ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಹಳೇಸೊರಬ ಗ್ರಾಮದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾಗಶಃ ನಿರ್ಮಾಣವಾಗಿ ಕಳೆದ 9 ತಿಂಗಳಿನಿಂದ ನನೆಗುದಿಗೆ ಬಿದ್ದಿರುವ ಶೌಚಾಲಯಕ್ಕೆ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.

ಪುರಸಭೆ ವ್ಯಾಪ್ತಿಗೆ ಒಳಪಡುವ, ಪಟ್ಟಣಕ್ಕೆ ಹೊಂದಿಕೊಂಡಿರುವ ಹಳೇಸೊರಬ ಗ್ರಾಮದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಸೇರಿ ೧ ರಿಂದ ೭ನೇ ತರಗತಿವರೆಗೆ ೩೨೨ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮುಖ್ಯೋಪಾಧ್ಯಾಯರು ಸೇರಿ ೧೧ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ೭ ಜನ ಶಿಕ್ಷಕಿಯರಿದ್ದಾರೆ. ಇವರು ಚೌಕಾಕಾರದ ಮೇಲ್ಛಾವಣಿ ಇಲ್ಲದ ತಗಡಿನ ಶೆಡ್ ನಿರ್ಮಿಸಿ, ಇದರಲ್ಲಿಯೇ ಬಹಿರ್ದೆಸೆ ತೀರಿಸಿಕೊಳ್ಳುತ್ತಿದ್ದರು.

ತಗಡಿನ ಶೆಡ್‌ಗೆ ಮೇಲ್ಛಾವಣಿ, ಬಾಗಿಲು ಇಲ್ಲದ ಶೌಚಾಲಯದ ದುಸ್ಥಿತಿ ಬಗ್ಗೆ ೨೦೨೫ ನವೆಂಬರ್ ೧೧ರಂದು ಶಾಲೆ ಮಕ್ಕಳಿಗೆ ಶೆಡ್ ಶೌಚಾಲಯ ಎಂಬ ಶೀರ್ಷಿಕೆಯಲ್ಲಿ ಕನ್ನಡಪ್ರಭ ವರದಿ ಮಾಡಿತ್ತು. ಇದೇ ವರದಿ ಪ್ರಸ್ತಾಪಿಸಿ ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯೆ ಭಾರತಿ ಶೆಟ್ಟಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಶೌಚಾಲಯ ದುಸ್ಥಿತಿ ಬಗ್ಗೆ ಗಮನಹರಿಸಿದ್ದರು. ಎಚ್ಚೆತ್ತ ಪುರಸಭೆಯಿಂದ ಕಾಮಗಾರಿ ಪ್ರಾರಂಭಗೊಂಡು ಮೇಲ್ಛಾವಣಿ ಮಟ್ಟಕ್ಕೆ ನಿಂತಿದೆ. ಆದರೆ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದ ಕಾರಣ ಕಾಮಗಾರಿ ನಿಂತಿದೆ.

ಮಂಗಳವಾರ ಭೇಟಿ ಶಾಲೆಗೆ ಭೇಟಿ ನೀಡಿದ ಭಾರತಿ ಶೆಟ್ಟಿ ಶೌಚಾಲಯ ಕಾಮಗಾರಿ ವೀಕ್ಷಿಸಿ, ಅಪೂರ್ಣಗೊಂಡದ್ದನ್ನು ಗಮನಿಸಿ ದೂರವಾಣಿ ಮೂಲಕ ಪುರಸಭಾ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗುತ್ತಿಗೆದಾರರಿಗೆ ಕೂಡಲೇ ಬಿಲ್ ಪಾವತಿಸಿ, ಕಾಮಗಾರಿ ಪ್ರಾರಂಭಿಸಬೇಕು ಎಂದು ಎಚ್ಚರಿಸಿದ ನಂತರ ಮುಂದಿನ ೧೫ ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.


ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡುಗೆ ತಯಾರಿಸಲು ಬಾಯ್ಲರ್ ಮತ್ತು ಮಕ್ಕಳಿಗೆ ಕೈತೊಳೆಯಲು ಬಾಷ್ ಬೇಸಿನ್‌ನನ್ನು ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ನೀಡುವಂತೆ ಎಸ್‌ಡಿಎಂಸಿ ವತಿಯಿಂದ ಭಾರತಿ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ವೈ.ಜಿ. ಗುರುಮೂರ್ತಿ, ಪ್ರವೀಣ್ ಗೌಡ್ರು, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೊಳಿಯಮ್ಮ, ಜಾನಕಪ್ಪ ಒಡೆಯರ್, ರವಿಕಿರಣ್, ಪಿಎಂಶ್ರೀ ನೋಡಲ್ ಅಧಿಕಾರಿ ಕೆ.ಪಿ.ಸದಾನಂದ ಹಾಜರಿದ್ದರು.