ಸಾರಾಂಶ
ಹಳಿಯಾಳ: ತಾಲೂಕಿನಲ್ಲಿರುವ 13 ಸಹಕಾರಿ ಸಂಘಗಳು ಮತ್ತು ಸ್ಥಳೀಯ ಕೆಡಿಸಿಸಿ ಬ್ಯಾಂಕು ರೈತರಿಗೆ ಮತ್ತು ಗ್ರಾಹಕರಿಗೆ ಸಾಲ ನೀಡುವಲ್ಲಿ ಅನ್ಯಾಯವೆಸಗುತ್ತಿದ್ದು, ಗ್ರಾಹಕರಿಗೆ ತಮ್ಮ ಸಾಲ ಹಾಗೂ ಠೇವಣಿಯ ಸಮರ್ಪಕ ಮಾಹಿತಿಯನ್ನು ನೀಡದೇ ವಂಚಿಸುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಮುಂದಾಳತ್ವದಲ್ಲಿ ಶುಕ್ರವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಅರ್ಬನ್ ಬ್ಯಾಂಕ್ ವೃತ್ತದಲ್ಲಿರುವ ಕೆಡಿಸಿಸಿ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ ಕಾಂಗ್ರೆಸ್ ಮುಖಂಡರು ಬ್ಯಾಂಕ್ ಆಡಳಿತ ವ್ಯವಸ್ಥೆ ಹಾಗೂ ಬ್ಯಾಂಕಿನ ಮಾಜಿ ಅಧ್ಯಕ್ಷರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ಮುಂದಾಳತ್ವ ವಹಿಸಿದ ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವೆಕರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಸಹಕಾರ ಸಂಘಗಳು ತಾರತಮ್ಯ ಮಾಡುವುದನ್ನು ನಿಲ್ಲಿಸಬೇಕು. ಕೂಡಲೇ ಅಗತ್ಯವಿರುವ ರೈತರಿಗೆ ಸಾಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಹಾಗೂ ತಾಪಂ ಮಾಜಿ ಅಧ್ಯಕ್ಷ ದೇಮಾಣಿ ಶಿರೋಜಿ ಮಾತನಾಡಿ, ಪ್ರತಿವರ್ಷ ಆರ್ಥಿಕ ವರ್ಷದ ಕೊನೆಯಲ್ಲಿ ಹೊಸ ಸಾಲ, ಹಳೆ ಸಾಲ ಖಾತೆಯನ್ನು ಪುನರ್ ಪರಿಶೀಲನೆಯ ಹೆಸರಿನಲ್ಲಿ ಸೊಸೈಟಿಗಳು ರೈತರಿಂದ ಹಗಲುದರೋಡೆಯನ್ನು ನಡೆಸುತ್ತಿವೆ ಎಂದು ಆರೋಪಿಸಿದರು.ಕಾಂಗ್ರೆಸ್ ಮುಖಂಡರಾದ ಕೈತಾನ ಬಾರಬೋಜ, ಉಮೇಶ ಬೊಳಶೆಟ್ಟಿ, ಅಜರ್ ಬಸರಿಕಟ್ಟಿ, ಫಯಾಜ್ರ್ ಶೇಖ್, ಸುವರ್ಣ ಮಾದರ, ರವಿ ತೋರಣಗಟ್ಟಿ, ಸಂಜು ಮಿಶಾಳೆ, ಎಚ್.ಬಿ. ಪರಶುರಾಮ, ಅನಿಲ ಚವ್ಹಾಣ, ಸುರೇಶ ವಗ್ರಾಯಿ, ಪ್ರಭಾಕರ ಗಜಾಕೋಶ, ಅನ್ವರ್ ಪುಂಗಿ ಹಾಗೂ ಗ್ರಾಮೀಣ ಭಾಗದ ಹಲವಾರು ರೈತರು ಮತ್ತು ಸೊಸೈಟಿಯ ಮತ್ತು ಕೆಡಿಸಿಸಿ ಬ್ಯಾಂಕ್ ಗ್ರಾಹಕರು ಇದ್ದರು.