ವೈರಮುಡಿ ಉತ್ಸವ, ಮೇಲುಕೋಟೆ ಅಭಿವೃದ್ಧಿಗೆ ಹತ್ತು ಕೋಟಿ ಮಂಜೂರು

| Published : Mar 17 2024, 01:46 AM IST

ವೈರಮುಡಿ ಉತ್ಸವ, ಮೇಲುಕೋಟೆ ಅಭಿವೃದ್ಧಿಗೆ ಹತ್ತು ಕೋಟಿ ಮಂಜೂರು
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ರಾಮಹೋತ್ಸವದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ಸಿದ್ಧತೆ ಮಾಡಲಾಗಿದೆ. ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತೆ, ವೈದ್ಯಕೀಯ ಸೇವೆಗೆ ಹೆಚ್ಚು ಕಾಳಜಿ ವಹಿಸಲಾಗಿದೆ. ಭಕ್ತಸ್ನೇಹಿಯಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಕಳೆದ ಸಲಕ್ಕಿಂತ ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯೊಂದಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ವೈರಮುಡಿ ಉತ್ಸವ ಹಾಗೂ ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ 10 ಕೋಟಿ ರು. ಮಂಜೂರು ಮಾಡಿದ್ದಾರೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಮೇಲುಕೋಟೆಯಲ್ಲಿ ವೈರಮುಡಿ ಜಾತ್ರಾಮಹೋತ್ಸವದ ಸಿದ್ಧತೆಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, 10 ಕೋಟಿ ರು. ಹಣದಲ್ಲಿ 1.50 ಕೋಟಿ ರು.ಗಳನ್ನು ಜಾತ್ರಾ ಮಹೋತ್ಸವವನ್ನು ವ್ಯವಸ್ಥಿತ ಹಾಗೂ ಅರ್ಥಪೂರ್ಣ ಆಚರಣೆಗೆ ಬಳಸಿಕೊಂಡು, ಉಳಿದ 8.50 ಕೋಟಿ ರು ಗಳನ್ನು ಶಾಶ್ವತ ಮೂಲ ಸೌಕರ್ಯಕ್ಕೆ ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಮಾರ್ಗದರ್ಶನದಂತೆ ವೈರಮುಡಿ ಜಾತ್ರಾಮಹೋತ್ಸವಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜು, ಎಸ್ಪಿ ಎನ್. ಯತೀಶ್ ಪರಿಶ್ರಮದಲ್ಲಿ ಅಧಿಕಾರಿಗಳು ಮತ್ತು ದೇವಾಲಯದ ಸಿಬ್ಬಂದಿ ವೈರಮುಡಿ ಬ್ರಹ್ಮೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಮಾರ್ಚ್ 21 ರಂದು ನಡೆಯುವ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವವನ್ನು ಹೆಚ್ಚು ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ಆಚರಿಸಲಾಗುತ್ತಿದೆ. ಶನಿವಾರದಿಂದಲೇ ವಿಶೇಷ ಉತ್ಸವಗಳು ಆರಂಭವಾಗಿವೆ. ಮಾರ್ಚ್ 28ರವರೆಗೆ ಉತ್ಸವ ನಡೆಯಲಿದೆ ಎಂದರು.

ಜಾತ್ರಾಮಹೋತ್ಸವದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ಸಿದ್ಧತೆ ಮಾಡಲಾಗಿದೆ. ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತೆ, ವೈದ್ಯಕೀಯ ಸೇವೆಗೆ ಹೆಚ್ಚು ಕಾಳಜಿ ವಹಿಸಲಾಗಿದೆ. ಭಕ್ತಸ್ನೇಹಿಯಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಕಳೆದ ಸಲಕ್ಕಿಂತ ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯೊಂದಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ವೈರಮುಡಿ ಉತ್ಸವದಂದು ರಾತ್ರಿ ಭಕ್ತರಿಗಾಗಿ ನಾನೇ ಸ್ವತಃ ಖರ್ಚಿನಿಂದ ಪುಳಿಯೋಗರೆ ಹಾಗೂ ಮೊಸರನ್ನ ಪ್ರಸಾದ ಮಾಡಿಸಿ ವಿತರಿಸುವ ವ್ಯವಸ್ಥೆ ಮಾಡಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವೈರಮುಡಿ ಉತ್ಸವ ದರ್ಶನದಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ವಿವಿಧ ಇಲಾಖೆ ಅಧಿಕಾರಿಗಳಿಗೆ ವಹಿಸಿದ ಕಾರ್ಯಗಳನ್ನು ಲೋಪವಿಲ್ಲದಂತೆ ಮಾಡಬೇಕು. ವೈರಮುಡಿಗೆ ಬಂದ ಭಕ್ತರು ಸಂತೃಪ್ತಿಯಿಂದ ದೇವರ ದರ್ಶನ ಪಡೆಯುವ ವ್ಯವಸ್ಥೆ ಮಾಡಬೇಕು ಎಂದರು.

ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ದೇವಾಲಯದವರೆಗೆ ವಯೋವೃದ್ಧ ಭಕ್ತರು ಹೋಗಿಬರಲು ಉಚಿತ ಬಸ್ ಸೌಕರ್ಯ ಕಲ್ಪಿಸಲಾಗಿದೆ. ದೇವಾಲಯದಲ್ಲಿ ಉತ್ಸವಾದಿಗಳನ್ನು ಹೆಚ್ಚಿನ ಭಕ್ತರು ದರ್ಶನ ಮಾಡುವಂತೆ ನಡೆಸಬೇಕು. ವೈರಮುಡಿ ಉತ್ಸವವನ್ನು ರಾತ್ರಿ 8ರಿಂದ ಬೆಳಗಿನ 4 ಗಂಟೆಯವರೆಗೆ ನಡೆಸಲಾಗುತ್ತದೆ. ರಥೋತ್ಸವ, ತೆಪ್ಪೋತ್ಸವ ಹಾಗೂ ಇತರ ಉತ್ಸವಗಳನ್ನೂ ಅಚ್ಚುಕಟ್ಟಾಗಿ ಭಕ್ತರಿಗೆ ಅನುಕೂಲವಾಗುವಂತೆ ನಡೆಸಲಾಗುತ್ತದೆ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ಮಾರುತಿ, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ತಹಸೀಲ್ದಾರ್ ಶ್ರೇಯಸ್, ದೇಗುಲದ ಇಒ ಸಂತೋಷ್, ಇತರ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಗೂ ಮುನ್ನ ಶಾಸಕರು ಜಿಲ್ಲಾಧಿಕಾರಿಗಳು ಉತ್ಸವ ಬೀದಿ ಪಾರ್ಕಿಂಗ್ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಆಕರ್ಷಕ ದೀಪಾಲಂಕಾರ:ಈ ಬಾರಿ ಆಕರ್ಷಕ ಹಾಗೂ ನವೀನ ರೀತಿಯ ದೀಪಾಲಂಕಾರ ಮಾಡಲಾಗಿದೆ. ಕಲ್ಯಾಣೋತ್ಸವ ನಾಗವಲ್ಲಿಯಂದು ಧಾರಾ ಮಂಟಪಕ್ಕೆ ರಥ ಹಾಗೂ ತೆಪ್ಪಮಂಟಪಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ವಸತಿ ಸೌಕರ್ಯ ಪಡೆಯಲು ಸಾಧ್ಯವಾಗದ ಭಕ್ತರಿಗೆ ಮಲಗಲು ವಿಶೇಷ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ದಿನದ 24 ಗಂಟೆ ವಿದ್ಯುತ್ ಕಡಿತವಾಗದಂತೆ ಎಚ್ಚರ ವಹಿಸಲಾಗುತ್ತದೆ. ಬರಗಾಲ ಇರುವ ಕಾರಣ ಅದ್ಧೂರಿ ಆಚರಣೆಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಹೇಳಿದರು.ವೈರಮುಡಿ ಉತ್ಸವಕ್ಕಾಗಿ ಸಕಲ ವ್ಯವಸ್ಥೆ:

ಭಕ್ತರು ವಿವಿಧ ಸ್ಥಳಗಳಿಂದ ವೈರಮುಡಿ ಉತ್ಸವಕ್ಕೆ ಬರಲು 150 ವಿಶೇಷ ಬಸ್ ವ್ಯವಸ್ಥೆ, ನಿರಂತರ ಸ್ವಚ್ಛತೆಗೆ ಪೌರಕಾರ್ಮಿಕರ ನಿಯೋಜನೆ, 9 ಕಡೆ ಬೃಹತ್ ಎಲ್.ಇ.ಡಿ ಪರದೆಗಳ ಮೂಲ ವೈರಮುಡಿ ಉತ್ಸವ ಪ್ರಸಾರ, ಚೆಲುವನಾರಾಯಣನ ಉತ್ಸವಗಳಿಗೆ ವಿಶೇಷ ತೋಮಾಲೆ ಸೇವೆ. ವಿಶೇಷ ಮಂಗಳವಾದ್ಯ ತಂಡ, ವೈರಮುಡಿಯನ್ನು ಮಹಾರಾಜರು ವೀಕ್ಷಿಸುತ್ತಿದ್ದ ಸ್ಥಳದಲ್ಲಿ ಇದೇ ಪ್ರಥಮ ಬಾರಿಗೆ ಪುಷ್ಪಮಂಟಪ ನಿರ್ಮಾಣ ಮಾಡಲಾಗುತ್ತಿದೆ.