ಸಾರಾಂಶ
ಶರನ್ನವರಾತ್ರಿ 2ನೇ ದಿನ ಶುಕ್ರವಾರ ಶೂನ್ಯದಿಂದ ಶ್ರೀ ಕ್ಷೇತ್ರವನ್ನು ಸೃಷ್ಟಿಸಿ, ಆತ್ಮಸ್ಥೈರ್ಯದ ಪ್ರತೀಕವಾಗಿರುವ ಶ್ರೀ ರಮಾನಂದ ಗುರೂಜಿ ಅವರನ್ನು ನವಶಕ್ತಿ ವೇದಿಕೆಯಲ್ಲಿ ಶಿಷ್ಯ ಬಳಗದಿಂದ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ 18ನೇ ವರ್ಷದ ಶರನ್ನವರಾತ್ರಿ ಮಹೋತ್ಸವವನ್ನು ಬಹುವಿಶಿಷ್ಟ ರೀತಿಯಲ್ಲಿ ನಡೆಯುತ್ತಿದೆ. 2ನೇ ದಿನ ಶುಕ್ರವಾರ ಶೂನ್ಯದಿಂದ ಶ್ರೀ ಕ್ಷೇತ್ರವನ್ನು ಸೃಷ್ಟಿಸಿ, ಆತ್ಮಸ್ಥೈರ್ಯದ ಪ್ರತೀಕವಾಗಿರುವ ಶ್ರೀ ರಮಾನಂದ ಗುರೂಜಿ ಅವರನ್ನು ನವಶಕ್ತಿ ವೇದಿಕೆಯಲ್ಲಿ ಶಿಷ್ಯ ಬಳಗದಿಂದ ಸನ್ಮಾನಿಸಲಾಯಿತು.ರಾತ್ರಿಯ ರಂಗಪೂಜಾ - ಕಲ್ಪೋಕ್ತ ಪೂಜೆಯ ನಂತರ ಶ್ರೀ ಕ್ಷೇತ್ರದಿಂದ ಗುರೂಜಿಯವರನ್ನು ಚೆಂಡೆ, ಮಂಗಳವಾದ್ಯ, ನೃತ್ಯ, ವೇದಘೋಷಗಳೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು ಮತ್ತು ವಿಶೇಷವಾಗಿ ರಚಿಸಿದ್ದ ಹೂವಿನ ಮಂಟಪದಲ್ಲಿ ಕುಳ್ಳಿರಿಸಿ ಪಾದಪೂಜೆ ನೆರವೇರಿಸಲಾಯಿತು. ಮುತ್ತಿನ ಪೇಟವನ್ನು ತೊಡಿಸಿ, ಗುಲಾಬಿಗಳ ಹಾರದಿಂದ ಅಲಂಕರಿಸಿ, ರೇಷ್ಮೆ ವಸ್ತ್ರಾದಿಗಳ ಉಡುಗೊರೆ ನೀಡಿ, ಚಿನ್ನದ ಉಂಗುರ ತೊಡಿಸಿ, ಧನ್ಯವಾದ ಸಮರ್ಪಿಸಲಾಯಿತು.ಸನ್ಮಾನ ಸ್ವೀಕರಿಸಿದ ಗುರೂಜಿ, ದೇವರನ್ನು ಪ್ರೀತಿಸಿ, ದೇವರು ನಮ್ಮನ್ನು ಪ್ರೀತಿಸುತ್ತಾರೆ. ದೃಢಚಿತ್ತದಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಯಶಸ್ಸು ಸಾಧ್ಯವಾಗುತ್ತದೆ ಎಂದು ಹರಿಸಿದರು.ಈ ಶುಭ ಸಂದರ್ಭದಲ್ಲಿ 18ನೇ ವರ್ಷದ ಶರನ್ನವರಾತ್ರಿಯ ಸವಿನೆನಪಿಗಾಗಿ ಶ್ರೀ ಚಕ್ರಪೀಠ ಸುರಪೂಜಿತೆಗೆ ಅತಿಪ್ರಿಯವೆನಿಸಿದ ಅತಿರಸ ಮಹಾಪ್ರಸಾದವನ್ನು ವಿತರಿಸಲಾಯಿತು. ಕ್ಷೇತ್ರದ ಪ್ರಧಾನ ಪ್ರಸಾದವಾಗಿ ಇನ್ನು ಮುಂದೆ ಭಕ್ತರಿಗೆ ಲಭ್ಯವಿರುತ್ತದೆ.ಯೋಗಗುರು ಸ್ವಸ್ತಿಕ್ ಆಚಾರ್ಯರು ಸಂಖ್ಯೆ 18ರ ಮಹತ್ವವನ್ನು ವಿವರಿಸಿದರು. ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ಕ್ಷೇತ್ರ ನಿರ್ಮಾಣದಲ್ಲಿ 18 ವರ್ಷಗಳ ಪರಿಶ್ರಮ ನೋವುನಲಿವುಗಳನ್ನು ಪ್ರಾಸ್ತಾವಿಸಿದರು.ಕ್ಷೇತ್ರದ ಅರ್ಚಕ ವರ್ಗ, ಪುರೋಹಿತ ವರ್ಗ, ಪರಿಚಾರಿಕ ವರ್ಗ, ಪಾಕಶಾಸ್ತ್ರಜ್ಞರು ಹಾಗೂ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಪೋಷಕರು ಹಾಗೂ ಕ್ಷೇತ್ರದ ಭಕ್ತರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು.