ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಲ್ಲಿ ತಾರತಮ್ಯ: ಜಿಪಂ ಸಿಇಒಗೆ ದೂರು

| Published : Sep 23 2024, 01:19 AM IST

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಲ್ಲಿ ತಾರತಮ್ಯ: ಜಿಪಂ ಸಿಇಒಗೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಐದು ಪಂಚಾಯ್ತಿಗಳನ್ನು ಶ್ರೇಣೀಕರಿಸಿ ಒಂದು ಪಂಚಾಯ್ತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲು ಅಂಕಗಳನ್ನು ನೀಡುವಾಗ ಅನರ್ಹ ಪಂಚಾಯ್ತಿಗಳಿಗೆ ಹೆಚ್ಚು ಅಂಕ ನೀಡಲಾಗುತ್ತಿದೆ. ಉತ್ತಮ ಕಾರ್ಯದಕ್ಷತೆ ಹೊಂದಿರುವ ಪಂಚಾಯ್ತಿಗಳಿಗೆ ಕಡಿಮೆ ಅಂಕ ನೀಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಒತ್ತಡ, ಪ್ರಭಾವವಿದೆ ಎಂದು ಆಪಾದನೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜನರಿಗೆ ಅತ್ಯವಶ್ಯಕವಾದ ಮೂಲಸೌಕರ್ಯ, ಸೇವೆಗಳನ್ನು ಒದಗಿಸುವ ಗ್ರಾಮ ಪಂಚಾಯ್ತಿಗಳ ಕಾರ್ಯನಿರ್ವಹಣೆಯನ್ನು ಗುರುತಿಸಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡುವಲ್ಲಿ ತಾಲೂಕು ಪಂಚಾಯ್ತಿ ಅಧಿಕಾರಿಗಳು ತಾರತಮ್ಯವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿವೆ.

ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಐದು ಪಂಚಾಯ್ತಿಗಳನ್ನು ಶ್ರೇಣೀಕರಿಸಿ ಒಂದು ಪಂಚಾಯ್ತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲು ಅಂಕಗಳನ್ನು ನೀಡುವಾಗ ಅನರ್ಹ ಪಂಚಾಯ್ತಿಗಳಿಗೆ ಹೆಚ್ಚು ಅಂಕ ನೀಡಲಾಗುತ್ತಿದೆ. ಉತ್ತಮ ಕಾರ್ಯದಕ್ಷತೆ ಹೊಂದಿರುವ ಪಂಚಾಯ್ತಿಗಳಿಗೆ ಕಡಿಮೆ ಅಂಕ ನೀಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಒತ್ತಡ, ಪ್ರಭಾವವಿದೆ ಎಂದು ಆಪಾದನೆ ವ್ಯಕ್ತವಾಗಿದೆ.

ಪಂಚಾಯ್ತಿ ವ್ಯಾಪ್ತಿಯ ಜನರ ಜೀವನಮಟ್ಟ, ಹಣಕಾಸಿನ ವಿಷಯಗಳು, ಮೂಲಸೌಕರ್ಯಗಳು, ಉತ್ತಮ ಆಡಳಿತ, ಗ್ರಾಪಂ ಸೇವೆಗಳು, ಗ್ರಾಪಂ ಅಭಿವೃದ್ಧಿ ಚಟುವಟಿಕೆಗಳನ್ನು ಗುರುತಿಸಿ ಪ್ರಶ್ನೆಗಳ ಸಂಖ್ಯೆಗಳಿಗೆ ಅನುಗುಣವಾಗಿ ಅಂಕ ನೀಡಲಾಗುತ್ತದೆ. ಈ ಹಂತದಲ್ಲಿ ತಾಲೂಕು ಪಂಚಾಯ್ತಿ ಅಧಿಕಾರಿಗಳು ಗ್ರಾಪಂ ಮಟ್ಟದಲ್ಲಿ ಶ್ರಮವಹಿಸಿ ಅಭಿವೃದ್ಧಿಪಡಿಸಿರುವ ಪಂಚಾಯ್ತಿಗಳಿಗೆ ಅನ್ಯಾಯವೆಸಗಿದ್ದಾರೆ ಎಂದು ಪಂಚಾಯ್ತಿ ಮಟ್ಟದ ಜನಪ್ರತಿನಿಧಿಗಳು ನೇರವಾಗಿಯೇ ದೂಷಣೆ ಮಾಡಿದ್ದಾರೆ.

