್ರಗಳಲ್ಲಿ ತಿಂಗಳುಗಟ್ಟಲೆ ವಾಸಿಸಬೇಕಾದ ಪ್ರಸಂಗವನ್ನು ಅನುಭವಿಸಿದಂತಾಯಿತು.
ಮಡಿಕೇರಿ ತಾಲೂಕಿನ ೨ನೇ ಮೊಣ್ಣಂಗೇರಿ, ಜೋಡುಪಾಲ, ಮದೆನಾಡು ಸೇರಿದಂತೆ ಹಲವೆಡೆ ಬೆಟ್ಟ ಕುಸಿದು ಅನಾಹುತ ಮಾಡಿತು. ಅಲ್ಲದೇ ವಿರಾಜಪೇಟೆ ಸಮೀಪದ ತೋರ ಗ್ರಾಮದಲ್ಲಿ ಇಡೀ ಕುಟುಂಬವೊಂದು ಪ್ರಾಣ ಕಳೆದುಕೊಂಡಿತು. ಇದರ ಜೊತೆಗೆ ಮನೆ ಕಳೆದುಕೊಂಡವರಂತೂ ತಮ್ಮ ಇಡೀ ಬದುಕು, ತೋಟ, ಮನೆ ಸೇರಿದಂತೆ ಎಲ್ಲವನ್ನೂ ಬಿಟ್ಟು ಬರಬೇಕಾಯಿತು.ಆ ಸಂದರ್ಭ ಮನೆ, ತೋಟ ಸೇರಿದಂತೆ ಎಲ್ಲವನ್ನು ಕಳೆದುಕೊಂಡವರಿಗೆ ಮನೆಗಳನ್ನು ಮಡಿಕೇರಿ ತಾಲೂಕಿನ ಕರ್ಣಂಗೇರಿ, ಮಾದಾಪುರದ ಜಂಬೂರು ಬಾಣೆ, ಜೋಡುಪಾಲದಲ್ಲಿ ಸರ್ಕಾರ ನಿರ್ಮಿಸಿ ವಿತರಿಸಿತು. ಅಲ್ಲದೇ ಇನ್‌ಫೋಸಿಸ್ ಫೌಂಡೇಶನ್, ರೋಟರಿ, ಲಯನ್ಸ್ ಸೇರಿದಂತೆ ಹಲವು ಸಂಘಸಂಸ್ಥೆಗಳು ಕೂಡ ಮನೆಗಳನ್ನು ನಿರ್ಮಿಸಿ ಕೊಟ್ಟು ಮಾನವೀಯತೆ ಮೆರೆದಿದ್ದವು.
ಎಚ್ಚರಿಕೆ ನೋಟಿಸ್‌ಗೆ ಸೀಮಿತ?!:ಈ ಬಾರಿ ಮುಂಗಾರು ಜೂನ್‌ನಲ್ಲಿ ಆರಂಭವಾಗುವ ಎಲ್ಲಾ ಮುನ್ಸೂಚನೆ ನೀಡಿದೆ. ಆದರೆ ಮುಂಗಾರು ಮಳೆ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ಜಿಲ್ಲೆ ಮತ್ತು ತಾಲೂಕು ಆಡಳಿತ ಸಜ್ಜಾಗಬೇಕಾಗಿದೆ. ಕೇವಲ ಮುನ್ನೆಚ್ಚರಿಕಾ ಕ್ರಮವಾಗಿ ನೋಟಿಸು ಮಾತ್ರ ನೀಡಿದರಷ್ಟೇ ಸಾಲದು, ಎಲ್ಲಾ ರೀತಿಯಿಂದಲೂ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಬೆಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವ ಗ್ರಾಮೀಣ ಪ್ರದೇಶದ ಜನತೆ ಎಚ್ಚರಿಕೆಯಿಂದ ಮಳೆಗಾಲದಲ್ಲಿ ಇರಬೇಕಾದ ಅನಿವಾರ್ಯತೆ ಇದೆ. ಕರಾಳ ಆಗಸ್ಟ್‌೨೦೧೮!: ೨೦೧೮ರ ಆಗಸ್ಟ್‌ನಲ್ಲಿ ಸಂಭವಿಸಿದ ಭೂಕುಸಿತ ಮತ್ತು ಮೇಘಸ್ಪೋಟದಲ್ಲಿ ಹಟ್ಟಿಹೊಳೆಯ ಚಿತ್ರಾ ಸುಬ್ಬಯ್ಯ ಎಂಬುವರ ಮನೆ ರಾತ್ರಿ ಬೆಳಗಾಗುವುದರೊಳಗೆ ಕಣ್ಮರೆಯಾಗಿತ್ತು. ಮಾಜಿ ಯೋಧ ಜಗ್ಗಾರಂಡ ದೇವಯ್ಯ ಅವರ ದೊಡ್ಡ ಮನೆ ನೆಲಸಮವಾಗಿದ್ದು, ಮೂವತ್ತೊಕ್ಲು ಗ್ರಾಮ ಮುಕ್ಕಾಟಿರ ಸಾಬು ಅವರ ಪತ್ನಿ ಮನೆಯಿಂದ ಹೊರಗಡೆ ಹೋಗೋಣ ಎಂದು ಕರೆಯುವುದೊಳಗೆ ತನ್ನ ಮನೆಯೊಂದಿಗೆ ಭೂಮಿಯ ಪಾಲಾಗಿದ್ದು, ಹಟ್ಟಿಹೊಳೆಯ ಅಪ್ಪು ನೀರಿನೊಂದಿಗೆ ಕೊಚ್ಚಿಹೋಗಿದ್ದು ಸೇರಿದಂತೆ ಜಿಲ್ಲೆಯ ಸಾವಿರಾರು ಕುಟುಂಬ ಅಕ್ಷರಶಃ ಬೀದಿಗೆ ಬಂದಿದ್ದು ಇನ್ನೂ ಕಣ್ಣಮುಂದೆಯೇ ಅಚ್ಚಳಿಯದೇ ಉಳಿದಿದೆ. ಹೀಗಾಗಿ ಜಿಲ್ಲಾಡಳಿತ, ರಾಜ್ಯ ಸರ್ಕಾರ ೨೦೨೪ರ ಮಳೆಗಾಲವನ್ನು ಜಾಣ್ಮೆಯಿಂದ ಎದುರಿಸಬೇಕಾಗಿದೆ. ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗಿದೆ.
