ಬೆಳೆ ವಿಮೆ ಪರಿಹಾರ ಬಿಡುಗಡೆ ತಾರತಮ್ಯ: ಚಿಕ್ಕಣ್ಣ ಆರೋಪ

| Published : May 02 2024, 12:17 AM IST

ಬೆಳೆ ವಿಮೆ ಪರಿಹಾರ ಬಿಡುಗಡೆ ತಾರತಮ್ಯ: ಚಿಕ್ಕಣ್ಣ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರೈತ ಸಂಘದಿಂದ ಮೇ 6ಕ್ಕೆ ಚಳ್ಳಕೆರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆಗೆ ನಿರ್ಣಯ

ಕನ್ನಡಪ್ರಭ ವಾರ್ತೆ ಪರಶುರಾಂಪುರ

ಸರ್ಕಾರ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆ ಮಾಡಿದ್ದು, ತಾರತಮ್ಯದಿಂದ ಕೂಡಿದೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಣ ಆಪಾದಿಸಿದ್ದಾರೆ.

ಇಲ್ಲಿನ ರೈತರ ತೋಟದಲ್ಲಿ ಬುಧವಾರ ಆಯೋಜಿಸಿದ್ದ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 2023-24ನೇ ಸಾಲಿನ ಬೆಳೆ ವಿಮೆ ವಿತರಣೆ ಬಗ್ಗೆ ಪರಶುರಾಂಪುರ ಹೋಬಳಿ ಹಾಗೂ ತಾಲೂಕಿನ ಜನರಿಗೆ ಮಾಡಿರುವ ತಾರತಮ್ಯ ಖಂಡಿಸಿ ರೈತ ಸಂಘದಿಂದ ಮೇ 6ರಂದು ಚಳಕೆರೆ ತಾಲೂಕು ಕಚೇರಿ ಮುಂದೆ ಹೋರಾಟ ಮಾಡುವುದಕ್ಕೆ ನಿರ್ಣಯಿಸಲಾಯಿತು ಎಂದು ತಿಳಿಸಿದರು.

ಚಳ್ಳಕೆರೆ ತಾಲೂಕು ಭೌಗೋಳಿಕವಾಗಿ ಅತ್ಯಂತ ಬರಪೀಡಿತ ಪ್ರದೇಶ. ವಾಡಿಕೆಗಿಂತಲೂ ಕಡಿಮೆ ಮಳೆ ಆಗಿರುವುದು ಕಂಡುಬಂದಿದೆ. ಆದರೂ ಬೆಳೆ ವಿಮೆ ಯೋಜನೆ ಪರಿಹಾರ ಅವೈಜ್ಞಾನಿಕವಾಗಿ ಘೋಷಣೆ ಮಾಡಲಾಗಿದೆ. ಗ್ರಾಮ ಲೆಕ್ಕಾಧಿಕಾರಿ, ಕೃಷಿ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ರೈತನಿಗೆ ಬೆಳೆ ವಿಮೆ ಪರಿಹಾರ ಸರಿಯಾಗಿ ಸಿಕ್ಕಿಲ್ಲ. ಆದರೆ ಬೀಳು ಬಿಟ್ಟಿರುವ ರೈತನಿಗೆ ಹಣ ಬಂದಿದೆ. ಇದರಿಂದ ರೈತರಿಗೆ ಮೋಸವಾಗಿದೆ ಎಂದು ಆಪಾದಿಸಿದರು.

40 ಗ್ರಾಮ ಪಂಚಾಯಿತಿಗಳ ರೈತರಿಗೆ ಸಮಾನ ಬೆಳೆ ವಿಮೆ, ಪರಿಹಾರ ವಿತರಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ರೈತಸಂಘದ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್ ಮಾತನಾಡಿ, ಹವಾಮಾನ ವೈಪರೀತ್ಯದಿಂದ ವಾರ್ಷಿಕ ವಾಡಿಕೆ ಮಳೆಯೂ ಬರುತ್ತಿಲ್ಲ. ಇದರಿಂದ ಬೆಳೆಗಳು ರೈತರಿಗೆ ದಕ್ಕುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಬೆಳೆ ವಿಮೆ ಆರ್ಥಿಕ ಭದ್ರತೆ ಒದಗಿಸುತ್ತದೆ ಎಂದರು.

ಪ್ರತಿ ವರ್ಷವೂ ರೈತರು ಬೆಳೆ ವಿಮೆ ಕಟ್ಟುತ್ತಿದ್ದಾರೆ. ಆದರೆ ಸರ್ಕಾರ ಬರಿ ಒಂದು ವರ್ಷ ಪರಿಗಣಿಸಿ ಬೆಳೆ ವಿಮೆ ಪರಿಹಾರ ನೀಡುತ್ತಿದೆ. ಕೂಡಲೇ ಕಂದಾಯ ಇಲಾಖೆ ಮತ್ತು ವಿಮಾ ಕಂಪನಿ ಅಧಿಕಾರಿಗಳು ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಈ ಸಭೆಯಲ್ಲಿ ಶಾಂತಣ್ಣ, ನವೀನ ಗೌಡ, ಜಮಪಣ್ಣ, ಪ್ರಕಾಶ, ಹನುಮಂತರಾಯಪ್ಪ, ಖಾದರ್ ಭಾಷಾ, ಅಣ್ಣಪ್ಪ, ರಾಜು, ನಾರಾಯಣಪ್ಪ, ರಾಜಣ್ಣ ಪರಮೇಶ್ವರಪ್ಪ ತಿಪ್ಪೇಸ್ವಾಮಿ ಮಂಜುನಾಥ ಹಾಜರಿದ್ದರು.