ಸಕಲ ಸೌಲಭ್ಯಗಳನ್ನು ಹೊಂದಿರುವ ಪಂಚಾಯ್ತಿಗಳನ್ನು ಗಾಂಧಿ ಗ್ರಾಮ ಪುರಸ್ಕಾರದಿಂದ ವಂಚಿಸುವ ಪ್ರಯತ್ನ ನಡೆಸಲಾಗುತ್ತಿದೆ. ಪಂಚಾಯ್ತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವಾಗ ಪಾರದರ್ಶಕತೆ ಕಾಪಾಡದೆ ರಾಜಕೀಯಕ್ಕೆ ಮಣೆ ಹಾಕಲಾಗುತ್ತಿದೆ. ಸ್ವತಃ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳೇ ಸ್ಥಳ ಪರಿಶೀಲನೆ ನಡೆಸಿ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಹೋದ ಬಳಿಕ ಅಂಕ ನೀಡಿಕೆಯಲ್ಲಿ ತಾರತಮ್ಯ ಮಾಡುತ್ತಿರುವುದು ಉತ್ತಮ ಪಂಚಾಯ್ತಿಗಳಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ಅವರಿಗೆ ದೂರು ನೀಡಿದ್ದಾರೆ.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವುದಕ್ಕೆ ಅಗತ್ಯವಿರುವ ಎಲ್ಲಾ ಅಂಶಗಳನ್ನು ಪೂರೈಸಿ ಅಭಿವೃದ್ಧಿಪಡಿಸಿದ್ದೇವೆ. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಜೊತೆಗೂಡಿಸಿಕೊಂಡು ಶ್ರಮವಹಿಸಿ ಸೌಕರ್ಯ ಕಲ್ಪಿಸಿಕೊಡಲಾಗಿದೆ. ಶಾಲಾ ಕಾಂಪೌಂಡ್‌, ಶೌಚಾಲಯ, ಕುಡಿಯುವ ನೀರು, ನೈರ್ಮಲ್ಯ, ಬೀದಿದೀಪ, ಡಿಜಿಟಲ್‌ ಗ್ರಂಥಾಲಯ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಲಾಗಿದೆ. ಇದನ್ನು ತಾಪಂ ಕಾರ್ಯನಿರ್ವಹಣಾಧಿಕಾರಿಗಳೇ ಬಂದು ಪರಿಶೀಲಿಸಿದ್ದಾರೆ. ಆದರೂ ಯಾವುದೋ ಒತ್ತಡಕ್ಕೆ ಮಣಿದು ಗ್ರೇಡ್‌ ನೀಡುವಲ್ಲಿ ತಾರತಮ್ಯವೆಸಗಿದ್ದಾರೆ ಎಂದು ಗೋಪಾಲಪುರ ಗ್ರಾಪಂ ಉಪಾಧ್ಯಕ್ಷ ಸಿದ್ಧಾಚಾರಿ ಆರೋಪಿಸಿದ್ದಾರೆ.

ನಮ್ಮದೊಂದು ಸಣ್ಣ ಪಂಚಾಯ್ತಿ ಎಂದು ಅನ್ಯಾಯವೆಸಗುತ್ತಿದ್ದಾರೆ. ಸಮಗ್ರವಾಗಿ ಅಭಿವೃದ್ಧಿ ಹೊಂದಿರುವ ಪಂಚಾಯ್ತಿಗಳನ್ನು ಪುರಸ್ಕಾರದಿಂದ ದೂರವಿಟ್ಟು ಏನೂ ಕೆಲಸ ಮಾಡದ ಪಂಚಾಯ್ತಿಗಳಿಗೆ ಹೆಚ್ಚಿನ ಅಂಕ ನೀಡಿರುವುದು. ತಮಗಿಷ್ಟ ಬಂದ ಹಾಗೂ ರಾಜಕೀಯ ಪ್ರಭಾವ ಬೀರಿದ ಪಂಚಾಯ್ತಿಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಾರೆಂಬುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ನಾವು ಶ್ರಮವಹಿಸಿ ನಮ್ಮ ಪಂಚಾಯ್ತಿ ವ್ಯಾಪ್ತಿಯೊಳಗಿರುವ ಜನರಿಗೆ ಅಗತ್ಯ ಸೌಲಭ್ಯ ದೊರಕಿಸಿಕೊಟ್ಟಿದ್ದೇವೆ. ಪುರಸ್ಕಾರಕ್ಕೆ ಅಗತ್ಯವಿರುವ ಎಲ್ಲಾ ಅಂಶಗಳನ್ನು ಪೂರೈಸಿದ್ದರೂ ಕಡಿಮೆ ಅಂಕ ನೀಡಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಏನೂ ಕೆಲಸ ಮಾಡಿರದ ಪಂಚಾಯ್ತಿಗಳಿಗೆ ಹೆಚ್ಚು ಅಂಕ ನೀಡಲಾಗಿದೆ. ಈ ವಿಷಯವನ್ನು ಜಿಪಂ ಸಿಇಒ ಅವರ ಗಮನಕ್ಕೆ ತರಲಾಗಿದೆ. ಅವರೂ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಈ ಲೋಪ ಸರಿಪಡಿಸದಿದ್ದರೆ ಗ್ರಾಪಂ ಸದಸ್ಯರ ಒಕ್ಕೂಟದಿಂದ ಅನ್ಯಾಯ ಖಂಡಿಸಿ ಹೋರಾಟ ನಡೆಸಲಾಗುವುದು.

- ಸಿದ್ದಾಚಾರಿ, ಉಪಾಧ್ಯಕ್ಷರು, ಗೋಪಾಲಪುರ ಗ್ರಾಪಂ