ಪ್ರಸ್ತುತ ಜಿಲ್ಲಾಧಿಕಾರಿ ಜಿಲ್ಲಾಮಟ್ಟದಲ್ಲಿ ಮತ್ತು ತಹಶೀಲ್ದಾರ್‌ರವರು ತಾಲೂಕು ಮಟ್ಟದಲ್ಲಿ ಸಭೆಗಳನ್ನು ವಾರಕ್ಕೊಮ್ಮೆ ನಡೆಸುತ್ತಿದ್ದಾರೆ. ಮುಂಗಾರು ಮಳೆಯಿಂದಾಗಿ ಯಾವುದೇ ತೊಂದರೆ ಸಂಭವಿಸಿದರೂ ಎದುರಿಸುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಾಲೂಕು ಆಡಳಿತ ಸ್ಪಷ್ಟಪಡಿಸಿದೆ.ಜಿಲ್ಲೆಯ ಇಬ್ಬರು ಶಾಸಕರು, ವಿಧಾನ ಪರಿಷತ್ ಸೇರಿದಂತೆ ಜನಪ್ರತಿನಿಧಿಗಳ ಸಭೆ ತುರ್ತಾಗಿ ಕರೆದು ಮಳೆಗಾಲವನ್ನು ಎದುರಿಸಲು ಈಗಿನಿಂದಲೇ ಸಜ್ಜಾಗಬೇಕಾಗಿದೆ.
.................ಪ್ರತಿ ವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ತಾಲೂಕು ಆಡಳಿತ ಈಗಾಗಲೇ ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮಳೆಗಾಲ ಮುಗಿಯುವವರೆಗೂ ಈ ಹಿಂದೆ ಭೂಕುಸಿತ ಕಂಡ ಪ್ರದೇಶಗಳಲ್ಲಿ ಯಾವುದೆ ಟ್ರೆಂಚ್‌ಗಳು ಮತ್ತು ದೊಡ್ಡ ದೊಡ್ಡ ಹೊಂಡಗಳನ್ನು ತೆಗೆಯದಂತೆ ಸೂಚನೆ ನೀಡಬೇಕೆಂದು ಬುಧವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ತಾಲೂಕು ಕೇಂದ್ರದಲ್ಲಿ ಈಗಾಗಲೇ ಕಂಟ್ರೋಲ್ ರೂಂ ತೆರೆಯಲಾಗಿದೆ.
-ನವೀನ್‌ಕುಮಾರ್, ತಹಸೀಲ್ದಾರ್, ಸೋಮವಾರಪೇಟೆ ತಾಲೂಕು..................
ಮೇ೧೧ ರಂದು ಭೂಮಿಯೊಳಗೆ ಸದ್ದು ಕೇಳಿಸಿರುವುದು ಸುಳ್ಳು ಸುದ್ದಿಯಾಗಿದೆ. ಸಿಡಿಲಿನ ಶಬ್ದಕ್ಕೆ ಗ್ರಾಮಸ್ಥರಿಗೆ ಆ ರೀತಿ ಕೇಳಿಸಿರಬಹುದು. ಭೂಮಿ ಕಂಪಿಸಿರುವ ಕುರಿತು ರಿಕ್ಟರ್ ಮಾಪನದಲ್ಲಿ ಶೂನ್ಯ ದತ್ತಾಂಶ ಬಂದಿರುವ ಕುರಿತು ಜಿಲ್ಲಾಧಿಕಾರಿ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಗಾಳಿಬೀಡು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವರು ಸುಳ್ಳು ಸುದ್ದಿ ಹರಡುತ್ತಿರುವ ಕುರಿತು ಕೇಳಿಬರುತ್ತಿದೆ. ಮುಂಗಾರು ಮಳೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.-ಜಿಲ್ಲಾ ವಿಪತ್ತು ನಿರ್ವಹಣಾ ಮಡಿಕೇರಿ ಘಟಕ ಸ್ಪಷ್ಟನೆ.