- ಕಲಾವಿದರು ಒಂದು ತತ್ವ ಸಿದ್ಧಾಂತವನ್ನು ಪಾಲಿಸಬೇಕು
- ‘ಅಡುಗೆ ಮನೆಯಲ್ಲೊಂದು ಹುಲಿ’ ನಾಟಕ ಕುರಿತು ಸಂವಾದಕನ್ನಡಪ್ರಭ ವಾರ್ತೆ ಮಂಡ್ಯಜನಪದ ಕಲೆಗಳಲ್ಲಿ ಒಂದು ಪ್ರಕಾರವಾದ ಬೀದಿ ನಾಟಕಗಳು ದನಿಯಿಲ್ಲದವರ ದನಿಯಾಗುವ ವೇದಿಕೆಯಾಗಿದ್ದು, ಇದನ್ನು ಇಂದು ಸರ್ಕಾರಗಳು ತಮ್ಮ ಯೋಜನೆಗಳ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ವಿಚಿತ್ರವಾಗಿದೆ ಎಂದು ಚಿತ್ರ ನಿರ್ದೇಶಕ, ನಟ, ರಂಗಕರ್ಮಿ ಬಿ.ಸುರೇಶ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಕನ್ನಡ ಕರ್ನಾಟಕ ಫೌಂಡೇಷನ್, ‘ಎಂಪ್ಟಿ ಪಾಕೆಟ್ ಡ್ರೀಮ್ಸ್’ ಸಹಯೋಗದಲ್ಲಿ ಆಪ್ತ ಸಂವಾದ ೩ನೇ ಸಂಚಿಕೆಯಲ್ಲಿ ‘ಅಡುಗೆ ಮನೆಯಲ್ಲೊಂದು ಹುಲಿ’ ನಾಟಕದ ಲೇಖಕ ಬಿ.ಸುರೇಶ ಅವರೊಂದಿಗೆ ಲೇಖಕ, ಕಿರುಚಿತ್ರ ನಿರ್ದೇಶಕ ಎಂ.ಜಿ.ವಿನಯ್‌ಕುಮಾರ್ ನಡೆಸಿದ ಆಪ್ತ ಸಂವಾದದಲ್ಲಿ ಮಾತನಾಡಿದರು.ಮಾನವ ಎಂದು ಬೇಟೆಯಾಡುವುದನ್ನು ಕಲಿತನೋ ಆನಂತರದಲ್ಲೇ ಮತ್ತೊಬ್ಬರಿಗೆ ಕಲಿಸುವ ಪ್ರಕಾರವಾಗಿ ಬೀದಿ ನಾಟಕ ಅವತರಿಸಿದೆ. ಪೌರಾಣಿಕವಾಗಿ, ಧಾರ್ಮಿಕವಾಗಿ ಕಲಾವಿದರು ಬೀದಿ ನಾಟಕದ ಮೂಲಕ ಒಂದು ಪರಂಪರೆ ಉಳಿಸಿಕೊಂಡು ಬಂದಿದ್ದಾರೆ. ಶಿಳ್ಳೆಕ್ಯಾತರು, ಹಗಲು ವೇಷಧಾರಿಗಳು ಬೀದಿ ನಾಟಕ ಮೂಲಕ ಮೌಖಿಕವಾಗಿ ಸಂದೇಶ ನೀಡುತ್ತಾ ಬಂದಿದ್ದಾರೆ ಎಂದರು.
ತಮ್ಮ ಕೃತಿಯಲ್ಲಿನ ಎಲ್ಲ ಪಾತ್ರಗಳ ಮೂಲಕ ಹೇಗೆ ಪ್ರಸ್ತುತ ಸಮಾಜದ ಪ್ರತಿಬಿಂಬವನ್ನು ಕಾಣಬಹುದು ಎಂಬುದನ್ನು ಬಿಡಿ ಬಿಡಿಯಾಗಿ ವಿಸ್ತರಿಸಿದ ಸುರೇಶ್ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಮಾಧ್ಯಮಗಳು ಹೇಳದ್ದನ್ನು ಬೀದಿ ನಾಟಕಗಳು ಸಶಕ್ತವಾಗಿ ಜನರಿಗೆ ದಾಟಿಸುತ್ತಿವೆ. ಕಳೆದ ವರ್ಷ ದೇಶದಲ್ಲಿ ಸುಮಾರು ಒಂದೂವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಯಾವ ಮೀಡಿಯಾ ರೈತರ ಪರ ದನಿಯಾಗಿದ್ದವು ಎಂದು ಪ್ರಶ್ನಿಸಿದ ಸುರೇಶ್, ಸುಳ್ಳು ಹೇಳೋ ಸಿನಿಮಾ ಮಾಡುವ ನಾವೂ ಕೂಡ ಪ್ರಧಾನ ಮಂತ್ರಿಯೇ ಸುಳ್ಳು ಹೇಳುತ್ತಾರೆ, ನಾವೇಕೆ ಮಾಡಬಾರದು ಎಂಬ ಮನೋಭಾವದಲ್ಲಿದ್ದೇವೆ ಎಂದು ನುಡಿದರು.
