ಸ್ಕೌಟ್ಸ್, ಗೈಡ್ಸ್‌ನಿಂದ ಮಕ್ಕಳಲ್ಲಿ ಶಿಸ್ತು, ಸಂಯಮ: ಎಸ್.ವಿ.ಪಬ್ಲಿಕ್ ಶಾಲೆಯ ಬಿ.ಜಿ.ಗಿರೀಶ್

| Published : Jun 25 2024, 12:35 AM IST

ಸ್ಕೌಟ್ಸ್, ಗೈಡ್ಸ್‌ನಿಂದ ಮಕ್ಕಳಲ್ಲಿ ಶಿಸ್ತು, ಸಂಯಮ: ಎಸ್.ವಿ.ಪಬ್ಲಿಕ್ ಶಾಲೆಯ ಬಿ.ಜಿ.ಗಿರೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಶಿಸ್ತು, ಸಂಯಮ ಬೆಳೆಸುವುದರ ಜತೆಗೆ ಸಾಮಾಜಿಕ ಸೇವಾ ಮನೋಭಾವವನ್ನು ಬೆಳೆಸುತ್ತದೆ ಎಂದು ಎಸ್.ವಿ.ಪಬ್ಲಿಕ್ ಶಾಲೆಯ ಮುಖ್ಯಸ್ಥ ಬಿ.ಜಿ.ಗಿರೀಶ್ ಅಭಿಪ್ರಾಯಪಟ್ಟರು. ಆಲೂರಿನಲ್ಲಿ ಸ್ಕೌಟ್ಸ್, ಗೈಡ್ಸ್ ಪರಿಚಯ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದರು.

ಪರಿಚಯ ಶಿಬಿರ

ಆಲೂರು: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಶಿಸ್ತು, ಸಂಯಮ ಬೆಳೆಸುವುದರ ಜತೆಗೆ ಸಾಮಾಜಿಕ ಸೇವಾ ಮನೋಭಾವವನ್ನು ಬೆಳೆಸುತ್ತದೆ ಎಂದು ಎಸ್.ವಿ.ಪಬ್ಲಿಕ್ ಶಾಲೆಯ ಮುಖ್ಯಸ್ಥ ಬಿ.ಜಿ.ಗಿರೀಶ್ ಅಭಿಪ್ರಾಯಪಟ್ಟರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ವತಿಯಿಂದ ಹಮ್ಮಿಕೊಂಡಿದ್ದ ಸ್ಕೌಟ್ಸ್, ಗೈಡ್ಸ್ ಪರಿಚಯ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ನಿತ್ಯ ಕಲಿಕೆಯಲ್ಲಿ ತೊಡಗಿ ಕೇವಲ ಅಂಕ ಗಳಿಕೆಯ ಹಿಂದೆ ಸಾಗುವ ಇಂದಿನ ದಿನದಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪ್ರಗತಿ ಹೊಂದಿದಾಗ ಮಾತ್ರ ಮಗುವಿನ ಸರ್ವಾಂಗೀಣ ಬೆಳವಣಿಗೆ ಸಾಧ್ಯ. ಸ್ಕೌಟ್ಸ್, ಗೈಡ್ಸ್ ಮಕ್ಕಳಲ್ಲಿ ಶಾಲಾ ಶಿಕ್ಷಣದ ಜತೆಗೆ ಬದುಕಿಗೆ ಅಗತ್ಯವಿರುವ ಜೀವನ ಕೌಶಲಗಳನ್ನು ವೃದ್ಧಿಸುತ್ತದೆ. ಶಾಲಾ ವಾತಾವರಣವೂ ಸಹ ಶಿಸ್ತು ಮತ್ತು ಉಲ್ಲಾಸಭರಿತವಾಗಿರಲು ಈ ಚಳವಳಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ.ಪ್ರಿಯಾಂಕ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ಹುಟ್ಟಿದ್ದೇ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ. ೧೯೦೭ ರಲ್ಲಿ ನಿವೃತ್ತ ಸೇನಾಧಿಕಾರಿ ಲಾರ್ಡ್ ಬೇಡನ್ ಪೊವೆಲ್ ಮಾರ್ಗದರ್ಶನದಲ್ಲಿ ಕೇವಲ ೨೦ ಮಕ್ಕಳಿಂದ ಪ್ರಾರಂಭವಾದ ಈ ಸಂಸ್ಥೆ ಪ್ರಸ್ತುತ ೨೦೦ಕ್ಕೂ ಹೆಚ್ಚಿನ ದೇಶಗಳಲ್ಲಿ ಇಂದು ಕೋಟ್ಯಂತರ ಮಕ್ಕಳು ಧರ್ಮಾತೀತವಾದ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತ ಜೀವನಕ್ಕೆ ಅಗತ್ಯವಿರುವ ಕೌಶಲಗಳನ್ನು ಕಲಿಸುತ್ತಿದೆ ಎಂದು ತಿಳಿಸಿದರು.

ಹಿರಿಯ ಗೈಡರ್ ಎಚ್.ಜಿ.ಕಾಂಚನಮಾಲ ಮಾತನಾಡಿ, ಮಕ್ಕಳಲ್ಲಿ ಸಚ್ಛಾರಿತ್ರ್ಯ, ಸನ್ನಡತೆ, ಸನ್ನುಡಿ, ಸದಾಚಾರ, ಸದ್ಭಾವನೆ, ಸತ್‌ಚಿಂತನೆ ಬೆಳೆಸಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಭಾವನಾತ್ಮಕವಾಗಿ, ಕೌಟುಂಬಿಕವಾಗಿ ಸದೃಢಗೊಳಿಸಿ ಸಜ್ಜನಿಕೆಯನ್ನು ಬೆಳೆಸುವ ಗುರಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮಾಡುತ್ತದೆ. ಆದ್ದರಿಂದ ಎಲ್ಲಾ ಮಕ್ಕಳು ಈ ಚಳವಳಿಯಲ್ಲಿ ಭಾಗವಹಿಬೇಕು ಎಂದರು.

ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್, ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ, ಪ್ರಾಂಶುಪಾಲೆ ಎನ್.ಎಸ್.ನಳಿನಾ, ಆಡಳಿತಾಧಿಕಾರಿ ಸುನಿಲ್, ಸ್ಕೌಟ್ ಮಾಸ್ಟರ್ ಬಿ.ಸಿ.ದೇವರಾಜ್, ಶಿಕ್ಷಕಿ ರೋಸಿ ಮುಂತಾದವರು ಇದ್ದರು.