ಕಮತಗಿಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಭವನದಲ್ಲಿ ಪಪಂ ಅದ್ಯಕ್ಷ ಬಸವರಾಜ ಪಿ. ಕುಂಬಳಾವತಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು. ಪಪಂ ಉಪಾಧ್ಯಕ್ಷೆ ನೇತ್ರಾವತಿ ನಿಂಬಲಗುಂದಿ, ಪಪಂ ಮುಖ್ಯಾಧಿಕಾರಿ ಎಫ್.ಎನ್. ಹುಲ್ಲಿಕೇರಿ ಇದ್ದರು.

ಕನ್ನಡಪ್ರಭ ವಾರ್ತೆ ಕಮತಗಿ

16ನೇ ಹಣಕಾಸು ಕ್ರೀಯಾಯೋಜನೆಯ ₹1.84 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಒಪ್ಪಿಗೆ, ಗ್ರಂಥಾಲಯ ನಿರ್ಮಿಸಲು ನಿವೇಶನ ನೀಡಲು ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯರು ಸರ್ವಾನುಮತದ ಒಪ್ಪಿಗೆ ಸೂಚಿಸಿದರು.

ಸ್ಥಳೀಯ ಪಟ್ಟಣ ಪಂಚಾಯಿತಿಯ ಕಾರ್ಯಾಲಯದ ಸಭಾಭವನದಲ್ಲಿ ಶನಿವಾರ ಪಪಂ ಅಧ್ಯಕ್ಷ ಬಸವರಾಜ ಪಿ. ಕುಂಬಳಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2025-26ನೇ ಸಾಲಿನ ಸಿಎಂಐಡಿಪಿ ವತಿಯಿಂದ ₹95 ಲಕ್ಷ ಅನುದಾನದಲ್ಲಿ ಪಟ್ಟಣದ ತಮಗೆ ಬೇಕಾದ ವಾರ್ಡಗಳಲ್ಲಿ ಮಾತ್ರ ಕಾಮಗಾರಿಗಳ ಅನುದಾನ ಹಂಚಿಕೆ ಮಾಡಿಕೊಂಡಿದ್ದಿರಿ. ಇನ್ನುಳಿದ ವಾರ್ಡ್‌ಗಳಿಗೆ ಯಾಕೆ ಅನುದಾನ ಹಂಚಿಕೆ ಮಾಡಿಲ್ಲ ಎಂದು ಪಪಂ ಸದಸ್ಯ ಸಂಗಪ್ಪ ಗಾಣಗೇರ ಆರೋಪಿಸಿದಾಗ ಕೆಲವು ಹೊತ್ತು ಸದಸ್ಯರ ನಡುವೆ ಮಾತಿನ ಚಕುಮಕಿ ನಡೆಯಿತು.ನಂತರ ಮಧ್ಯ ಪ್ರವೇಶಿಸಿದ ಪಪಂ ಅದ್ಯಕ್ಷರು ಮುಂಬರುವ ಅನುದಾನದಲ್ಲಿ ಎಲ್ಲ ವಾರ್ಡಗಳಿಗೆ ಸಮನಾಗಿ ಅನುದಾನ ಹಂಚಿಕೆ ಮಾಡುವ ಭರವಸೆ ನೀಡಿದರು. 5ನೇ ಹಾಗೂ 14 ವಾರ್ಡಗಳಲ್ಲಿನ ವಿದ್ಯುತ್ ಕಂಬಗಳಿಗೆ ಲೈಟ್‌ಗಳನ್ನು ಹಾಕುವಂತೆ ಪಪಂ ಸಿಬ್ಬಂದಿಗೆ ಹೇಳಿದರೆ ಲೈಟ್‌ಗಳು ಸ್ಟಾಕ್ ಇಲ್ಲ ಎಂದು ಪದೇ ಪದೆ ಹೇಳುತ್ತಾರೆ ಎಂದು ಪಪಂ ಸದಸ್ಯ ಹುಚ್ಚೇಶ ಮದ್ಲಿ, ನಾಮನಿರ್ದೇಶಿತ ಸದಸ್ಯ ಬಸವರಾಜ ದಂಡಾವತಿ ಆರೋಪಿಸಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಕಮತಗಿ ಪಟ್ಟಣದಲ್ಲಿ ಗ್ರಂಥಾಲಯ ನಿರ್ಮಿಸಲು ಖಾಲಿ ನಿವೇಶನ ನೀಡಲು ಪತ್ರ ಬರೆದಿದ್ದರಿಂದ ಪಂಚಾಯಿತಿ ವತಿಯಿಂದ ನಿವೇಶನ ನೀಡಲು ಒಪ್ಪಿಗೆ ಸೂಚಿಸಿದರು. ಕೆಲವು ವಸತಿ ಉದ್ದೇಶದ ಭೂ ಪರಿವರ್ತನೆ ಜಮೀನಿನಲ್ಲಿ ಶೇ.40ರಷ್ಟು ನಿವೇಶನ ಬಿಡುಗಡೆಗೊಳಿಸಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

