ಸಾರಾಂಶ
ಕಡೂರು ಪಟ್ಟಣದಲ್ಲಿ ಮೆಟ್ರಿಕ್ ಪೂರ್ವ್ ವಿದ್ಯಾರ್ಥಿ ನಿಲಯ ಉದ್ಘಾಟನೆ
ಕನ್ನಡಪ್ರಭ ವಾರ್ತೆ,ಕಡೂರುಜಿಲ್ಲಾ ಕೇಂದ್ರವಾಗುವ ಎಲ್ಲ ಅರ್ಹತೆ ಕಡೂರು ಪಟ್ಟಣಕ್ಕಿದ್ದರೂ ಹೆಚ್ಚಿನ ಪ್ರಮಾಣದ ಸರ್ಕಾರಿ ಸವಲತ್ತುಗಳು ಮಲೆನಾಡಿನ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ನೀಡುವ ಕಾರಣ ಕಡೂರು ತಾಲೂಕಿನ ಒಟ್ಟಾರೆ ಅಭಿವೃದ್ಧಿ ಕಾರ್ಯಗಳಿಗೆ ಮುಳುವಾಗಿದೆ ಎಂದು ಶಾಸಕ ಕೆ.ಎಸ್. ಆನಂದ್ ಗಂಭೀರ ಆರೋಪ ಮಾಡಿದರು. ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಬುಧವಾರ ಸ್ಥಳಾಂತರಗೊಂಡ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಹೆಸರಿಗೆ ಮಲೆನಾಡು ಜಿಲ್ಲೆಗೆ ಸೇರಿದ ಬಯಲು ಪ್ರದೇಶದ ಕಡೂರಿನಲ್ಲಿ ಶಿಕ್ಷಣ, ಕೈಗಾರಿಕೆ , ತಾಂತ್ರಿಕ ಶಿಕ್ಷಣ ಎಲ್ಲದಕ್ಕೂ ವಿಫುಲ ಅವಕಾಶವಿದೆ. ಆದರೂ ಜಿಲ್ಲೆಗೆ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು, ಹಾಲು ಒಕ್ಕೂಟ ಅಥವಾ ಇನ್ಯಾವುದೇ ಮಹತ್ವದ ಕೊಡುಗೆ ಮಂಜೂರಾದರೆ ಎಲ್ಲವೂ ಚಿಕ್ಕಮಗಳೂರಿನಲ್ಲೇ ಆಗಬೇಕೆನ್ನುವ ಸ್ವಾರ್ಥ ಧೋರಣೆಯಿಂದ ಕಡೂರನ್ನು ಕಡೆಗಣಿಸಲಾಗುತ್ತಿದೆ. ಬಹುಶಃ ಕಡೂರು ಚಿಕ್ಕಮಗಳೂರು ಜಿಲ್ಲೆ ಯಲ್ಲಿಲ್ಲದಿದ್ದರೆ ಅಭಿವೃದ್ಧಿಯಲ್ಲಿ ಈ ಹೊತ್ತಿಗೆ ತುಮಕೂರನ್ನು ಮೀರಿಸುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದರು.
ಕಡೂರು ಮಲತಾಯಿ ಧೋರಣೆಗೊಳಗಾಗಿದೆ. ಇನ್ನು ಮುಂದಾದರೂ ಈ ಭಾವನೆ ದೂರಾಗಬೇಕು. ಇಲ್ಲವಾದರೆ ಕಡೂರು ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಹೋರಾಟಕ್ಕೆ ಮುನ್ನುಡಿ ಬರೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೆ ಈ ಹಿಂದೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಮಂಜೂರಾಯಿತು. ಅದರ ಪ್ರಗತಿ ಯಾವ ಹಂತದಲ್ಲಿದೆ? ಸಮರ್ಪಕ ಜಾಗ ದೊರೆತಿದೆಯೇ? ಗುಡ್ಡ ಗಾಡು, ಮಲೆನಾಡು ಪ್ರದೇಶದಲ್ಲಿ ವಿದ್ಯಾರ್ಥಿಗಳು ಹೋಗಲು ಬಹುಶ ಕಷ್ಟವಾಗುತ್ತದೆ ಎಂದರು.
ತಾಲೂಕಿನ ಕುವೆಂಪು ವಿ.ವಿ.ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿ ನಮ್ಮ ಕರ್ತವ್ಯ. ಅಲ್ಲಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದ್ದೇನೆ. ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಅಗತ್ಯ ವಾದ ಎಲ್ಲ ಸೌಕರ್ಯ ಕಲ್ಪಿಸಲು ಸೂಚಿಸಿದ್ದೇನೆ. ಈ ಆವರಣ ಶೈಕ್ಷಣಿಕ ಮತ್ತು ತಂತ್ರಜ್ಞಾನದ ಕೇಂದ್ರ ಆಗಬೇಕೆಂಬುದು ನನ್ನ ಆಶಯ. ಇಲ್ಲಿ ಒಂದು ಇಂಜಿನಿ ಯರಿಂಗ್ ಕಾಲೇಜು ಆರಂಭವಾದರೆ ಶೈಕ್ಷಣಿಕವಾಗಿ ದೊಡ್ಡ ಕೊಡುಗೆಯಾಗುತ್ತದೆ ಎಂದ ಅವರು ಪಾಲಿಟೆಕ್ನಿಕ್ ಉದ್ಘಾಟನೆಗೆ ಉನ್ನತ ಶಿಕ್ಷಣ ಸಚಿವರನ್ನು ಆಹ್ವಾನಿಸಲು ಮನವಿ ಸಲ್ಲಿಸಲಾಗುವುದು. ಜಿಲ್ಲೆಗೆ ಮಂಜೂರಾದ ಹಾಲು ಒಕ್ಕೂಟ ಕಡೂರಿನಲ್ಲಿಯೇ ಸ್ಥಾಪನೆ ಯಾಗಬೇಕೆಂಬುದು ನಮ್ಮ ಒತ್ತಾಸೆ. ಒಟ್ಟಾರೆ ಕಡೂರು ಶೈಕ್ಷಣಿಕ, ಕೈಗಾರಿಕೆ ಮತ್ತಿತರೆ ರಂಗಗಳಲ್ಲಿ ಎತ್ತರಕ್ಕೇರಬೇಕೆಂಬುದು ನನ್ನ ಕನಸು ಎಂದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸೋಮಶೇಖರ್ ಮಾತನಾಡಿ, ಅತೀ ಹೆಚ್ಚು ವಿದ್ಯಾರ್ಥಿ ನಿಲಯ ಗಳಿರುವ ಕಡೂರು ತಾಲೂಕಿನಲ್ಲಿ 2.28 ಕೋಟಿ ರು.ಹಾಸ್ಟೆಲ್ ದುರಸ್ತಿ ಮತ್ತಿತರ ಕಾರ್ಯಗಳಿಗೆ ಶಾಸಕರು ಹಣ ಮಂಜೂರು ಮಾಡಿಸಿದ್ದು. ಹಳೆಯ ಕಟ್ಟಡದಲ್ಲಿದ್ದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವನ್ನು ತಾತ್ಕಾಲಿಕವಾಗಿ ಇಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದರು.
