ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ: ಶುಭಾ ಕಲ್ಯಾಣ್‌

| Published : Mar 17 2024, 01:46 AM IST

ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ: ಶುಭಾ ಕಲ್ಯಾಣ್‌
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟಲ್ಲಿ, ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾ ಚುನಾವಣಾಧಿ ಕಾರಿಗಳ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟಲ್ಲಿ, ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಮ್ಮ ಕಚೇರಿಯಲ್ಲಿಂದು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮಾತನಾಡಿದ ಅವರು, 2024 ರ ಲೋಕಸಭಾ ಚುನಾವಣೆಯನ್ನು ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಚುನಾವಣಾ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿ/ಸಿಬ್ಬಂದಿಗಳು ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ನೆಪ ಹೇಳಿ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನಿರ್ಮಿತಿ ಕೇಂದ್ರ, ಲೋಕೋಪಯೋಗಿ ಇಲಾಖೆ, ಪಂಚಾಯತ್‌ ರಾಜ್, ಪಾಲಿಕೆ, ನಗರ ಸ್ಥಳೀಯ ಸಂಸ್ಥೆ ಸೇರಿದಂತೆ ವಿವಿಧ ಇಂಜಿನಿಯರಿಂಗ್ ಇಲಾಖೆಗಳು ಹಾಲಿ ಚಾಲ್ತಿಯಲ್ಲಿರುವ/ ಟೆಂಡರ್ ಕರೆಯಲಿರುವ / ಟೆಂಡರ್ ಕರೆದಿರುವ ಕಾಮಗಾರಿಗಳ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕೂಡಲೇ ಒದಗಿಸಬೇಕೆಂದು ನಿರ್ದೇಶಿಸಿದರು. ನೀತಿ ಸಂಹಿತೆ ಜಾರಿ ಅವಧಿ ಮುಕ್ತಾಯವಾಗುವವರೆಗೂ ಯಾವುದೇ ಟೆಂಡರ್‌ಗಳನ್ನು ಕರೆಯತಕ್ಕದ್ದಲ್ಲ ಹಾಗೂ ಯಾವುದೇ ಹೊಸ ಟೆಂಡರ್ ಆದೇಶಗಳನ್ನು ನೀಡತಕ್ಕದ್ದಲ್ಲ. ಈಗಾಗಲೇ ಕರೆದಿರುವ ಟೆಂಡರ್‌ ಗಳನ್ನು ಸ್ಥಗಿತಗೊಳಿಸಬೇಕು ಹಾಗೂ ಟೆಂಡರ್‌ಗಳನ್ನು ತೆರೆಯತಕ್ಕದ್ದಲ್ಲ. ಕುಡಿಯುವ ನೀರಿನ ಕಾಮಗಾರಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ರಾಜಕೀಯ ಪಕ್ಷಗಳು, ರಾಜಕೀಯ/ಸಾರ್ವಜನಿಕ ಮುಖಂಡರು, ಮತ್ತಿತರರು ಸಂಬಂಧಿಸಿದ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆಯದೆ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅಳವಡಿಸಲಾದ ಬ್ಯಾನರ್ಸ್ , ಪೋಸ್ಟರ್ಸ್‌, ಬಂಟಿಂಗ್ಸ್, ಫ್ಲೆಕ್ಲ್ಸ್‌ಗಳನ್ನು ನಿಯಮಾನುಸಾರ ಕೂಡಲೇ ತೆಗೆದು ಹಾಕಲು ಕ್ರಮಕೈಗೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಸಂಬಂಧಿಸಿದಂತೆ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾದ ಪ್ರಚಾರ ಸಾಮಗ್ರಿಗಳನ್ನು ನಿಯಮಾನುಸಾರ ಕೂಡಲೇ ತೆಗೆದು ಹಾಕಲು ಕ್ರಮ ಕೈಗೊಂಡು ಪ್ರತಿ ದಿನ ನಿಗಧಿತ ನಮೂನೆಯಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಸರ್ಕಾರಿ/ಅರೆ ಸರ್ಕಾರಿ/ ನಿಗಮ/ ಮಂಡಳಿಗಳ ಅಧ್ಯಕ್ಷರು/ಉಪಾಧ್ಯಕ್ಷರು ಸೇರಿದಂತೆ ರಾಜಕೀಯ ಪ್ರತಿನಿಧಿಗಳಿಗೆ ನೀಡಿರುವ ವಾಹನವನ್ನು ಹಾಗೂ ಲೋಕೋಪಯೋಗಿ ಇಲಾಖೆ ಸೇರಿ ಇತರೆ ಸರ್ಕಾರಿ ಪ್ರವಾಸಿ ಮಂದಿರ, ತಪಾಸಣಾ ಮಂದಿರಗಳನ್ನು ವಶಕ್ಕೆ ಪಡೆಯಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಸರ್ಕಾರಿ/ರಾಜಕೀಯ ಜಾಹೀರಾತುಗಳನ್ನು ತೆಗೆಯಬೇಕು ಎಂದು ಹೇಳಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.