ರೈತರು ಬೆಂಬಲ ಬೆಲೆ ಸದುಪಯೋಗ ಪಡೆದುಕೊಳ್ಳಬೇಕು: ತಮ್ಮಯ್ಯ

| Published : Mar 17 2024, 01:46 AM IST

ಸಾರಾಂಶ

ಸಂಕಷ್ಠದಲ್ಲಿರುವ ರೈತರಿಗೆ ಬೆಂಬಲ ಬೆಲೆ ಕೊಟ್ಟು ರಾಗಿ ಹಾಗೂ ಉಂಡೆ ಕೊಬ್ಬರಿ ಖರೀದಿಸುವ ಮೂಲಕ ಸರ್ಕಾರ ನೆರವಿಗೆ ಬರುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಎಪಿಎಂಸಿ ಆವರಣದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೆರೆದ ರಾಗಿ-ಉಂಡೆ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಂಕಷ್ಠದಲ್ಲಿರುವ ರೈತರಿಗೆ ಬೆಂಬಲ ಬೆಲೆ ಕೊಟ್ಟು ರಾಗಿ ಹಾಗೂ ಉಂಡೆ ಕೊಬ್ಬರಿ ಖರೀದಿಸುವ ಮೂಲಕ ಸರ್ಕಾರ ನೆರವಿಗೆ ಬರುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿ ರಾಜ್ಯ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ರಾಗಿ ಮತ್ತು ಉಂಡೆ ಕೊಬ್ಬರಿ ಖರೀದಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ರಾಗಿ ಮಾರಾಟಕ್ಕೆ 1100 ರೈತರು ಹಾಗೂ ಕೊಬ್ಬರಿಗೆ 550 ಮಂದಿ ರೈತರು ನೋಂದಾಯಿಸಿದ್ದಾರೆ. 3846 ರು. ರಾಗಿಗೆ ಹಾಗೂ 13500 ರು. ಬೆಂಬಲ ಬೆಲೆ ಕೊಬ್ಬರಿಗೆ ಸರ್ಕಾರ ನೀಡುತ್ತಿದೆ ಎಂದು ಹೇಳಿದರು. ಈಗಾಗಲೇ ಕಡೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಚಿಕ್ಕಮಗಳೂರು ಕೇಂದ್ರದ ಕೆಲವು ಮಾನದಂಡಗಳ ಅಡಿ ಬರದ ಕಾರಣ ತಾಲೂಕು ಬರಪೀಡಿತವೆಂದು ಘೋಷಣೆ ಆಗಿಲ್ಲ. ಇದು ತಾಂತ್ರಿಕ ಸಮಸ್ಯೆ ಎಂದರು. ಎಲ್ಲದಕ್ಕೂ ಮನುಷ್ಯ ಪ್ರಯತ್ನದ ಜತೆ ದೈವ ಕೃಪೆಯೂ ಇರಬೇಕಾಗುತ್ತದೆ. ಬರಗಾಲ ಬರಲಿ ಎಂದು ಯಾವತ್ತೂ ಬಯಸು ವುದಿಲ್ಲ. ಒಳ್ಳೆ ಮಳೆ, ಬೆಳೆ ಬಂದರೆ ಅದಕ್ಕೆ ಸರಿಯಾದ ರೀತಿಯಲ್ಲಿ ಉತ್ತಮ ಬೆಲೆ ಸಿಕ್ಕಲ್ಲಿ ನಮ್ಮ ರೈತರು ಸರ್ಕಾರದ ಬಳಿ ಕೈಚಾಚುವುದಿಲ್ಲ ಎಂದು ಹೇಳಿದರು. ಈ ಕೇಂದ್ರದಲ್ಲಿ 6538 ಕ್ವಿಂಟಾಲ್ ಕೊಬ್ಬರಿ ಹಾಗೂ 24850 ಕ್ವಿಂಟಾಲ್ ರಾಗಿ ಖರೀದಿಸಲು ಅವಕಾಶವಿದೆ. ಪ್ರತಿ ರೈತರಿಗೆ ಒಂದು ಎಕರೆಗೆ 10 ಕ್ವಿಂಟಾಲ್ ರಾಗಿ ಹಾಗೂ ತೆಂಗು ಬೆಳೆಯುವವರಿಗೆ 6 ಕ್ವಿಂಟಾಲ್ ನಿಗದಿ ಮಾಡಲಾಗಿದೆ ಎಂದ ಅವರು, ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ, ಉಂಡೆ ಕೊಬ್ಬರಿ ಖರೀದಿ ಕೆಲವೇ ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್ ಮಾತನಾಡಿ, ನಮ್ಮ ರೈತರಿಗೆ ಯಾವುದೇ ರೀತಿ ತೊಂದರೆ ಆಗದ ರೀತಿ ಯೋಜನೆ ಜಾರಿ ಮಾಡಬೇಕು. ಕೆಲವರು ಹೆಚ್ಚು ರಾಗಿ, ಕೊಬ್ಬರಿ ಬೆಳೆದವರಿದ್ದಾರೆ ಅವರಿಗೆಲ್ಲ ಅನುಕೂಲವಾಗುವಂತೆ ಸರ್ಕಾರದ ಗಮನಕ್ಕೆ ತಂದು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು. ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ಮಾತನಾಡಿ, ರಾಗಿಗೆ 3846 ರು. ಗಳಾಗಿವೆ. ಪ್ರತಿ ರೈತರು 1 ಎಕರೆಗೆ 10 ಕ್ವಿಂಟಾಲ್‌ನಂತೆ ರಾಗಿ ಮಾರಾಟ ಮಾಡಬಹುದು. 4 ಎಕರೆ ಹೊಂದಿದ್ದರೆ 40 ಕ್ವಿಂಟಾಲ್ ಮಾರಾಟ ಮಾಡಬಹುದು. 10 ಎಕರೆ ಹೊಂದಿದ್ದರೆ 100 ಕ್ವಿಂಟಾಲ್ ಕೊಡಬಹುದು, ಇದು ಸರ್ಕಾರದ ನಿರ್ದೇಶನ. ಫ್ರೂಟ್ ಐಡಿಯಲ್ಲಿ ಜಮೀನಿನ ಮಾಹಿತಿ ದಾಖಲಾಗಿದ್ದರೆ ಅದು ನೋಂದಣಿ ಆಗುತ್ತದೆ. ಬಯೋಮೆಟ್ರಿಕ್ ಮೂಲಕವೂ ಈ ವರ್ಷ ನೋಂದಣಿ ಮಾಡಿಕೊಳ್ಳ ಲಾಗಿದೆ. ಜನವರಿ 1 ರಿಂದಲೇ ನೋಂದಣಿ ಆರಂಭವಾಗಿದ್ದು, ಮಾ.1 ರ ವರೆಗೆ ನೋದಣಿಗೆ ಅವಕಾಶವಿತ್ತು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿರ್ದೇಶಕ ಎಚ್.ಕೆ.ದಿನೇಶ್ ಹೊಸೂರು, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ, ಎಪಿಎಂಸಿ ಕಾರ್ಯದರ್ಶಿ ಅಭಿನಂದನ್ ಇದ್ದರು. 15 ಕೆಸಿಕೆಎಂ 2ಚಿಕ್ಕಮಗಳೂರಿನ ಎಪಿಎಂಸಿ ಆವರಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ರಾಗಿ ಮತ್ತು ಉಂಡೆ ಕೊಬ್ಬರಿ ಖರೀದಿ ಕೇಂದ್ರವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ದಿನೇಶ್‌, ಸುಜಾತ, ಪೂರ್ಣಿಮಾ, ಅಭಿನಂದನ್‌ ಇದ್ದರು.