ತೆರಿಗೆ ಹಂಚಿಕೆಯಲ್ಲಿ ತಾರತಮ್ಯ: ಜೋಶಿ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ ಯತ್ನ

| Published : Feb 09 2024, 01:49 AM IST

ತೆರಿಗೆ ಹಂಚಿಕೆಯಲ್ಲಿ ತಾರತಮ್ಯ: ಜೋಶಿ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರವು ಬರ ಪರಿಹಾರಕ್ಕೆ ₹18,177 ಕೋಟಿ ಬೇಡಿಕೆ ಸಲ್ಲಿಸಿದರೂ ಸಹ ಈ ವರೆಗೂ ಬಿಡಿಕಾಸು ನೀಡಿಲ್ಲ. ತೆರಿಗೆ ಪಾಲಿನಲ್ಲಿ ತಾರತಮ್ಯ ಅನುಸರಿಸುತ್ತಿದ್ದು, ಶೇ. 4.77ರಿಂದ ಶೇ. 3.64ಕ್ಕೆ ಇಳಿಸಿದೆ

ಹುಬ್ಬಳ್ಳಿ: ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ (ಎನ್‌ಎಸ್‌ಯುಐ)ದ ಕಾರ್ಯಕರ್ತರು ಗುರುವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಕಚೇರಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ನಗರದ ಚಿಟಗುಪ್ಪಿ ಆಸ್ಪತ್ರೆಯಿಂದ ಸಮಾವೇಶಗೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಹಾಗೂ ಪ್ರಹ್ಲಾದ ಜೋಶಿ ವಿರುದ್ಧ ಘೋಷಣೆ ಕೂಗುತ್ತ ಕೇಂದ್ರ ಸಚಿವರ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಸಂಸದರ ಕಚೇರಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜೈ ಶ್ರೀರಾಮ, ಮೋದಿ...ಮೋದಿ... ಪ್ರಹ್ಲಾದ ಜೋಶಿ ಪರ ಘೋಷಣೆ ಕೂಗಿದರು.

ಇದಕ್ಕೆ ಪ್ರತ್ಯುತ್ತರವಾಗಿ ಎನ್‌ಎಸ್‌ಯುಐ ಕಾರ್ಯಕರ್ತರು ರಾಹುಲ್... ರಾಹುಲ್... ಒಂದೇ ಮಾತರಂ ಎಂಬ ಘೋಷಣೆ ಕೂಗಿದರು. ಕೆಲ ಹೊತ್ತು ಪರಸ್ಪರ ಘೋಷಣೆ ಹಾಕಿದರು. ಬಳಿಕ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಎನ್‌ಎಸ್‌ಯುಐ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ಸಂದರ್ಭದಲ್ಲಿ ಎನ್‌ಎಸ್‌ಯುಐನ ಅಧ್ಯಕ್ಷ ಸೌರಭ ಮಸೇಕರ ಮಾತನಾಡಿ, ಕೇಂದ್ರ ಸರ್ಕಾರ ತೆರಿಗೆ ಹಂಚಿಕೆ ವಿಚಾರದಲ್ಲಿ ಅನ್ಯಾಯ ಮಾಡುತ್ತಿದೆ. ರಾಜ್ಯದಿಂದ ಆಯ್ಕೆಯಾದ ಸಂಸದರು ಈ ಬಗ್ಗೆ ಮಾತನಾಡುತ್ತಿಲ್ಲ. ನಾವು ನ್ಯಾಯ ಪಡೆಯಲು ಹೋರಾಟ ಮಾಡುತ್ತಿದ್ದೇವೆ ಎಂದರು.

ರಾಜ್ಯ ಸರ್ಕಾರವು ಬರ ಪರಿಹಾರಕ್ಕೆ ₹18,177 ಕೋಟಿ ಬೇಡಿಕೆ ಸಲ್ಲಿಸಿದರೂ ಸಹ ಈ ವರೆಗೂ ಬಿಡಿಕಾಸು ನೀಡಿಲ್ಲ. ತೆರಿಗೆ ಪಾಲಿನಲ್ಲಿ ತಾರತಮ್ಯ ಅನುಸರಿಸುತ್ತಿದ್ದು, ಶೇ. 4.77ರಿಂದ ಶೇ. 3.64ಕ್ಕೆ ಇಳಿಸಿದೆ. ಇದರಿಂದ ರಾಜ್ಯಕ್ಕೆ ₹62,098 ಕೋಟಿ ನಷ್ಟವಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಜ್ಯ ಸರ್ಕಾರ 2023-24 ಸಾಲಿನಲ್ಲಿ ಘೋಷಿಸಿದ್ದು, ಯೋಜನೆಗೆ ₹5300 ಕೋಟಿ ವೆಚ್ಚವಾಗಲಿದ್ದು, ಇದಕ್ಕೆ ಕೇಂದ್ರ ಸರ್ಕಾರ ಬಿಡಿಗಾಸು ಕೊಟ್ಟಿಲ್ಲ. ಸಹಭಾಗಿತ್ವ ಯೋಜನೆಗೆ ₹20 ಸಾವಿರ ಕೋಟಿ ಇದ್ದದ್ದನ್ನು ₹13 ಸಾವಿರ ಕೋಟಿಗೆ ಕಡಿತಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ನಾಗರಾಜ ಕೊಟಗಿ ಮಾತನಾಡಿ, ದೇಶದಲ್ಲಿಯೇ ರಾಜ್ಯದಿಂದ ಅತೀ ಹೆಚ್ಚು ತೆರಿಗೆ ನೀಡಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಈ ಹಣವನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳ ಅಭಿವೃದ್ಧಿಗೆ ನೀಡುತ್ತಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯಕ್ಕೆ ಬರಬೇಕಾದ ತೆರಿಗೆ ಹಂಚಿಕೆ ಸರಿಯಾಗಿ ನೀಡಿದರೆ ರಾಜ್ಯದ ಎಲ್ಲ ಕ್ಷೇತ್ರದ ಅಭಿವೃದ್ಧಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ರೋಹಿತ ಘೋಡಕೆ, ಬಸನಗೌಡ ಪಾಟೀಲ, ವಿಶಾಲ ಮಾನೆ, ರೋಹನ ಹಿಪ್ಪರಗಿ, ಹುಸೇನ ಹಾಜಿ, ಇರ್ಫಾನ್ ಪಠಾಣ, ಶಿವಾ ಬೆಂಡಿಗೇರಿ ಸೇರಿದಂತೆ ಹಲವರಿದ್ದರು.