ಸಾರಾಂಶ
ಧಾರವಾಡ:
ತೀವ್ರ ಕುತೂಹಲ ಕೆರಳಿಸಿದ್ದ ಲೋಕಸಭಾ ಚುನಾವಣೆಯ ದಿನಾಂಕ ಶನಿವಾರ ಘೋಷಣೆಯಾಗಿದೆ. ಧಾರವಾಡ ಲೋಕಸಭಾ ಸ್ಥಾನಕ್ಕೆ 2ನೇ ಹಂತದಲ್ಲಿ ಮೇ 7ರಂದು ಚುನಾವಣೆ ನಡೆಯಲಿದ್ದು, ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ.ಚುನಾವಣೆ ಕುರಿತು ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು, ಕಳೆದ ಹಲವು ದಿನಗಳಿಂದ ಲೋಕಸಭೆ ಚುನಾವಣೆಗೆ ತಯಾರಿ ನಡೆಸಲಾಗಿದ್ದು ಇದೀಗ ಕಾರ್ಯಗತಗೊಳಿಸಲಾಗುವುದು. ಚುನಾವಣೆಗೆ ಏ. 12ರಂದು ಅಧಿಸೂಚನೆ ಹೊರಡಿಸುತ್ತಿದ್ದು, ಅಂದಿನಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. ನಾಮಪತ್ರ ಸಲ್ಲಿಸಲು ಏ. 19 ಕೊನೆಯ ದಿನ. ಏ. 20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ. 22ರ ವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇನ್ನು, ಮೇ 7ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಸಲಾಗುವುದು ಎಂದರು.ಧಾರವಾಡ ಲೋಕಸಭಾ ಸ್ಥಾನಕ್ಕೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಸೇರಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 1791386 ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಈ ಪೈಕಿ 899246 ಪುರುಷ ಹಾಗೂ 892043 ಮಹಿಳೆಯರಿದ್ದಾರೆ. ಈ ಬಾರಿ 31412 ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 20474 ವಿಕಲಚೇತನ ಮತದಾರರು, 15833 ಮತದಾರರು 85 ವರ್ಷ ಮೀರಿದವರು ಇದ್ದಾರೆ. 85 ಅನಿವಾಸಿ ಭಾರತೀಯರೂ ಇದ್ದಾರೆ. ಶೇ. 40ಕ್ಕಿಂತ ಹೆಚ್ಚಿನ ವಿಕಲಚೇತನರು ಹಾಗೂ 85 ವರ್ಷ ಮೀರಿದವರು ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ದಿವ್ಯಪ್ರಭು ತಿಳಿಸಿದರು.1893 ಮತಗಟ್ಟೆ:2014ರ ಲೋಕಸಭೆಯಲ್ಲಿ ಶೇ. 65ರಷ್ಟು, 2019ರಲ್ಲಿ ಶೇ.70.29ರಷ್ಟು ಹಾಗೂ ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಶೇ.73.45ರಷ್ಟು ಮತದಾನವಾಗಿತ್ತು. ಇದೀಗ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುವಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 1893 ಮತಗಟ್ಟೆ ತೆರಯಲಾಗುತ್ತಿದ್ದು, ಮಹಿಳೆಯರಿಗೆ, ವಿಕಲಚೇತನರಿಗೆ ವಿಶೇಷ ಮತದಾನ ಕೇಂದ್ರ ತೆರೆದು ಆಕರ್ಷಿಸಲು ಸಿದ್ಧತೆ ನಡೆದಿದೆ. ಚುನಾವಣೆಯು ಸುಸೂತ್ರವಾಗಿ ನಡೆಯುವಂತೆ ಮಾ. 16ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಜಿಲ್ಲೆಯ ಗಡಿಯಲ್ಲಿ ಸೂಕ್ತ ಭದ್ರತೆ ಹಾಗೂ ಚೆಕ್‌ಪೋಸ್ಟ್ ಮೂಲಕ ಅಕ್ರಮ ನಡೆಯದಂತೆ ಎಚ್ಚರ ವಹಿಸಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ 24 ಚೆಕ್ಟ್ ಪೋಸ್ಟ್ ಹಾಕಲಾಗಿದ್ದು ಅಲ್ಲಿ ಪೊಲೀಸ್, ಅಬಕಾರಿ ಸೇರಿದಂತೆ ನಾಲ್ವರು ಅಧಿಕಾರಿಗಳು ಇರಲಿದ್ದಾರೆ ಎಂದರು.ದೂರಿಗೆ 1950ಕ್ಕೆ ಕರೆ ಮಾಡಿ:
ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಬ್ಬರು ಸಹಾಯಕ ಚುನಾವಣಾ ಆಯುಕ್ತರು ಇದ್ದು, ವಿವಿಧ ತಂಡಗಳನ್ನು ನಿರ್ವಹಿಸಲಿದ್ದಾರೆ. ಚುನಾವಣೆ ನಡೆಸಲು ಎಂಟು ಸಾವಿರ ಸಿಬ್ಬಂದಿ ತರಬೇತಿಗೊಂಡಿದ್ದು, ಇನ್ಮುಂದೆ ಕಾರ್ಯಾಚರಣೆಗೆ ಇಳಿಯಲಿದ್ದಾರೆ. ಚುನಾವಣಾ ಅಕ್ರಮಗಳು ಸಾರ್ವಜನಿಕರ ಗಮನಕ್ಕೆ ಬಂದರೆ 1950 ಸಹಾಯವಾಣಿಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಚುನಾವಣೆಗೆ ತೆಗೆದುಕೊಂಡಿರುವ ಪೊಲೀಸ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಜಿಪಂ ಸಿಇಒ ಸ್ವರೂಪ ಟಿ.ಕೆ. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಇದ್ದರು.
ಜಾತ್ರೆ, ಮದುವೆಗೆ ತೊಂದರೆ ಇಲ್ಲಚುನಾವಣೆಯ ಸಮಯದಲ್ಲಿ ಜಾತ್ರೆ, ಮದುವೆಗಳು ಸಾಮಾನ್ಯ. ಜಾತ್ರೆ, ಮದುವೆ ಹಾಗೂ ಇಂತಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಯದಂತೆ, ರಾಜಕೀಯ ವ್ಯಕ್ತಿಗಳನ್ನು ಕರೆಯಿಸುವುದು ಹಾಗೂ ಮತದಾರರಿಗೆ ಆಮೀಷ ಒಡ್ಡುವ ಕೆಲಸಗಳಾಗದಂತೆ ಎಚ್ಚರಿಕೆ ವಹಿಸಬೇಕು. ಚುನಾವಣೆಯ ವಿಷಯವಾಗಿ ಪರವಾನಗಿ ಪಡೆಯಬೇಕೆನ್ನುವವರು ಸುವಿಧಾ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು.