ಕಳೆದ ಮೂರು ತಿಂಗಳಿಂದ ಸುಮಾರು 2,876 ರೈತರ ಅರ್ಜಿಗಳು ಬಾಕಿ ಉಳಿದಿವೆ. ಈ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು, ಕಂದಾಯ ಸಚಿವರು ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು, ಈಗಾಗಲೇ ರಾಜ್ಯದ ಹಲವು ಕಡೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರವು ಈ ವಿಚಾರದಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಸರಿಯಲ್ಲ
ಕನ್ನಡಪ್ರಭ ವಾರ್ತೆ, ಗೌರಿಬಿದನೂರುನಗರದ ಹೊರವಲಯದ ತಾಲೂಕು ಆಡಳಿತ ಮಿನಿ ವಿಧಾನಸೌಧದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಶಾಖೆಯ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ರೈತ ಸಂಘದ ತಾಲೂಕು ಅಧ್ಯಕ್ಷ ಗುಂಡಾಪುರ ಲೋಕೇಶ್ ಗೌಡ ಮಾತನಾಡಿ, ಕಳೆದ ಮೂರು ತಿಂಗಳಿಂದ ಸುಮಾರು 2,876 ರೈತರ ಅರ್ಜಿಗಳು ಬಾಕಿ ಉಳಿದಿವೆ. ಈ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು, ಕಂದಾಯ ಸಚಿವರು ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು, ಈಗಾಗಲೇ ರಾಜ್ಯದ ಹಲವು ಕಡೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರವು ಈ ವಿಚಾರದಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಸರಿಯಲ್ಲ ಎಂದರು.ಸರ್ಕಾರವು ಡಿಜಿಟಲ್ ಪದ್ಧತಿಯ ಬದಲು ಹಳೆಯ ಮ್ಯಾನುವಲ್ ಪದ್ಧತಿ ಮೂಲಕ ರೈತರ ಕೆಲಸಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಪರವಾನಿಗೆ ಭೂ-ಮಾಪಕರ ಮುಷ್ಕರದ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ ತಾಲೂಕಿನಲ್ಲಿ ರೈತರ ಜಮೀನು ಹದ್ದುಬಸ್ತು, 11-ಇ ನಕ್ಷೆ ಹಾಗೂ ತತ್ಕಾಲ್ ಪೋಡಿ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನಲ್ಲಿ 2,876 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸುಮಾರು 16,071 ಅರ್ಜಿಗಳು ಭೂಮಾಪನಾ ಇಲಾಖೆಯಲ್ಲಿ ವಿಲೇವಾರಿಯಾಗದೆ ಬಾಕಿ ಇವೆ. ಪರವಾನಿಗೆ ಭೂ-ಮಾಪಕರ ಮುಷ್ಕರದಿಂದಾಗಿ ಸರ್ವೇ ಕೆಲಸಗಳು ಪೂರ್ಣ ಸ್ಥಗಿತಗೊಂಡಿವೆ. ಪ್ರಸ್ತುತ ಮುಂಗಾರು ಪೂರ್ವ ಮಳೆ ಸುರಿದಿದ್ದು, ರೈತರು ತಮ್ಮ ಜಮೀನುಗಳಲ್ಲಿ ಉಳುಮೆ ಕಾರ್ಯ ಆರಂಭಿಸಿ, ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಭೂಮಿ ಅಳತೆ ಮತ್ತು ದಾಖಲೆಗಳು ಸರಿಯಿಲ್ಲದ ಕಾರಣ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಈಗಾಗಲೇ ಕ್ಷೇತ್ರದ ಶಾಸಕರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಭೂ-ಮಾಪಕರ ಬೇಡಿಕೆಗಳನ್ನು ಈಡೇರಿಸಿ, ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ರೈತ ಸಂಘದಿಂದ ಮುಖ್ಯಮಂತ್ರಿಗೆ ಹಾಗೂ ಕಂದಾಯ ಸಚಿವರಿಗೆ ತಲುಪಿಸುವಂತೆ ಮನವಿ ಪತ್ರವನ್ನು ತಹಸೀಲ್ದಾರ್ ಅರವಿಂದ್.ಕೆ.ಎಂ ರವರಿಗೆ ನೀಡಿದರು.ಇದೇ ವೇಳೆ ರೈತ ಮುಖಂಡರಾದ ಮುದ್ದರಂಗಪ್ಪ, ರಾಜಣ್ಣ, ಗೋಪಿ, ನರಸರೆಡ್ಡಿ, ನಂದನ್, ಮಲ್ಲಿಕಾರ್ಜುನ್, ಪ್ರಸನ್ನಕುಮಾರ್, ಮಂಜಣ್ಣ, ಗೋವಿಂದರಾಜು, ಶ್ರೀನಿವಾಸ, ಬಿ.ಸಿ.ಗಂಗಾಧರ್ ಮತ್ತು ಪಿಎಸ್ಐ ಗಳಾದ ಹರೀಶ್ ಕುಮಾರ್, ಮಮತಾ ಹಾಗೂ ಸಿಬ್ಬಂದಿ ಮ್ತತಿತರರು ಇದ್ದರು.
------ಗೌರಿಬಿದನೂರು ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪರವಾನಗಿ ಭೂ ಮಾಪಕರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅರವಿಂದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.