ವಿದ್ಯಾರ್ಥಿಯ ಯಶಸ್ಸಿಗೆ ಶಿಸ್ತು ಸಂಯಮ ಮುಖ್ಯ

| Published : Mar 24 2024, 01:35 AM IST

ಸಾರಾಂಶ

ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಅದರಲ್ಲಿ ಯಶಸ್ಸು ಸಾಧಿಸಬೇಕಾದರರೆ ಶಿಸ್ತು, ಸಂಯಮ ಅತಿ ಮುಖ್ಯ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ರೋಗಲಕ್ಷಣಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಿ.ನಟರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಅದರಲ್ಲಿ ಯಶಸ್ಸು ಸಾಧಿಸಬೇಕಾದರರೆ ಶಿಸ್ತು, ಸಂಯಮ ಅತಿ ಮುಖ್ಯ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ರೋಗಲಕ್ಷಣಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಿ.ನಟರಾಜು ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿನಿಯರ ಸಂಘದ ವತಿಯಿಂದ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಗುರಿ, ಯಶಸ್ಸಿನ ಕಡೆ ಸಾಗಬೇಕಾದರೆ ಮೊದಲು ನಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದರು.

ನಮಗೆ ಮಾರ್ಗದರ್ಶನ ಮಾಡಿ ನಮ್ಮ ಯಶಸ್ಸಿಗೆ ಕಾರಣರಾದ ನಮ್ಮ ತಂದೆ-ತಾಯಿ, ಗುರುಹಿರಿಯರು ಶಿಕ್ಷಣ ಸಂಸ್ಥೆಗಳು, ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದರು. ಶ್ರದ್ಧೆಯಿಂದ ಪಾಠ ಪ್ರವಚನಗಳನ್ನು ಕೇಳಬೇಕು. ನಮ್ಮ ಏಳಿಗೆಗೆ ಕಾರಣರಾದವನ್ನು ನೆನೆದುಕೊಳ್ಳಬೇಕು. ಏನಾದರೂ ಸಾಧನೆ ಮಾಡಬೇಕಾದರೆ ನಿರಂತರವಾಗಿ ಪರಿಶ್ರಮ ಪಡಬೇಕು ಎಂದರು.ಒಂದು ಉತ್ತಮ ಕನಸನ್ನು ಕಂಡು ಅದನ್ನು ನನಸು ಮಾಡಬೇಕೆಂದರೆ ನಿರಂತರ ಪರಿಶ್ರಮ ಅತಿ ಮುಖ್ಯ ಈ ನಿಟ್ಟಿನಲ್ಲಿ ಉತ್ತಮ ಸ್ನೇಹಿತರ ಜೊತೆಗೂಡಿ, ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ವ್ಯಕ್ತಿತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳು ಉತ್ತಮ ಜೊತೆಗಿನ ಒಡನಾಟ, ವ್ಯಕ್ತಿತ್ವ, ಒಂದು ನಿರ್ದಿಷ್ಟವಾದ ಗುರಿಯನ್ನು ಹೊಂದಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಮಹಾರಾಣಿ ಕಾಲೇಜಿನ ಸಂಸ್ಕೃತ ವಿಶ್ರಾಂತ ಪ್ರಾಧ್ಯಾಪಕಿ ಡಾ.ಡಿ. ಶೀಲಾಕುಮಾರಿ ಮಾತನಾಡಿ, ವಿದ್ಯೆ ವಿನಯ ಕಲಿಸುತ್ತದೆ, ವಿನಯ ಯೋಗ್ಯತೆಯನ್ನು ಹೆಚ್ಚಿಸುತ್ತದೆ, ಆದ್ದರಿಂದ ವಿದ್ಯೆ ಕಲಿಯುವಾಗ ಶ್ರದ್ಧೆ ಇರಬೇಕು, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ, ಇವುಗಳನ್ನು ಹೊರಹಾಕಲು ಶಿಕ್ಷಣ ಸಂಸ್ಥೆಗಳು ಮುಖ್ಯ, ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ನಿರ್ಮಲ, ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಐಕ್ಯೂಎಸಿ ಸಂಚಾಲಕಿ ಬಿ.ರೇವಣಾಂಬ ಉಪಸ್ಥಿತರಿದ್ದರು.

ಇದೇ ವೇಳೆ ಪದವಿ ಮತ್ತು ಸ್ನಾತಕೋತ್ತರದಲ್ಲಿ ಚಿನ್ನದ ಪದಕ ಹಾಗೂ ಹೆಚ್ಚಿನ ಅಂಕ ಗಳಿಸಿದ್ದ ಕಾಲೇಜಿನ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ, ಎಂ.ಸೌಮ್ಯ ಸ್ವಾಗತಿಸಿ, ಸಿ.ರೂಪಶ್ರೀ ಪ್ರಸ್ತಾವಿಸಿ, ಎಲ್.ಎನ್.ಶುಭ, ನಿರೂಪಿಸಿದರು, ಜೆ.ಡಯಾನ ವಂದಿಸಿದರು.