ಯೂರಿಯಾ ವಿತರಣೆಯಲ್ಲಿ ತಾರತಮ್ಯ: ರೈತರ ಆಕ್ರೋಶ

| Published : Aug 10 2025, 01:31 AM IST

ಸಾರಾಂಶ

ತಾಲೂಕಿನ ತಂಬ್ರಹಳ್ಳಿಯಲ್ಲಿ ಸುಗ್ಗಿ ಗೊಬ್ಬರ, ಔಷಧಿ ನೇರ ಮಾರಾಟ ಕೇಂದ್ರದವರು ರೈತರಿಗೆ ಯೂರಿಯಾ ಗೊಬ್ಬರ ಕೊಡುವಾಗ ತಾರತಮ್ಯ ಮಾಡುತ್ತಿರುವುದನ್ನು ಕೆಲ ರೈತರು ವಿರೋಧಿಸಿದರು.

ಹೆಚ್ಚು ಬೆಲೆಗೆ ಯೂರಿಯ ಮಾರಾಟ, ಗಮನಹರಿಸದ ಕೃಷಿ ಇಲಾಖೆಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿತಾಲೂಕಿನ ತಂಬ್ರಹಳ್ಳಿಯಲ್ಲಿ ಸುಗ್ಗಿ ಗೊಬ್ಬರ, ಔಷಧಿ ನೇರ ಮಾರಾಟ ಕೇಂದ್ರದವರು ರೈತರಿಗೆ ಯೂರಿಯಾ ಗೊಬ್ಬರ ಕೊಡುವಾಗ ತಾರತಮ್ಯ ಮಾಡುತ್ತಿರುವುದನ್ನು ಕೆಲ ರೈತರು ವಿರೋಧಿಸಿದರು.ಒಬ್ಬ ರೈತನಿಗೆ ೧೫ ಚೀಲ ತೆಗೆದುಕೊಳ್ಳಲು ಕಂಪನಿಯವರು ಚೀಟಿ ಕೊಟ್ಟಿರುವುದನ್ನು ಗಮನಿಸಿದ ರೈತರು ಸ್ಥಳದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಾ ಪ್ರತಿ ರೈತರಿಗೆ ೧ ಚೀಲ ಕೊಟ್ಟರೆ, ಇವರೊಬ್ಬರಿಗೆ ಮಾತ್ರ ಯಾಕೆ ೧೫ ಚೀಲ ಕೊಡುತ್ತೀರಿ ಎಂದು ಗಲಾಟೆ ಮಾಡಿದರು. ಕಂಪನಿಯ ಓರ್ವ ಉದ್ಯೋಗಿ ನಿಮಗೆ ಗೊಬ್ಬರ ಕೊಡಬೇಕೆಂದು ರೂಲ್ಸ್ ಇಲ್ಲಾ ಏನ್ ಮಾಡಿಕೊಳ್ಳುತ್ತೀರೋ ಮಾಡ್ಕೋಳ್ಳಿ ಎಂದು ರೈತರನ್ನು ಗದರಿಸಿದ್ದ ವೀಡಿಯೋ ಎಲ್ಲೆಡೆ ಹರಿದಾಡಿದೆ. ಕೃಷಿ ಇಲಾಖೆಯವರ ನಿರ್ಲಕ್ಷ್ಯದಿಂದ ರೈತರಿಗೆ ಯೂರಿಯಾ ಗೊಬ್ಬರ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಪ್ರತಿ ಯೂರಿಯ ಚೀಲದ ದರ ₹೨೭೦ಇದ್ದರೆ ಇವರು ರೈತರಿಂದ ₹೩೨೦ ಪಡೆಯುತ್ತಿದ್ದಾರೆ. ಇಲಾಖೆಯವರು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಮುಖಂಡರ ಮನೆಯಲ್ಲಿ ಯೂರಿಯಾ:

ಕೆಲ ವರ್ತಕರು ತಮಗೆ ಬೇಕಾದ ಮುಖಂಡರ ಮನೆಯಲ್ಲಿ ಗೊಬ್ಬರ ಸ್ಟಾಕ್ ಮಾಡಿ ನಂತರ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಮೆಕ್ಕೆಜೋಳ ಬೆಳೆಗೆ ಯೂರಿಯಾ ಗೊಬ್ಬರದ ಅವಶ್ಯಕತೆ ಹೆಚ್ಚಿರುವ ಹಿನ್ನೆಲೆ ರೈತರು ಗೊಬ್ಬರದ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಹರಸಾಹಸ ಮಾಡಿ ಗೊಬ್ಬರ ತೆಗೆದುಕೊಳ್ಳುವಂತಾಗಿದೆ.

ಯೂರಿಯಾ ವಿತರಣೆಯಲ್ಲಿ ತಾರತಮ್ಯ ಮಾಡಬಾರದು, ಎಲ್ಲಾ ರೈತರಿಗೆ ಸಮಾನವಾಗಿ ವಿತರಣೆ ಮಾಡಬೇಕು. ಸುಗ್ಗಿ ಕಂಪನಿಯವರು ೧ ಚೀಲ ಯೂರಿಯಾ ಗೊಬ್ಬರಕ್ಕೆ ₹೩೨೦ಗಳನ್ನು ತೆಗೆದುಕೊಂಡು ರೈತರಿಗೆ ಮೋಸ ಮಾಡಿದ್ದಾರೆ. ಕೃಷಿ ಇಲಾಖೆಯವರು ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರೈತ ಮುಖಂಡ ರಮೇಶ್ ಪೂಜಾರ್ ತಿಳಿಸಿದ್ದಾರೆ.