ಕಲಬುರಗಿ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

| Published : Mar 25 2024, 12:51 AM IST

ಸಾರಾಂಶ

ಲೊಕಸಭೆ ಚುನಾವಣೆಗೆ ದಿನಾಂಕ ಪ್ರಕಟಗೊಂಡಿರುವ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಡಾ. ಉಮೇಶ ಜಾಧವ ಅವರು ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದಲ್ಲದೇ ಚಿತ್ತಾಪುರ ವಾಡಿ ಮಂಡಲದ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಲೊಕಸಭೆ ಚುನಾವಣೆಗೆ ದಿನಾಂಕ ಪ್ರಕಟಗೊಂಡಿರುವ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಡಾ. ಉಮೇಶ ಜಾಧವ ಅವರು ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದಲ್ಲದೇ ಚಿತ್ತಾಪುರ ವಾಡಿ ಮಂಡಲದ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಸಿದರು. ಅದರಲ್ಲಿ ಕಾರ್ಯಕರ್ತರ ಅಸಮಾಧಾನ ಸ್ಪೋಟಗೊಂಡಿದೆ.

ಪಟ್ಟಣದ ಬಜಾಜ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೂತ್‌ ಪ್ರಮುಖರ ಸಭೆಯಲ್ಲಿ ಮೊದಲು ಸುದ್ದಿಗೋಷ್ಠಿ ನಡೆಯಿತು. ಸುದ್ದಿಗೋಷ್ಠಿ ಮುಗಿಯುತ್ತಲೇ ಜಿಲ್ಲಾ ಹಾಲು ಪ್ರಕೋಷ್ಟದ ಜಿಲ್ಲಾಧ್ಯಕ್ಷ ಅಯ್ಯಪ್ಪ ರಾಮತೀರ್ಥ ಅವರು ಪಕ್ಷದಲ್ಲಿ ಹಿರಿಯರಿಗೆ ಕಡೆಗಣನೆ ಮಾಡಲಾಗುತ್ತಿದೆ. ನಾಯಕರು ಪಕ್ಷಪಾತ ಮಾಡುತ್ತಿದ್ದಾರೆ ಎಂದು ಏರಿದ ಧ್ವನಿಯಲ್ಲಿ ಸಂಸದರ ಎದುರಿನಲ್ಲಿ ಪ್ರಶ್ನಿಸುತ್ತಿದ್ದಂತೆ ಮುಖಂಡರಾದ ಶರಣಗೌಡ ಭೀಮನಳ್ಳಿ ಅವರು ಅವರನ್ನು ಸಮಾಧಾನ ಮಾಡಲು ಬಂದಾಗ ಅಯ್ಯಪ್ಪ ರಾಮತೀರ್ಥ ಅವರು ನೀವು ಮಧ್ಯೆ ಬರಬೇಡಿ ನಾನು ಸಂಸದರಿಗೆ ಪ್ರಶ್ನಿಸುತ್ತಿದ್ದೇನೆ.

ನನಗೆ ಪಕ್ಷದಲ್ಲಿ ಕಡೆಗಣನೆ ಮಾಡುತ್ತಿದ್ದಾರೆ. ನಿಷ್ಟಾವಂತರಿಗೆ ಪಕ್ಷದಲ್ಲಿ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನುಳಿದ ನಾಯಕರು ಅವರನ್ನು ತಡೆಯಲು ಪ್ರಯತ್ನಿಸಿದಾಗ ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟ ಹಂತಕ್ಕೆ ತಲುಪಿದ್ದರಿಂದ ಕಾರ್ಯಕರ್ತರೆಲ್ಲರೂ ಗೊಂದಲಕ್ಕೆ ಒಳಗಾದರೂ. ಅಷ್ಟರಲ್ಲಿ ಸಂಸದರು ಹಾಗೂ ತಾಲೂಕಿನ ಚುನಾವಣೆ ಉಸ್ತುವಾರಿ ಶರಣಪ್ಪ ತಳವಾರ ಪರಿಸ್ಥಿತಿಯನ್ನು ಸಮಾಧಾನಪಡಿಸಬೇಕಾಯಿತು. ಈ ಘಟನೆಯಿಂದ ಸಂಸದ ಡಾ. ಉಮೇಶ ಜಾಧವ ತೀವ್ರ ಮುಜುಗರ ಅನುಭವಿಸಬೇಕಾಯಿತು.