ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತದ ಸಹಯೋಗದಲ್ಲಿ ವಿವಿಧೆಡೆ ಅಣಕು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಬಳ್ಳಾರಿ: ನಗರ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಅನಿರೀಕ್ಷಿತವಾಗಿ ಸಂಭವಿಸುವ ಬೆಂಕಿ ಅವಘಡಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಹಾಗೂ ಸಾರ್ವಜನಿಕರ ಜೀವ-ಆಸ್ತಿ ರಕ್ಷಣೆಗೆ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನಗಳು ಅತ್ಯಂತ ಅಗತ್ಯ ಎಂದು ಡಿವೈಎಸ್ಪಿ ಜಿ.ಎಂ.ತಿಪ್ಪೇಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಗೃಹರಕ್ಷಕ ದಳ, ಪೌರರಕ್ಷಣೆ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗಳ ಸಹಯೋಗದಲ್ಲಿ ಬಳ್ಳಾರಿ ತಾಲೂಕಿನ ಅಮರಾಪುರ ಗ್ರಾಮದ ಡಿ.ಎಂ. ಗ್ಲೋಬಲ್ ಕ್ಲಾಥಿಂಗ್ ಕಂಪನಿಯ ಆವರಣದಲ್ಲಿ ವಿಪತ್ತು ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಅಣಕು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಇತ್ತೀಚೆಗೆ ಬಹುಮಹಡಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು, ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ಬೆಂಕಿ ಅವಘಡಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತದ ಸಹಯೋಗದಲ್ಲಿ ವಿವಿಧೆಡೆ ಅಣಕು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಅಣಕು ಪ್ರದರ್ಶನಗಳ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು. ಬೆಂಕಿ ಕಾಣಿಸಿಕೊಂಡ ತಕ್ಷಣ ಯಾವ ಕ್ರಮ ಕೈಗೊಳ್ಳಬೇಕು? ಜನರನ್ನು ಸುರಕ್ಷಿತ ಸ್ಥಳಕ್ಕೆ ಹೇಗೆ ಸ್ಥಳಾಂತರಿಸಬೇಕು ಎಂಬುದರ ಕುರಿತು ಸಿಬ್ಬಂದಿ, ಸಾರ್ವಜನಿಕರಿಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಅಗ್ನಿ ಅವಘಡದ ಸಂದರ್ಭದಲ್ಲಿ ಗಾಬರಿಗೊಳ್ಳದೇ ಶಾಂತಚಿತ್ತದಿಂದ ನಿರ್ಗಮನ ದಾರಿಗಳನ್ನು ಬಳಸುವ ವಿಧಾನ ವಿವರಿಸಲಾಗುತ್ತದೆ ಎಂದರು.ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಠ ವೈ.ಶೇಕಸಾಬ್ ಮಾತನಾಡಿ, ಜಾಗತಿಕ ವಿದ್ಯಮಾನಗಳನ್ನು ಗಮನಿಸಿದಾಗ ಅಗ್ನಿ ಸುರಕ್ಷತೆ, ವಿಪತ್ತು ನಿರ್ವಹಣಾ ಮೋಕ್ ಡ್ರಿಲ್‌ಗಳ ಮಹತ್ವ ಏನೆಂಬುದು ನಮಗೆ ಅರಿವಾಗುತ್ತದೆ. ಇದು ಕೇವಲ ಒಂದು ತಾಲೀಮು ಅಲ್ಲ, ದೇಶದ ರಕ್ಷಣೆ ಮತ್ತು ಭವಿಷ್ಯಕ್ಕೆ ಭದ್ರವಾದ ಅಡಿಪಾಯವಾಗಿದೆ ಎಂದು ಹೇಳಿದರು.
ನಾಗರಿಕರ ಸುರಕ್ಷತೆ, ಸನ್ನದ್ಧತೆ ಪರಿಶೀಲಿಸಲು ವರ್ಷಕ್ಕೆ ಎರಡು ಬಾರಿ (ಏಪ್ರಿಲ್, ನವೆಂಬರ್) ವಾಯುದಾಳಿ ಮತ್ತು ಬ್ಯಾಕ್ ಔಟ್ ಮೋಕ್ ಡ್ರಿಲ್ ನಡೆಸಲಾಗುತ್ತಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪರಮೇಶ್ ತಿಳಿಸಿದರು.ಅಣಕು ಪ್ರದರ್ಶನದಲ್ಲಿ ಗಾಯಗೊಂಡವರನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಪ್ರಥಮ ಚಿಕಿತ್ಸೆ ನೀಡುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು, ಆರೋಗ್ಯ ದೃಷ್ಟಿಯಿಂದ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು.
ಅಗ್ನಿಶಾಮಕ ದಳ, ಗೃಹರಕ್ಷಕ ದಳದ ಸಿಬ್ಬಂದಿ ಜಂಟಿಯಾಗಿ ಹಮ್ಮಿಕೊಂಡಿದ್ದ ವಿವಿಧ ರಕ್ಷಣಾ ಕಾರ್ಯಾಚರಣೆಗಳ ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರು ಆಸಕ್ತಿಯಿಂದ ವೀಕ್ಷಿಸಿದರು.ಈ ವೇಳೆ ಬಳ್ಳಾರಿ ತಾಲೂಕು ಉಪ ತಹಸೀಲ್ದಾರ ವಿನಾಯಕಗೌಡ, ಗೃಹರಕ್ಷಕ ದಳದ ಅಧಿಕಾರಿ ಎಚ್.ತಿಪ್ಪೇಸ್ವಾಮಿ, ಅಗ್ನಿಶಾಮಕ, ತುರ್ತು ಸೇವೆಗಳ ಇಲಾಖೆಯ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್, ಕೈಮಗ್ಗ- ಜವಳಿ ಇಲಾಖೆಯ ಉಪನಿರ್ದೇಶಕ ಮಹಾಂತೇಶ್ ಕಂಚಿನಮಠ, ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.