ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಮಾಹಿತಿ ಹರಿಬಿಟ್ಟರೆ ಶಿಸ್ತುಕ್ರಮ

| Published : Mar 20 2024, 01:15 AM IST / Updated: Mar 20 2024, 01:16 AM IST

ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಮಾಹಿತಿ ಹರಿಬಿಟ್ಟರೆ ಶಿಸ್ತುಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಗೋಕಾಕ: ಗೋಕಾಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ತಮಗೆ ಮಾಹಿತಿ ನೀಡಿ ಸಹಕರಿಸಬೇಕು. ಯಾರಾದರೂ ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೇ ಅಂತವರ ವಿರುದ್ಧ ಚುನಾವಣಾ ಆಯೋಗ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ರಾಜಶ್ರೀ ಜೈನಾಪೂರ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಗೋಕಾಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ತಮಗೆ ಮಾಹಿತಿ ನೀಡಿ ಸಹಕರಿಸಬೇಕು. ಯಾರಾದರೂ ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೇ ಅಂತವರ ವಿರುದ್ಧ ಚುನಾವಣಾ ಆಯೋಗ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ರಾಜಶ್ರೀ ಜೈನಾಪೂರ ಎಚ್ಚರಿಕೆ ನೀಡಿದರು.

ನಗರದ ತಾಲೂಕಾಡಳಿತ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಾ.16ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಕ್ಷೇತ್ರದ ಯದ್ದಲಗುಡ್ಡ, ಮಾಲದಿನ್ನಿ ಕ್ರಾಸ್, ಕೊಣ್ಣೂರು ರೈಲು ನಿಲ್ದಾಣ, ಹತ್ತಿರ ಹಾಗೂ ಘಟಪ್ರಭಾದ ಜೆಜಿಕೋ ಆಸ್ಪತ್ರೆಯ ಹತ್ತಿರ ಒಟ್ಟು 4 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಅಕ್ರಮ ಹಣ, ಮದ್ಯ ಸೇರಿದಂತೆ ಮತದಾರರಿಗೆ ಉಡುಗೊರೆ ನೀಡುವದನ್ನು ತಡೆಯುವ ನಿಟ್ಟಿನಲ್ಲಿ ಸಿಬ್ಬಂದಿ ದಿನದ 24ಗಂಟೆ ಕಾರ್ಯ ನಿರ್ವಹಿಸಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೋತ್ತರ ಸಮೀಕ್ಷೆ ಮಾಡುವುದು ಹಾಗೂ ಚುನಾವಣಾ ಅಕ್ರಮಗಳ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ ಎಂದರು.

ಗೋಕಾಕ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಚುನಾವಣಾಧಿಕಾರಿಗಳ ಕಚೇರಿಯನ್ನು ತಹಸೀಲ್ದಾರ್‌ ಕಾರ್ಯಾಲಯದಲ್ಲೇ ತೆರೆಯಲಾಗಿದ್ದು ರಾಜಕೀಯ ಸಭೆ ಸಮಾರಂಭಗಳನ್ನು ಆಯೋಜನೆ ಮಾಡುವವರು 48 ಗಂಟೆಗಳೊಳಗಾಗಿ ಸುವಿಧಾ ಆಪ್ ಮೂಲಕ ಅರ್ಜಿ ಸಲ್ಲಿಸಬಹುದು. ದೇವಸ್ಥಾನ, ಚರ್ಚ್‌ ಮತ್ತು ಮಸೀದಿಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದರು.

ಸಿ.ವಿಜಿಲ್ ಆಪ್ ಮೂಲಕ ದೂರು ನೀಡಿ:

ಗೋಕಾಕ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 290 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕ್ಷೇತ್ರದಲ್ಲಿ 1,26,414 ಪುರುಷ, 1,30,478 ಮಹಿಳಾ ಮತ್ತು 19 ತೃತೀಯ ಲಿಂಗ ಮತದಾರರಿದ್ದು ಒಟ್ಟು 2,56,911 ಮತದಾರರಿದ್ದಾರೆ. ಅಲ್ಲದೇ, 1755 ಪುರುಷ, 22 ಮಹಿಳೆ ಸೇರಿ ಒಟ್ಟು 1777 ಸೇವಾ ಮತದಾರರಿದ್ದಾರೆ. ಮಾದರಿ ನೀತಿ ಸಂಹಿತೆ ಪಾಲನೆ ಕುರಿತು 24 ಸೆಕ್ಟೆರ್ ಅಧಿಕಾರಿಗಳು, 12 ಎಫ್‌ಎಸ್‌ಟಿ ತಂಡಗಳು, 4 ವಿಎಸ್‌ಟಿ ತಂಡಗಳನ್ನು ನಿಯೋಜಿಸಲಾಗಿದೆ. 85ಕ್ಕಿಂತ ಹೆಚ್ಚು ವಯಸ್ಸಿನ 995 ಮತದಾರರು, ವಿಕಲಚೇತನ 2902 ಮತದಾರರನ್ನು ಗುರುತಿಸಲಾಗಿದೆ. ಇನ್ನುಳಿದಂತೆ ಬೇರೆ ಯಾರಾದರೂ ವಕಲಚೇತನರಿದ್ದಲ್ಲಿ ಹತ್ತಿರದ ಬಿಎಲ್‌ಒಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು. ಅಂತವರಿಗೆ ಅಂಚೆ ಮತಪತ್ರದ ಮೂಲಕ ಮನೆಗೆ ತೆರಳಿ ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ದೂರುಗಳಿದ್ದರೆ ಸಿ.ವಿಜಿಲ್ ತಂತ್ರಾಂಶ ಬಳಸಿ ಹಾಗೂ ದೂ.08332225073ಗೆ ಕರೆ ಮಾಡಿ ದೂರು ಮತ್ತು ಸಲಹೆಗಳನ್ನು ನೀಡುವಂತೆ ತಿಳಿಸಿದರು.

ಗೋಷ್ಠಿಯಲ್ಲಿ ಗೋಕಾಕ ತಹಸೀಲ್ದಾರ್ ಡಾ.ಮೋಹನ ಭಸ್ಮೆ ಸೇರಿದಂತೆ ಸಿಬ್ಬಂದಿ ಇದ್ದರು.