ಸಾರಾಂಶ
ಉಡುಪಿ : ಯಕ್ಷಗಾನ ಕಲಾರಂಗದ, ಯಕ್ಷನಿಧಿಯ ವೃತ್ತಿ ಕಲಾವಿದರಿಗೆ ಕಳೆದ ಎರಡು ದಶಕಗಳಿಂದ ಕೆನರಾ ಬಸ್ ಮಾಲಕರ ಸಂಘವು ನೀಡುತ್ತಾ ಬಂದ ಶೇ. 50 ರಿಯಾಯತಿ ದರದ ಬಸ್‍ಪಾಸ್ ವಿತರಣೆ ಐವೈಸಿ ಸಭಾಭವನದಲ್ಲಿ ನಡೆಯಿತು. 30 ಮೇಳಗಳ ಸುಮಾರು 600 ಕಲಾವಿದರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಸಂಸ್ಥೆಯ ಉಪಾಧ್ಯಕ್ಷರೂ, ಬಹುಮೇಳಗಳ ಯಜಮಾನರೂ ಆದ ಪಿ. ಕಿಶನ್ ಹೆಗ್ಡೆ, ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಅವರು ಧರ್ಮಸ್ಥಳ, ಮಂದಾರ್ತಿ ಮೇಳಗಳ ಕಲಾವಿದರುಗಳಾದ ಧರ್ಮಸ್ಥಳ ಚಂದ್ರಶೇಖರ, ಬಿ. ಮಹಾಬಲ ನಾಯ್ಕ್ ಹಾಗೂ ಆನಂದ ಕನ್ನಾರು ಇವರಿಗೆ ಸಾಂಕೇತಿಕವಾಗಿ ವಿತರಿಸಿದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಬಸ್‍ಮಾಲಕರ ಸಂಘದ ಸಹಕಾರ ಸ್ಮರಿಸಿಕೊಂಡು, ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾರಾಯಣ ಎಂ. ಹೆಗಡೆ, ವಿಜಯಕುಮಾರ್ ಮುದ್ರಾಡಿ, ಗಣೇಶ್ ಬ್ರಹ್ಮಾವರ ಹಾಗೂ ಕಿಶೋರ್ ಸಿ. ಉದ್ಯಾವರ ಇದ್ದರು.
ಸಾಂತ್ವನ ನಿಧಿ ಹಸ್ತಾಂತರ:
14 ದಿನಗಳ ಹಿಂದೆ ಅಗಲಿದ ಕಲಾವಿದ ವಸಂತ ಭಟ್ ಇವರ ವೈಕುಂಠ ಸಮಾರಾಧನೆಯಂದು ಭಾನುವಾರ ಚಿಕ್ಕಮಗಳೂರು ಜಿಲ್ಲೆಯ ಹಳುವಳ್ಳಿಗೆ ತೆರಳಿ ಅವರ ಪತ್ನಿ ವಾಣಿ ಅವರಿಗೆ ಸಾಂತ್ವನನಿಧಿಯಾಗಿ 50,000 ರು.ಗಳ ಚೆಕ್‌ನ್ನು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಸ್ತಾಂತರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ ಕಲಾವಿದರಾದ ಹಳುವಳ್ಳಿ ಗಣೇಶ ಭಟ್, ಗುತ್ಯಮ್ಮ ಮೇಳದ ಭಾಗವತ ನಾಗೇಶ್ ನಾಗರಕೊಡಿಗೆ ಮತ್ತು ವಸಂತ ಭಟ್ಟರ ಈರ್ವರು ಪುತ್ರಿಯರು ಇದ್ದರು.