ಬರ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ: ಪ್ರತಿಭಟನೆ

| Published : May 24 2024, 12:46 AM IST

ಬರ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ: ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಭೀಮಾ ಮತ್ತು ಅಮರ್ಜಾ ಕಾಲುವೆಗಳು ಹಾಯ್ದಿರುವ ಜಮೀನಿನ ಮತ್ತು ಇನ್ನುಳಿದ ರೈತರಿಗೂ ಬೆಳೆ ಪರಿಹಾರ ನೀಡಬೇಕು. ಪರಿಹಾರ ಹಂಚಿಕೆಯಲ್ಲಿ ತಾರತಮ್ಯವಾಗಿದ್ದು, ಅದನ್ನು ಸರಿಪಡಿಸಬೇಕು.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ತಾಲೂಕಿನಲ್ಲಿ ಭೀಮಾ ಮತ್ತು ಅಮರ್ಜಾ ಕಾಲುವೆಗಳು ಹಾಯ್ದಿರುವ ಜಮೀನಿನ ಮತ್ತು ಇನ್ನುಳಿದ ರೈತರಿಗೂ ಬೆಳೆ ಪರಿಹಾರ ನೀಡಬೇಕು. ಪರಿಹಾರ ಹಂಚಿಕೆಯಲ್ಲಿ ತಾರತಮ್ಯವಾಗಿದ್ದು, ಅದನ್ನು ಸರಿಪಡಿಸಬೇಕು’ ಎಂದು ಜಿಲ್ಲಾ ಮತ್ತು ತಾಲೂಕು ಕಬ್ಬು ಬೆಳೆಗಾರ ಸಂಘ ಹಾಗೂ ರೈತರು ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಮೇಶ ಹೂಗಾರ ಮಾತನಾಡಿ, ತಾಲೂಕಿನಲ್ಲಿ ನಿರ್ಮಾಣವಾಗಿರುವ ಭೀಮಾನದಿ ಕಾಲುವೆ ಹೆಸರಿಗೆ ಮಾತ್ರ ಕಾಲುವೆಯಾಗಿದೆ.ನೀರು ಬರುವುದಿಲ್ಲ.ದಾಖಲೆಗಳಲ್ಲಿ ಮಾತ್ರ ಕಾಲುವೆಯಿದ್ದು, ನೀರು ಹರಿದು, ರೈತರು ಬೆಳೆ ಬೆಳೆಯುತ್ತಿದ್ದಾರೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ.ಇದು ತಮ್ಮ ಅನುಕೂಲಕ್ಕಾಗಿ ಮತ್ತು ನೌಕರಿ ಉಳಿಸಿಕೊಳ್ಳುವುದಕ್ಕಾಗಿ ತಪ್ಪಾದ ಮಾಹಿತಿಯನ್ನು ಸರ್ಕಾರಕ್ಕೆ ನೀಡುತ್ತಾರೆ. ಒಂದು ದಿನವೂ ಕಾಲುವೆಯಿಂದ ರೈತರ ಹೊಲಗಳಿಗೆ ನೀರು ಹರಿದಿಲ್ಲ. ಹೀಗಾಗಿ ರೈತರ ಕಬ್ಬು, ತೊಗರಿ, ಹತ್ತಿ ಎಲ್ಲವೂ ಹಾಳಾಗಿ ಹೋಗಿದೆ. ಅದಕ್ಕಾಗಿ ಕಾಲುವೆಗಳ ಸೌಲಭ್ಯ ಪಡೆದ ರೈತರಿಗೂ ಬೆಳೆ ಪರಿಹಾರ ನೀಡಬೇಕು.ಬೇಕಾದರೆ ರಾಜ್ಯದ ಉನ್ನತ ಅಧಿಕಾರಿಗಳು ಕಾಲುವೆಗೆ ಬಂದು ಭೇಟಿ ಕೊಟ್ಟು ಪರಿಶೀಲನೆ ಮಾಡಬೇಕು. ಎಲ್ಲ ರೈತರಿಗೂ ಸಮನಾಗಿ ಪರಿಹಾರ ಒದಗಿಸಬೇಕು. ರೈತರು ಜಮೀನಿನಲ್ಲಿ ಬೆಳೆಯ ಆಧಾರದ ಮೇಲೆ ಪರಿಹಾರದ ಹಣವನ್ನು ಮಂಜೂರು ಮಾಡಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳು ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಲಕ್ಷ್ಮೀಪುತ್ರ ಡಾಂಗೆ, ಮಳೇಂದ್ರ ಡಾಂಗೆ,ಸುರೇಶ ತೇಲಿ,ಗಂಗುಬಾಯಿ ಅಳ್ಳಗಿ, ಭಾಗಣ್ಣ ಕುಂಬಾರ,ಮಲ್ಲನಗೌಡ ಪಾಟೀಲ,ಅನ್ನಪೂರ್ಣ ಡಾಂಗೆ, ಈರಣ್ಣಾ ದೊಡ್ಡಮನಿ, ಬಸವರಾಜ ಮ್ಯಾಳೇಸಿ, ಶಿರಾಜ ಅಫಜಲ, ಮೈಲಾರಿ ದೊಡ್ಡಮನಿ, ಇಲಿಯಾಸ ಅಫಜಲ, ಶರಣಗೌಡ ಮಾಲಿಪಾಟೀಲ, ಕಂಟೆಪ್ಪ ಹಂದಿಗನೂರ ಇತರರಿದ್ದರು.