ಸಾರಾಂಶ
ಹೊದಲ ಗ್ರಾಪಂ ಕಾರ್ಯಾಲಯದ ಎದುರು ಗ್ರಾಪಂ ಸದಸ್ಯ ವಿನಾಯಕ ತುಪ್ಪದಮನೆ ಉಪವಾಸ ಸತ್ಯಾಗ್ರಹ ನಡೆಸಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇದ್ದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಹೊದಲ-ಅರಳಾಪುರ ಗ್ರಾಪಂ ವ್ಯಾಪ್ತಿಯಿಂದ 200ಕ್ಕೂ ಹೆಚ್ಚು ನಿವೇಶನ ರಹಿತರಿಂದ ಅರ್ಜಿ ಸಲ್ಲಿಕೆಯಾಗಿದ್ದರೂ ಪ್ರದಾನಮಂತ್ರಿ ಆವಾಜ್ ಯೋಜನೆಯಲ್ಲಿ ಕೇವಲ ಒಂದೇ ಒಂದು ಮನೆಯನ್ನು ನೀಡುವ ಮೂಲಕ ಶಾಸಕ ಆರಗ ಜ್ಞಾನೇಂದ್ರ ತಾರತಮ್ಯ ನೀತಿ ತಾಳಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಹಾಗೂ ಹೊದಲ ಅರಳಾಪುರ ಗ್ರಾಪಂ ಸದಸ್ಯ ವಿನಾಯಕ ತುಪ್ಪದಮನೆ ಆರೋಪಿಸಿದರು.ಬುಧವಾರ ಹೊದಲ ಗ್ರಾಪಂ ಕಚೇರಿ ಎದುರು ಉಪವಾಸ ಧರಣಿ ಸತ್ಯಾಗ್ರಹ ನಡೆಸಿ ಮಾತನಾಡಿ, ಕ್ಷೇತ್ರದ ಶಾಸಕರಾಗಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ತಾಲೂಕಿನ ಎಲ್ಲಾ 38 ಗ್ರಾಪಂಗಳ ಅರ್ಹ ಫಲಾನುಭವಿಗಳಿಗೆ ಸಮಾನವಾಗಿ ವಿತರಣೆಯಾಗುವಂತೆ ಕಾರ್ಯನಿರ್ವಹಿಸಬೇಕು ಎಂದೂ ಆಗ್ರಹಿಸಿದರು.
ವಸತಿ ಯೋಜನೆಗೆ ಶಾಸಕರೇ ಮುಖ್ಯಸ್ಥರಾಗಿದ್ದು, ಬಡವರಿಗೆ ಸಿಗಬೇಕಾದ ಸವಲತ್ತುಗಳ ವಿತರಣೆಯಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದರೆ ಶಾಸಕರೇ ಸರಿಪಡಿಸಬೇಕಿದೆ. ಮನೆಗಳ ವಿತರಣೆಯಲ್ಲಿ ಆಗಿರುವ ತಾರತಮ್ಯ ನೀತಿಯನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಶಾಸಕರ ವಿರುದ್ಧ ತಾಪಂ ಎದುರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದೂ ಹೇಳಿದರು.ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ವಕ್ತಾರರಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಲ್ಲ ವಿಚಾರಗಳಲ್ಲೂ ರಾಜಕೀಯ ದೃಷ್ಟಿಯಿಂದಲೇ ತೀರ್ಮಾನ ಕೈಗೊಳ್ಳುವ ಶಾಸಕ ಆರಗ ಜ್ಞಾನೇಂದ್ರರ ಪಕ್ಷಪಾತ ಧೋರಣೆಯಿಂದಾಗಿ ಬಿಜೆಪಿಯವರನ್ನು ಹೊರತು ಪಡಿಸಿ ಅರ್ಹ ಫಲಾನುಭವಿಗಳು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಶಾಸಕರ ಈ ಧೋರಣೆ ಖಂಡಿಸಿ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ತೀರ್ಥಹಳ್ಳಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಭಾಂಡ್ಯ-ಕುಕ್ಕೆ ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಗ್ರಾಪಂ ಚುನಾಯಿತ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಯು.ಡಿ.ವೆಂಕಟೇಶ್, ಜಿಲ್ಲಾ ಒಕ್ಕೂಟದ ಸದಸ್ಯ ಭುಜಂಗಶೆಟ್ಟಿ, ತಾಲೂಕು ಒಕ್ಕೂಟದ ಸದಸ್ಯ ಹೆಬ್ಬುಲಿಗೆ ಉಮೇಶ್, ಕಾನುಕೊಪ್ಪ ಮಂಜುನಾಥ್, ಬಾಳೇಹಳ್ಳಿ ಪ್ರಭಾಕರ್, ನಿಶ್ಚಿತಾ, ಸತೀಶ್ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.