ಡಿಪ್ಲಮೋ ಕಾಲೇಜಿನ ಪ್ರಾಂಶುಪಾಲ ಮುರಳೀಧರ್ ಮಾತನಾಡಿ ನೂತನ ವಿದ್ಯಾರ್ಥಿ ನಿಲಯವನ್ನು ಬಿಸಿಎಂ ಇಲಾಖೆಗೆ ಹಸ್ತಾಂತರಿಸಲಾಗಿದೆ. ಪಾಲಿಟೆಕ್ನಿಕ್ ಕಟ್ಟಡ ನಿರ್ಮಾಣದಲ್ಲಿ ಕೆಲ ತಾಂತ್ರಿಕ ಅಡಚಣೆಗಳಿದ್ದು, ಅವುಗಳ ನಿವಾರಣೆಗೆ ಶಾಸಕರ ಗಮನಕ್ಕೆ ತಂದಿದ್ದೇವೆ. ವಿಶಾಲವಾಗಿರುವ ಪಾಲಿಟೆಕ್ನಿಕ್ ಜಾಗದಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ಶಾಸಕರು ಸೂಚಿಸಿದ್ದಾರೆ ಎಂದರು.ಹಿಂದುಳಿದ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿ ಮಂಜುನಾಥ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಚ್.ಡಿ. ರೇವಣ್ಣ, ನಿಲಯ ಪಾಲಕರಾದ ದೇವರಾಜ್, ಅನಿಲ್, ಡಿ.ಮಂಜಪ್ಪ, ಮಂಜಪ್ಪ, ಲಕ್ಷ್ಮಯ್ಯ, ರವಿಕುಮಾರ್, ಶ್ರೀನಿವಾಸ್, ನಿಸಾರ್, ಮಮತ, ಸರಸ್ವತಿ, ಕವಿತಾ, ರಮ್ಯ ಮತ್ತು ವಿದ್ಯಾರ್ಥಿಗಳು ಇದ್ದರು.
-- ಬಾಕ್ಸ್ ಸುದ್ದಿಗೆ--ಕಡೂರು ಪ್ರತ್ಯೇಕ ಜಿಲ್ಲೆಯಾಗಿಸಲು ಮುಂದಾಗುವೆ
ಶೈಕ್ಷಣಿಕ ಸವಲತ್ತುಗಳನ್ನು ಕಡೂರಿಗೆ ನೀಡಿದರೆ ಅಗತ್ಯವಾದಷ್ಟು ಜಾಗ ನೀಡಲು ಸಿದ್ದವಿದ್ಧೇವೆ. ಅಭಿವೃದ್ಧಿ ದೃಷ್ಟಿಯಿಂದ ಕಡೂರು ತಾಲೂಕಿನ ರಸ್ತೆ , ರೈಲ್ವೆ ಸಂಪರ್ಕ ವ್ಯವಸ್ಥೆ ಇಡೀ ಜಿಲ್ಲೆಯಲ್ಲಿಯೇ ಅತ್ಯುತ್ತಮವಾಗಿದೆ. ಜಿಲ್ಲೆಗೆ ಮಂಜೂರಾಗುವ ಯೋಜನೆಗಳನ್ನು ಕಡೂರಿನಲ್ಲಿ ಅನುಷ್ಟಾನ ಗೊಳಿಸಿ. ಇಲ್ಲವೆ ಈ ಜಿಲ್ಲೆಯಿಂದ ಕೈಬಿಟ್ಟು ಕಡೂರನ್ನೇ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲು ಮುಂದಾಗಬೇಕು ಎಂದು ಶಾಸಕ ಕೆ ಎಸ್ ಆನಂದ್ ಸರ್ಕಾರಕ್ಕೆ ಒತ್ತಾಯಿಸಿದರು. 20ಕೆಕೆಡಿಯು1.ಕಡೂರು ಪಟ್ಟಣದ ಪಾಲಿಟೆಕ್ನಿಕ್ ವಿದ್ಯಾರ್ಥಿ ನಿಲಯವನ್ನು ಬಿಸಿಎಂ ಇಲಾಖೆಗೆ ತಾತ್ಕಾಲಿಕವಾಗಿ ಹಸ್ತಾಂತರಿಸಿದ ನೂತನ ಕಟ್ಟಡವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು.ಮಂಜುನಾಥ್,ಮುರಳಿಧರ್ ಇದ್ದರು.