ಸಾರಾಂಶ
ಸಬ್ಲಿ ಗ್ರಾಮದಲ್ಲಿ ಗುಡ್ಡ ಕುಸಿತ, ಪ್ರವಾಹದ ಅಣುಕು ಪ್ರದರ್ಶನ ಮತ್ತು ಜಾಗೃತಿ
ಕನ್ನಡಪ್ರಭ ವಾರ್ತೆ, ಕೊಟ್ಟಿಗೆಹಾರಬಣಕಲ್ ಹೋಬಳಿ ಸಬ್ಲಿ ಗ್ರಾಮದ ಮಾಜಿ ಯೋಧ ಲಕ್ಷ್ಮಣ್ ಅವರ ಮನೆ ಹತ್ತಿರ ಗುಡ್ಡ ಕುಸಿತದ ಅಣಕು ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮವನ್ನು ಶೌರ್ಯ ವಿಪತ್ತು ತಂಡ ಮಲೆನಾಡಿನ ಪರಿಸ್ಥಿತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರದ ವಿಪತ್ತು ಪ್ರಾಧಿಕಾರ (ಎನ್.ಡಿ.ಆರ್.ಎಫ್), ಧರ್ಮಸ್ಥಳ ಗ್ರಾಮಾಭಿವೃದ್ದಿ ವಿಪತ್ತು ನಿರ್ವಹಣೆ ಘಟಕದಿಂದ ಜಂಟಿಯಾಗಿ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಮೂಡಿಗೆರೆ ತಹಸೀಲ್ದಾರ್ ಶೈಲೇಶ್ ಎಸ್. ಪರಮಾನಂದ ಮಾತನಾಡಿ ಮಲೆನಾಡು ಪ್ರದೇಶ ವಾಗಿರುವುದರಿಂದ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಭೂಕುಸಿತಗಳು ಉಂಟಾಗುತ್ತಿದ್ದು, ಈ ಪರಿಸ್ಥಿತಿ ಕುರಿತು ಜನರಲ್ಲಿ ಮೊದಲೇ ಜಾಗೃತಿ ಮೂಡಿಸಲು ಅಣುಕು ಪ್ರದರ್ಶನ ಮೂಲಕ ತುರ್ತು ಪರಿಸ್ಥಿತಿ ನಿಭಾಯಿಸಲು ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಮುಂದೆ ಎದುರಿಸಬೇಕಾದ ಸಮಸ್ಯೆ ಪರಿಹರಿಸಲು ಇಂತಹ ತರಬೇತಿ ಸಹಕಾರಿ. ಸರ್ವರ ಸಹಕಾರ ವಿದ್ದರೆ ಎಂತಹ ಜಟಿಲ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ ಎಂದರು.ಮೂಡಿಗೆರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶಿವಾನಂದ ಮಾತನಾಡಿ ಬರೀ ಸರ್ಕಾರವೇ ಎಲ್ಲ ಕೆಲಸ ಗಳನ್ನು ಮಾಡಲು ಸಾಧ್ಯವಿಲ್ಲ. ಸಂಘ ಸಂಸ್ಥೆಗಳು, ಸ್ಥಳೀಯರು, ಅಧಿಕಾರಿ ವರ್ಗದವರ ಸಹಕಾರದಿಂದ ಮಾತ್ರ ವಿಪತ್ತು ನಿರ್ವಹಣೆ ತಡೆಯಲು ಸಾಧ್ಯವಿದೆ. ಮನಸ್ಸಿದ್ದರೆ ಮಾರ್ಗ ಉಂಟು. ಪ್ರತಿಯೊಬ್ಬರಿಗೂ ಯಾವುದೇ ಕಾರ್ಯದಲ್ಲಿ ಆಸಕ್ತಿ, ಸಮಯ ಪ್ರಜ್ಞೆ ಮುಖ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಪ್ರಾದೇಶಿಕ ಜನ ಜಾಗೃತಿ ಯೋಜನಾಧಿಕಾರಿ ನಾಗರಾಜ್ ಕುಲಾಲ್, ಬೆಳ್ತಂಗಡಿ ವಿಪತ್ತು ನಿರ್ವಹಣಾ ಘಟಕದ ಯೋಜನಾಧಿಕಾರಿ ಕಿಶೋರ್, ಬಣಕಲ್ ವಲಯ ಮೇಲ್ವಿಚಾರಕ ಸಂದೀಪ್, ಅಗ್ನಿಶಾಮಕ ದಳದ ಅಧಿಕಾರಿಗಳು, ಪೋಲಿಸ್ ಸಬ್ ಇನ್ ಸ್ಪೆಕ್ಟರ್ ಕೌಶಿಕ್, ಅರಣ್ಯ ಇಲಾಖೆ, ಮೂಡಿಗೆರೆ ತಾಲೂಕು ಪಂಚಾಯಿತಿ ಸಿಇಒ, ಶೌರ್ಯ ವಿಪತ್ತು ನಿರ್ವಣ ಘಟಕದ ಮಾಸ್ಟರ್ ಪ್ರವೀಣ್ ಪೂಜಾರಿ, ಕ್ಯಾಪ್ಟನ್ ಕೆ. ಎಲ್. ರವಿ, ಹಾಗೂ ಆರೋಗ್ಯ ಇಲಾಖೆ, ಬಣಕಲ್ ಪ್ರೌಢಶಾಲಾ ಶಿಕ್ಷಕರು ಮತ್ತು ಶಾಲಾ ಮಕ್ಕಳು, ಬಣಕಲ್ ಗ್ರಾಮ ಪಂಚಾಯಿತಿ ಸಿಬ್ಬಂದಿ, ಶೌರ್ಯ ಘಟಕ ಸಂಯೋಜಕರು ಮತ್ತು ಸ್ವಯಂ ಸೇವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.23 ಕೆಸಿಕೆಎಂ 1ಬಣಕಲ್ ಹೋಬಳಿ ಸಬ್ಲಿ ಗ್ರಾಮದ ಮಾಜಿ ಯೋಧ ಲಕ್ಷ್ಮಣ್ ಅವರ ಮನೆ ಬಳಿ ಗುಡ್ಡ ಕುಸಿತದ ಅಣಕು ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.