ಬ್ಯಾರಿ ನಿಗಮ ಸ್ಥಾಪನೆಯ ಸಾಧಕ ಬಾಧಕ ಚರ್ಚೆಯಾಗಲಿ: ಖಾದರ್‌

| Published : Jan 09 2025, 12:46 AM IST

ಸಾರಾಂಶ

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಬ್ಯಾರಿ ಮುಸ್ಲಿಮರಿಗೆ ಅನೇಕ ಯೋಜನೆಗಳನ್ನು ನೀಡಲಾಗುತ್ತಿದೆ. ಅದರಿಂದ ಎಷ್ಟು ಪ್ರಯೋಜನವಾಗಿದೆ ಎಂಬುದರ ಅಂಕಿ ಅಂಶ ಪಡೆದು ಅಧ್ಯಯನ ನಡೆಸಬೇಕು. ಈಗ ಕೊಡುವ ಅನುದಾನಕ್ಕಿಂತಲೂ ಕಡಿಮೆ ಅನುದಾನವನ್ನು ಹೊಸ ನಿಗಮಕ್ಕೆ ಕೊಟ್ಟರೆ ಬ್ಯಾರಿ ಜನಾಂಗಕ್ಕೆ ನಷ್ಟವಾದೀತು. ನಿಗಮ ಸ್ಥಾಪಿಸುವ ಮುನ್ನ ಇದನ್ನೆಲ್ಲಾ ಯೋಚಿಸಬೇಕಿದೆ ಎಂದು ಯು.ಟಿ. ಖಾದರ್ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮೊದಲು ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡುವ ಅಗತ್ಯವಿದೆ. ಅದಕ್ಕಾಗಿ ತಜ್ಞರ ಸಮಿತಿ ರಚಿಸಬೇಕು ಎಂದು ವಿಧಾನಸಭೆ ಸ್ಪೀಕ‌ರ್ ಯು.ಟಿ. ಖಾದರ್ ಫರೀದ್‌ ಹೇಳಿದ್ದಾರೆ.ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ದ.ಕ.ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಬ್ಯಾರಿ ಮುಸ್ಲಿಮರಿಗೆ ಅನೇಕ ಯೋಜನೆಗಳನ್ನು ನೀಡಲಾಗುತ್ತಿದೆ. ಅದರಿಂದ ಎಷ್ಟು ಪ್ರಯೋಜನವಾಗಿದೆ ಎಂಬುದರ ಅಂಕಿ ಅಂಶ ಪಡೆದು ಅಧ್ಯಯನ ನಡೆಸಬೇಕು. ಈಗ ಕೊಡುವ ಅನುದಾನಕ್ಕಿಂತಲೂ ಕಡಿಮೆ ಅನುದಾನವನ್ನು ಹೊಸ ನಿಗಮಕ್ಕೆ ಕೊಟ್ಟರೆ ಬ್ಯಾರಿ ಜನಾಂಗಕ್ಕೆ ನಷ್ಟವಾದೀತು. ನಿಗಮ ಸ್ಥಾಪಿಸುವ ಮುನ್ನ ಇದನ್ನೆಲ್ಲಾ ಯೋಚಿಸಬೇಕಿದೆ ಎಂದು ಯು.ಟಿ. ಖಾದರ್ ಹೇಳಿದರು.

ಮಹಾಸಭಾದ ಅಧ್ಯಕ್ಷ ಅಝೀಝ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮೊಹಿಯುದ್ದೀನ್ ಬಾವ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ. ಬಾವ, ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್‌, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್. ಖಾದರ್, ದ.ಕ. ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್. ಮುಹಮ್ಮದ್, ಜಮೀಯ್ಯತುಲ್ ಫಲಾಹ್ ದ.ಕ -ಉಡುಪಿ ಜಿಲ್ಲಾಧ್ಯಕ್ಷ ಶಾಹುಲ್‌ ಹಮೀದ್ ಕೆ.ಕೆ., ಬಿಸಿಸಿಐ ಅಧ್ಯಕ್ಷ ಎಸ್‌.ಎಂ. ರಶೀದ್ ಹಾಜಿ, ದ.ಕ. ಜಿಲ್ಲಾ ವಕ್ಸ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ, ಮಾಜಿ ಮೇಯರ್ ಕೆ.ಅಶ್ರಫ್, ಹೈದರ್ ಪರ್ತಿಪ್ಪಾಡಿ, ಮುಹಮ್ಮದ್ ಮೋನು ಮತ್ತಿತರರಿದ್ದರು.