2026-27ನೇ ಸಾಲಿನ ಎಸ್‌ಎಫ್‌ಸಿ ಹಾಗೂ ಸ್ಥಳಿಯ ಅನುದಾನದ ಶೇ.24.10,7.25 ಹಾಗೂ ಶೇ.5ರಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಲು, ಹಿಂದಿನ ಸಭೆಯ ನಡುವಳಿ ಓದಿ ದೃಢಿಕರಿಸಲಾಯಿತು. ಜೂನ್ 2026ರಿಂದ ಆಗಸ್ಟ್‌ 2026ರವರೆಗೆ ಜಮಾ ಖರ್ಚು ಓದಿ ದೃಢೀಕರಿಸಲಾಯಿತು. ಅಧ್ಯಕ್ಷರ ಅಪ್ಪಣೆ ಮೇರೆಗೆ ಇನ್ನಿತರ ವಿಷಯಗಳನ್ನು ಚರ್ಚಿಸಲಾಯಿತು.

ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ನೇತ್ರಾವತಿ ನಿಂಬಲಗುಂದಿ, ಪಪಂ ಸದಸ್ಯರಾದ ರಮೇಶ ಜಮಖಂಡಿ, ಸಂಗಪ್ಪ ಗಾಣಗೇರ, ಗುರಲಿಂಗಪ್ಪ ಪಾಟೀಲ, ಪ್ರಭು ಶಿನ್ನೂರ, ದೇವಿಪ್ರಸಾದ ನಿಂಬಲಗುಂದಿ, ಚಂದು ಕುರಿ, ಲಕ್ಷ್ಮಣ ಮಾದರ, ಹುಚ್ಚೇಶ ಮದ್ಲಿ, ಬಸವರಾಜ ದಂಡಾವತಿ, ಹುಚ್ಚವ್ವ ಹಗೇದಾಳ, ಕಸ್ತೂರಿಬಾಯಿ ಬಾಗೇವಾಡಿ, ನಂದಾ ದ್ಯಾಮಣ್ಣವರ, ರತ್ನಾ ತಳಗೇರಿ, ಮಂಜುಳಾ ಮುರಾಳ ಹಾಗೂ ಪಪಂ ಮುಖ್ಯಾಧಿಕಾರಿ ಎಫ್ .ಎನ್. ಹುಲ್ಲಿಕೇರಿ, ಕಚೇರಿ ವ್ಯವಸ್ಥಾಪಕ ರಮೇಶ ಪದಕಿ, ಕಂದಾಯ ನೀರಿಕ್ಷಕಿ ಶೈಲಾ ಚಲವಾದಿ, ಪಪಂ ಸಿಬ್ಬಂದಿ ಪ್ರಭು ಹುಲಮನಿಗೌಡರ, ಮಂಜುನಾಥ ಪೂಜಾರಿ, ಎಂ.ಎ. ಕತೀಬ ಇದ್ದರು.