ಮನೆ ಮಗನಂತೆ ನಿಂತು ಎಸ್. ಎಂ. ಕೃಷ್ಣ ಅಂತ್ಯಕ್ರಿಯೆ ನೆರವೇರಿಸಿದ ಡಿ.ಕೆ.ಶಿವಕುಮಾರ್

| Published : Dec 12 2024, 12:30 AM IST / Updated: Dec 12 2024, 10:51 AM IST

ಮನೆ ಮಗನಂತೆ ನಿಂತು ಎಸ್. ಎಂ. ಕೃಷ್ಣ ಅಂತ್ಯಕ್ರಿಯೆ ನೆರವೇರಿಸಿದ ಡಿ.ಕೆ.ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ರಾಜಕೀಯ ಗುರುವಿನ ಅಂತಿಮಯಾತ್ರೆ ಸುಗಮವಾಗಿ, ಶಾಂತಿಯುತವಾಗಿ ನಡೆಯುವಂತೆ ಮಾಡುವಲ್ಲಿ ಶಿಷ್ಯ ಡಿ.ಕೆ.ಶಿವಕುಮಾರ್ ಅವರು ಮಹತ್ವದ ಪಾತ್ರ ವಹಿಸಿದರು.

 ಮಂಡ್ಯ : ತಮ್ಮ ರಾಜಕೀಯ ಗುರುವಿನ ಅಂತಿಮಯಾತ್ರೆ ಸುಗಮವಾಗಿ, ಶಾಂತಿಯುತವಾಗಿ ನಡೆಯುವಂತೆ ಮಾಡುವಲ್ಲಿ ಶಿಷ್ಯ ಡಿ.ಕೆ.ಶಿವಕುಮಾರ್ ಅವರು ಮಹತ್ವದ ಪಾತ್ರ ವಹಿಸಿದರು.

ಎಸ್.ಎಂ.ಕೃಷ್ಣ ಅವರು ಇಹಲೋಕ ತ್ಯಜಿಸಿದ ನಂತರ ಅಂತ್ಯಕ್ರಿಯೆಗೆ ಜಾಗ ಸಿದ್ದಪಡಿಸುವುದರಿಂದ ಆರಂಭಗೊಂಡು ಅಂತ್ಯಕ್ರಿಯೆ ಮುಗಿಯುವವರೆಗೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಗೊಂದಲ-ಗದ್ದಲಗಳಿಗೆ ಅವಕಾಶವಾಗದ ರೀತಿಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು ನಿಭಾಯಿಸುವಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಶಸ್ವಿಯಾದರು.

ಮಂಗಳವಾರ ಮಧ್ಯಾಹ್ನವೇ ಮದ್ದೂರಿನ ಸೋಮನಹಳ್ಳಿಯ ಕಾಫಿ ಡೇ ಜಾಗಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು ಅಂತ್ಯಸಂಸ್ಕಾರಕ್ಕೆ ಕೃಷ್ಣ ಕುಟುಂಬದವರು ಗುರುತಿಸಿದ್ದ ಸ್ಥಳದ ಪರಿಶೀಲನೆ ನಡೆಸಿದ್ದರು. ಅಲ್ಲಿಂದ ಪಾರ್ಥಿವ ಶರೀರದ ದರ್ಶನಕ್ಕೆ, ಗಣ್ಯರು ಹಾಗೂ ಸ್ವಾಮೀಜಿಗಳು ಅಂತಿಮ ನಮನ ಸಲ್ಲಿಸುವುದಕ್ಕೆ ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ ಬೆಂಗಳೂರಿಗೆ ವಾಪಸಾಗಿದ್ದರು. ಮತ್ತೆ ತಡರಾತ್ರಿ ಸೋಮನಹಳ್ಳಿಗೆ ಆಗಮಿಸಿ ಅಂತಿಮ ಸಂಸ್ಕಾರದ ಏರ್ಪಾಡುಗಳನ್ನು ಮತ್ತೊಮ್ಮೆ ಪರಿಶೀಲಿಸಿದರು. 

