ಗೃಹಲಕ್ಷ್ಮಿ ಯೋಜನೆಯ ಯಶಸ್ಸಿನ ಬಗ್ಗೆ ಪ್ರಚಾರ ಮಾಡುತ್ತಿರುವ ಸರ್ಕಾರವೇ ಫಲಾನುಭವಿಗಳಿಗೆ ನಿಗದಿತ ಸಮಯಕ್ಕೆ ಹಣ ಪಾವತಿಸದೆ ವಿಳಂಬ ಮಾಡುತ್ತಿರುವುದು ಖಂಡನೀಯ. ವಿಶೇಷವಾಗಿ ೨೦೨೫ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಕಂತುಗಳು ಇದುವರೆಗೂ ಬಿಡುಗಡೆಯಾಗಿಲ್ಲ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗೃಹಲಕ್ಷ್ಮಿ ಹಣವನ್ನು ನಿಗದಿತ ಸಮಯಕ್ಕೆ ಮಹಿಳೆಯರಿಗೆ ಪಾವತಿಸದ ಸರ್ಕಾರ ಪರಿಶೀಲನೆ ಹೆಸರಿನಲ್ಲಿ ಸೌಲಭ್ಯ ಕಿತ್ತುಕೊಳ್ಳುವುದಕ್ಕೆ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಎಂ.ಎಂ.ಫೌಂಡೇಷನ್ ಅಧ್ಯಕ್ಷ ಎಂ.ಮಹಾಲಿಂಗೇಗೌಡ ಆರೋಪಿಸಿದ್ದಾರೆ.

ಯೋಜನೆಯ ಯಶಸ್ಸಿನ ಬಗ್ಗೆ ಪ್ರಚಾರ ಮಾಡುತ್ತಿರುವ ಸರ್ಕಾರವೇ ಫಲಾನುಭವಿಗಳಿಗೆ ನಿಗದಿತ ಸಮಯಕ್ಕೆ ಹಣ ಪಾವತಿಸದೆ ವಿಳಂಬ ಮಾಡುತ್ತಿರುವುದು ಖಂಡನೀಯ. ವಿಶೇಷವಾಗಿ ೨೦೨೫ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಕಂತುಗಳು ಇದುವರೆಗೂ ಬಿಡುಗಡೆಯಾಗಿಲ್ಲ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಈ ಎರಡು ತಿಂಗಳ ಬಾಕಿ ಮೊತ್ತ ಸುಮಾರು ೫,೦೦೦ ಕೋಟಿಯಷ್ಟಿದೆ ಎನ್ನುವುದೂ ನ್ಯಾಯಾಲಯದ ವಿಚಾರಣೆಯಲ್ಲಿ ಪ್ರಸ್ತಾಪವಾಗಿದೆ ಎಂದು ತಿಳಿಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ೨ ಸಾವಿರ ರು. ತಲುಪಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ, ಅಧಿಕಾರಕ್ಕೆ ಬಂದ ನಂತರ ಅದೇ ಹಣವನ್ನು ತಿಂಗಳುಗಟ್ಟಲೆ ವಿಳಂಬ ಮಾಡುವುದು ವಚನಭಂಗವಲ್ಲದೆ ಮತ್ತೇನು?.

ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರ ಮನೆ ಖರ್ಚು, ಔಷಧ, ಮಕ್ಕಳ ಶಿಕ್ಷಣ ಮತ್ತು ದಿನನಿತ್ಯದ ಅಗತ್ಯಗಳಿಗೆ ನೆರವಾಗಬೇಕಾದ ಹಣವನ್ನು ಸಮಯಕ್ಕೆ ನೀಡದೆ ಮಹಿಳೆಯರನ್ನು ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕುಗಳ ಮುಂದೆ ಅಲೆದಾಡುವಂತೆ ಮಾಡಿರುವುದು ಸರ್ಕಾರದ ಮಹಿಳಾ ವಿರೋಧಿ ನಡೆಯಾಗಿದೆ ಎಂದು ಟೀಕಿಸಿದ್ದಾರೆ.