ಬೇರೆಯವರ ಉಸಾಬರಿ ನಮಗೇಕೆ ಎಂಬ ಮನೋಭಾವ ಹೆಚ್ಚಾಗಿರುವ ಈ ಸನ್ನಿವೇಶ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದೆ. ಪಕ್ಕದ ಮನೆಯವ ಊಟಕ್ಕಿಲ್ಲದೆ ಸಾಯುವಾಗಲೂ ತನ್ನ ಸುಖವನ್ನು ಸಾಧಿಸಿಕೊಳ್ಳುವಾತ ನಿಜವಾಗಿ ಮನುಷ್ಯನಾಗಿರಲಾರ ಎಂದು ಉತ್ತರಿಸಿದರು.
ಕಲಾವಿದರಾದವರು ಒಂದು ತತ್ವ ಸಿದ್ಧಾಂತವನ್ನು ಪಾಲಿಸಬೇಕು. ಅದು ಬಿಟ್ಟು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನಡೆದುಕೊಳ್ಳುವವನು ಕಲಾವಿದನೇ ಅಲ್ಲ ಎಂದು ಕಲಾವಿದನ ನಿಷ್ಠೆ ಮತ್ತು ಹೊಣೆಗಾರಿಕೆ ಕುರಿತು ಸೂಚ್ಯವಾಗಿ ಹೇಳಿದರು.ಖಾಸಗೀಕರಣ ತಂದಿತ್ತ ಸಂಕಟ:ಇತ್ತೀಚಿನವರೆಗೆ ಜನರಲ್ಲಿ ಸರ್ಕಾರಿ ಕೆಲಸದ ಬಗ್ಗೆ ಇನ್ನಿಲ್ಲದ ಆಸಕ್ತಿಯಿತ್ತು. ಬಳಿಕ ಖಾಸಗೀಕರಣಕ್ಕೆ ಭಾರತವೂ ತೆರೆದುಕೊಂಡ ಮೇಲೆ ವಿದೇಶಗಳಲ್ಲಿ ಭಾರತೀಯ ಉದ್ಯೋಗಿಗಳ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಯಿತು. ಆದರೇನು ಖಾಸಗೀಕರಣದ ದೊಡ್ಡ ಸಮಸ್ಯೆಯೆಂದರೆ ಅಭದ್ರತೆಯ ಬದುಕು. ಮೊನ್ನೆ ಅಮೇರಿಕದಲ್ಲಿ ಒರಾಕಲ್ ಕಂಪನಿ ಏಕಾಏಕಿ ೩೦ ಸಾವಿರ ಉದ್ಯೋಗಿಗಳನ್ನು ಹೊರ ಹಾಕಿದರು. ಅಮೆಜಾನ್ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವವರ ಭವಿಷ್ಯವೂ ಡೋಲಾಯಮಾನವಾಗಿದೆ. ಖಾಸಗೀಕರಣದಲ್ಲಿ ಜೀವನ ಭದ್ರತೆ ಎಂಬುದಿಲ್ಲ. ಬಂಡವಾಳ ಶಾಹಿಗಳು ಹೆಚ್ಚಾದರೆ ಕೋಮುವಾದಕ್ಕೂ ಹೆಚ್ಚು ಬಲ ಬರುತ್ತದೆ ಎಂಬುದರ ಕುರಿತು ತಮ್ಮದೇ ಆದ ಧಾಟಿಯಲ್ಲಿ ಪ್ರಸ್ತಾಪಿಸಿದರು.
----------------------(ಫೋಟೋ ಬರಲಿದೆ)