ಎರಡೂವರೆ ಎಕರೆ ಜಾಗದಲ್ಲಿ ಒಂದೆಡೆ ಪಾರ್ಥಿವ ಶರೀರವನ್ನಿಡಲು ವ್ಯವಸ್ಥೆ ಮಾಡಿ ಸ್ಥಳೀಯ ಜನರು ಅಂತಿಮ ದರ್ಶನ ಪಡೆಯುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಅಲ್ಲಿಂದ ಕಾಫೀ ಡೇ ಅಂಗಡಿ ಮುಂಭಾಗದಲ್ಲಿ 18 X 12 ಅಳತೆಯಲ್ಲಿ ಚಿತಾ ವೇದಿಕೆ ಸಿದ್ಧಪಡಿಸಿದ್ದರು. ಗಣ್ಯರು, ಸ್ವಾಮೀಜಿಗಳು, ಕುಟುಂಬ ವರ್ಗದವರು ಕೂರುವುದಕ್ಕೆ ಚಿತಾ ವೇದಿಕೆ ಸುತ್ತಲೂ ವಿಶಾಲ ಜಾಗ ಮಾಡಿಕೊಟ್ಟಿದ್ದರು. ಚಿತಾ ವೇದಿಕೆಯ ಸುತ್ತ ನಿರ್ಮಿಸಿದ್ದ ಬ್ಯಾರಿಕೇಡ್‌ಗಳನ್ನೆಲ್ಲಾ ತೆಗೆಸಿ ಸಂಪೂರ್ಣವಾಗಿ ಹಿಂದಕ್ಕೆ ಹಾಕಿಸಿದರು. 

ವಾಹನದಲ್ಲಿದ್ದ ಶ್ರೀಗಂಧದ ತುಂಡುಗಳನ್ನೆಲ್ಲಾ ಪರಿಶೀಲನೆ ನಡೆಸಿದರು. ಎಲ್ಲಿಯೂ ಕೂಡ ಸಮಯ ವ್ಯರ್ಥವಾಗದಂತೆ ಆಯಾ ಸಮಯಕ್ಕೆ ನಡೆಯಬೇಕಾದ ವಿಧಿ-ವಿಧಾನಗಳು, ಗಣ್ಯರು, ಸ್ವಾಮೀಜಿಗಳಿಂದ ಪುಷ್ಪನಮನ, ಕುಟುಂಬ ವರ್ಗದವರಿಂದ ಅಂತಿಮ ನಮನ ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತೆ ಮೇಲುಸ್ತುವಾರಿ ವಹಿಸಿದ್ದರು. ಕೊನೆ ಕೊನೆಯಲ್ಲಿ ಕುಟುಂಬದವರ ಜೊತೆಗೆ ಇತರರೂ ಕೂಡ ಚಿತಾ ವೇದಿಕೆ ಏರಲು ಮುಂದಾದಾಗ ಡಿ.ಕೆ.ಶಿವಕುಮಾರ್ ಬಂದು ಅವರನ್ನು ತಡೆದರು. ವೇದಿಕೆ ಮೇಲೆ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರು ಮೇಲೇರದಂತೆ ಎಚ್ಚರ ವಹಿಸಿದ್ದರು. ಚಿತೆಗೆ ಅಗ್ನಿಸ್ಪರ್ಶವಾಗುವವರೆಗೆ ಇಡೀ ಸ್ಥಳವನ್ನು ಹತೋಟಿಯಲ್ಲಿಟ್ಟುಕೊಂಡು ನಿಭಾಯಿಸಿದರು. ತಾವೊಬ್ಬ ಉಪ ಮುಖ್ಯಮಂತ್ರಿ ಎಂಬುದನ್ನು ಮರೆತು ಸಚಿವರು, ಶಾಸಕರು, ಕುಟುಂಬವರ್ಗದವರು, ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತಾ ಅಂತ್ಯಕ್ರಿಯೆ ಕಾರ್ಯಕ್ರಮಗಳೆಲ್ಲವೂ ಸುಸೂತ್ರವಾಗಿ ನಡೆಯುವುದಕ್ಕೆ ನೆರವಾದರು.