ಸಾರಾಂಶ
23, 24ಕ್ಕೆ 22ನೆಯ ಕನ್ನಡ ಸಾಹಿತ್ಯ ಉತ್ಸವ । ಸಾಹಿತಿಗಳು ಭಾಗಿ
ಹಾಸನ: ಸಕಲೇಶಪುರ ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಮಾ.೨೩, ೨೪ ರಂದು ನಡೆಯಲಿರುವ ಹಾಸನ ಜಿಲ್ಲಾ ೨೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಶಾಸಕ ಎಚ್.ಪಿ. ಸ್ವರೂಪ್ ಹಾಗೂ ಸಾಹಿತಿಗಳು ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು.ನಂತರ ಶಾಸಕರು ಮಾಧ್ಯಮದೊಂದಿಗೆ ಮಾತನಾಡಿ, ಸಕಲೇಶಪುರದ ಹೆತ್ತೂರಿನಲ್ಲಿ ೨೨ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತೋಷವಾಗಿದೆ. ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅಪರೂಪವಾಗಿದೆ. ಕಸಾಪ ಅಧ್ಯಕ್ಷ ಎಚ್.ಎಲ್.ಮಲ್ಲೇಶ್ ಗೌಡರ ನೇತೃತ್ವದಲ್ಲಿ ನಡೆಯುತ್ತಿರುವುದು ಸ್ವಾಗತರ್ಹ. ಶಾಸಕನಾಗಿ ಈ ಸಮ್ಮೇಳನಕ್ಕೆ ಸಹಕಾರ ನೀಡುತ್ತೇನೆ. ಗ್ರಾಮೀಣ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಲ್.ಮಲ್ಲೇಶ್ ಗೌಡ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಬೇಕು ಎನ್ನುವುದು ಮೊದಲಿನಿಂದಲೂ ಯೋಜನೆಯಿತ್ತು. ಕಳೆದ ಎರಡು ವರ್ಷವೂ ಕೂಡ ಗ್ರಾಮೀಣ ಭಾಗದಲ್ಲೆ ಸಮ್ಮೇಳನ ನಡೆಸಲಾಗಿದ್ದು, ಈ ಸಮ್ಮೇಳನದ ಪ್ರಚಾರಕ್ಕಾಗಿ ಎಲ್ಲಾ ತಾಲೂಕುಗಳಲ್ಲಿ ಪ್ರಯಾಣ ಬೆಳೆಸುವ ಪ್ರಚಾರದ ರಥಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಚಾಲನೆ ನೀಡಿದ್ದಾರೆ. ಇದು ಹಾಸನ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಸಮ್ಮೇಳನದ ಬಗ್ಗೆ ಅರಿವು ಮೂಡಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಲಿದೆ ಎಂದು ಹೇಳಿದರು.ಸಮ್ಮೇಳನದಾಧ್ಯಕ್ಷೆ ಶೈಲಜಾ ಹಾಸನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್.ಬಿ.ಮದನ್ ಗೌಡ, ಜೆ.ಆರ್. ಕೆಂಚೇಗೌಡ, ಹಿರಿಯ ಕವಯಿತ್ರಿ ಸವಿತಾ ನಾಗಭೂಷಣ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ, ಹಿರಿಯ ಸಾಹಿತಿ, ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನಕುಮಾರ್, ಬಿ.ಆರ್.ಬೊಮ್ಮೇಗೌಡ, ಗೌರವ ಕೋಶಾಧ್ಯಕ್ಷ ಬಿ.ಎನ್.ಜಯರಾಂ, ನಾಗರಾಜ್ ಹೆತ್ತೂರ್, ಶರತ್ ಇದ್ದರು.ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆಶಾಸಕ ಎಚ್.ಪಿ. ಸ್ವರೂಪ್, ಸಾಹಿತಿಗಳು ಹಸಿರು ಬಾವುಟ ಪ್ರದರ್ಶಿಸಿದರು.