ಯೋಜನೆಯಲ್ಲಿ ಅನರ್ಹರು ಅಥವಾ ಮೃತಪಟ್ಟ ಫಲಾನುಭವಿಗಳ ಹೆಸರಿನಲ್ಲಿ ಹಣ ಪಾವತಿಯಾಗಿರುವ ಪ್ರಕರಣಗಳನ್ನು ಸರ್ಕಾರವೇ ಒಪ್ಪಿಕೊಂಡಿದ್ದು, ಇದು ಸರ್ಕಾರದ ಆಡಳಿತಾತ್ಮಕ ಮೇಲ್ವಿಚಾರಣೆಯಲ್ಲಿನ ಗಂಭೀರ ದೌರ್ಬಲ್ಯವನ್ನು ತೋರಿಸುತ್ತದೆ. ಆಡಳಿತದ ತಪ್ಪಿಗೆ ಅಮಾಯಕ ಅರ್ಹ ಮಹಿಳೆಯರನ್ನು ಶಿಕ್ಷಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಅನರ್ಹ ಫಲಾನುಭವಿಗಳನ್ನು ಗುರುತಿಸಿ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದರ ನೆಪದಲ್ಲಿ ಈಗಾಗಲೇ ಅರ್ಹರೆಂದು ಗುರುತಿಸಿ ಹಣ ಪಡೆದಿರುವ ನೈಜ ಫಲಾನುಭವಿಗಳ ಹೆಸರನ್ನು ಏಕಾಏಕಿ ಕೈಬಿಡುವುದು, ಹಣ ತಡೆಹಿಡಿಯುವುದು ಅಥವಾ ಸಮರ್ಪಕ ಪರಿಶೀಲನೆ ಹಾಗೂ ನೋಟಿಸ್ ನೀಡದೆ ಹಣ ವಾಪಸ್ ಪಡೆಯಲು ಮುಂದಾಗುವುದು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದಿದ್ದಾರೆ.

ಗೃಹಲಕ್ಷ್ಮಿ ಹಣ ಸರ್ಕಾರದ ಪ್ರಚಾರದ ಸಾಧನವಲ್ಲ. ಅದು ಮಹಿಳೆಯರಿಗೆ ನೀಡಿದ ಭರವಸೆಯ ಆಧಾರದ ಮೇಲೆ ದೊರೆಯಬೇಕಾದ ಆರ್ಥಿಕ ನೆರವು. ಕೊಡುವಾಗ ಗ್ಯಾರಂಟಿ, ಕೇಳುವಾಗ ಪರಿಶೀಲನೆ ಎಂಬ ದ್ವಂದ್ವ ನೀತಿ ಇರಬಾರದು.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಂಖ್ಯೆ, ಪಾವತಿಸಿದ ಕಂತುಗಳು, ಬಾಕಿ ಇರುವ ಮೊತ್ತ, ಕೈಬಿಟ್ಟ ಫಲಾನುಭವಿಗಳ ಸಂಖ್ಯೆ ಮತ್ತು ಕಾರಣಗಳ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಮಹಿಳೆಯರ ಸ್ವಾಭಿಮಾನವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡು, ಅವರದೇ ಹಕ್ಕಿನ ಹಣಕ್ಕಾಗಿ ಕಾಯಿಸುವುದು ಜನಪರ ಆಡಳಿತವಲ್ಲ. ಬಾಕಿ ಉಳಿಸಿಕೊಂಡಿರುವ ಪ್ರತಿಯೊಂದು ರೂಪಾಯಿಯನ್ನೂ ತಕ್ಷಣವೇ ಪಾವತಿಸುವಂತೆ ಆಗ್ರಹಪಡಿಸಿದ್ದಾರೆ.