ಕ್ರೀಡೆಯಿಂದ ಶಿಸ್ತು: ಕಿಶೋರ್ ಕುಮಾರ್

| Published : Nov 07 2025, 03:00 AM IST

ಸಾರಾಂಶ

ದೊಂಡೇರಂಗಡಿ ಸಮೀಪದ ಕುಕ್ಕುಜೆ ಪ್ರೌಢಶಾಲೆಯಲ್ಲಿ ತಾಲೂಕುಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಕ್ರೀಡೆ ಶಿಸ್ತಿನ ಪಾಠ ಕಲಿಸುತ್ತದೆ. ಕ್ರೀಡೆಯಲ್ಲಿ ಅಡಗಿರುವ ಶಿಸ್ತು ದೇಶಸೇವೆಗೆ ಭದ್ರ ಬುನಾದಿಯಾಗುತ್ತದೆ. ಪ್ರತಿಯೊಬ್ಬ ಕ್ರೀಡಾಳುವೂ ಶಿಸ್ತಿನ ಸಿಪಾಯಿಯಾಗಿ ಸಮಾಜ ನಿರ್ಮಾಣದಲ್ಲಿ ಭಾಗಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಹೇಳಿದರು.

ಅವರು ದೊಂಡೇರಂಗಡಿ ಸಮೀಪದ ಕುಕ್ಕುಜೆ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ತಾಲೂಕುಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಕುಗ್ರಾಮದ ಶಾಲೆಯಿಂದಲೂ ಪ್ರತಿಭೆಗಳು ದೇಶಕ್ಕೆ ಕೀರ್ತಿ ತಂದುಕೊಟ್ಟಿವೆ. ಕುಕ್ಕುಜೆ ಸರ್ಕಾರಿ ಶಾಲೆ ಅದಕ್ಕೆ ಮಾದರಿ. ಪಠ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯ ಸಂಪೂರ್ಣ ವ್ಯಕ್ತಿತ್ವ ಅಭಿವೃದ್ಧಿಗೆ ಮುಖ್ಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ದ್ವಜಾರೋಹಣ ನೆರವೇರಿಸಿದರು.

ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರವಿಚಂದ್ರ ಕಾರಂತ, ಹೆಬ್ರಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಶಂಕರ ಸೇರಿಗಾರ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ್ ಹೆಗ್ಡೆ ವಹಿಸಿ, ಕ್ರೀಡಾಳುಗಳಿಗೆ ಶುಭಾಶಯ ಕೋರಿದರು. ಉದ್ಯಮಿ ಪುರಂದರ ಪೂಜಾರಿ, ಯೋಗೀಶ್ ಮಲ್ಯ, ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಗಜಾನನ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ಸಭೆಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಣ ಸಂಘ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಪ್ರಾಥಮಿಕ ದೈಹಿಕ ಶಿಕ್ಷಣ ಸಂಘ ಅಧ್ಯಕ್ಷ ವಸಂತ, ರಾಜ್ಯ ದೈಹಿಕ ಶಿಕ್ಷಣ ಸಂಘ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ, ರೇಶ್ಮಾ ರಾಣಿ, ಬಾಬುರಾಯ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

ಕ್ಯಾಂಪ್ಕೋ ನಿರ್ವಾಹಕ ದಯಾನಂದ ಹೆಗ್ಡೆ ಸ್ವಾಗತಿಸಿದರು. ಸುರೇಶ್ ಮರಕಲ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ನಾಯಕ್ ವಂದಿಸಿದರು.