ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರು ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮಾಡಿ ವಿಕಸಿತ ಭಾರತ ಜಿ ರಾಮ್ ಜಿ ಯೋಜನೆಯ ಲೋಪಗಳ ಬಗ್ಗೆ ಚರ್ಚಿಸಿ ಸಭಾ ನಡಾವಳಿಕೆಯಲ್ಲಿ ನಮೂದಿಸಿ ಸರ್ಕಾರಕ್ಕೆ ಕಳಿಸಿಕೊಡಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಗ್ರಾಪಂ ಸದಸ್ಯರುಗಳಿಗೆ ಕರೆ ನೀಡಿದರು.

ಹೊಸದುರ್ಗ: ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರು ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮಾಡಿ ವಿಕಸಿತ ಭಾರತ ಜಿ ರಾಮ್ ಜಿ ಯೋಜನೆಯ ಲೋಪಗಳ ಬಗ್ಗೆ ಚರ್ಚಿಸಿ ಸಭಾ ನಡಾವಳಿಕೆಯಲ್ಲಿ ನಮೂದಿಸಿ ಸರ್ಕಾರಕ್ಕೆ ಕಳಿಸಿಕೊಡಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಗ್ರಾಪಂ ಸದಸ್ಯರುಗಳಿಗೆ ಕರೆ ನೀಡಿದರು.

ಪಟ್ಟಣದ ಸಾಮರ್ಥ್ಯ ಸೌಧದ ಆವರಣದಲ್ಲಿ ಮಂಗಳವಾರ ನಡೆದ ಮನರೇಗಾ ಉಳಿಸಿ ಜನಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಹಿಂಪಡೆಯುವ ಮೂಲಕ ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಂಡು ಆರ್ಥಿಕತೆಯನ್ನು ನಾಶ ಮಾಡಲು ಮುಂದಾಗಿದೆ ಎಂದರು.ಯುಪಿಎ ಸರ್ಕಾರದ ನೇತೃತ್ವ ವಹಿಸಿದ್ದ ಡಾ.ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರು ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಿ ಕಾಯ್ದೆಯನ್ನು ರೂಪಿಸಿದ್ದರು. ಆದರೆ ಕೇಂದ್ರದ ಇಂದಿನ ಬಿಜೆಪಿ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸಿ ವಿಕಸಿತ ಭಾರತ ಜಿ ರಾಮ್ ಜಿ ಹೆಸರಿನಲ್ಲಿ ಹೊಸ ಕಾಯ್ದೆ ಜಾರಿಗೆ ತಂದು ಜನರ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ ಎಂದು ದೂರಿದರು.ನರೇಗಾ ಕಾಯ್ದೆ ಪ್ರಕಾರ ಕಾರ್ಮಿಕರು, ಜನಸಾಮಾನ್ಯರು ತಮ್ಮ ಊರಿನಲ್ಲಿ, ಜಮೀನಿನಲ್ಲಿಯೇ ಕೆಲಸ ಮಾಡಬಹುದಾಗಿತ್ತು. ಉದ್ಯೋಗ ಕೇಳಿ ಪಡೆಯುವ ಹಕ್ಕು ಜನರಿಗಿತ್ತು. ಮೋದಿ ಸರ್ಕಾರ ಅದನ್ನು ಬದಲಾಯಿಸಿ ಹೊಸ ಕಾಯ್ದೆ ಜಾರಿಗೆ ತಂದಿದೆ. ಈಗಿನ ಯೋಜನೆ ಪ್ರಕಾರ ಕೇಂದ್ರ ಸರ್ಕಾರ ಸೂಚಿಸುವ ಪಂಚಾಯಿತಿಗಳು ಕೆಲಸ ಪಡೆಯಲಿವೆ. ಉಳಿದ ಪಂಚಾಯಿತಿಗಳು ಕೆಲಸದಿಂದ ವಂಚಿತಗೊಳ್ಳಲಿವೆ. ಇದರಿಂದ ಜನರು ನಿರುದ್ಯೋಗ ಸಮಸ್ಯೆ ಎದುರಿಸಲಿದ್ದಾರೆ. ಆರ್ಥಿಕ ಪರಿಸ್ಥಿತಿ ಬಿಗಡಾಯಿಸಲಿದೆ ಎಂದರು. ಮನರೇಗಾ ಕಾಯ್ದೆಯಡಿ ಕೇವಲ ಉದ್ಯೋಗ ಸೃಷ್ಟಿ ಮಾತ್ರವಲ್ಲ ಉದ್ಯೋಗ ಕೊಡದೇ ಹೋಗಿದ್ದರೆ ಫಲಾನುಭವಿ ಉದ್ಯೋಗ ಭತ್ಯೆಯನ್ನು ಕೇಳಬಹುದಾಗಿತ್ತು. ಪಂಚಾಯಿತಿಗಳಿಗೆ ಕೆಲಸಗಳ ಬಗ್ಗೆ ತೀರ್ಮಾನಿಸುವ ಹಕ್ಕುಇತ್ತು. ಆದರೆ, ಈ ಹೊಸ ಕಾಯ್ದೆಯಡಿ ಪಂಚಾಯಿತಿಗಳಿಗೆ ಅಧಿಕಾರವಿಲ್ಲ. ಪಂಚಾಯಿತಿಗಳ ವ್ಯಾಪ್ತಿಗೂ ಬರುವುದಿಲ್ಲ. ಕೇಂದ್ರ ಸರ್ಕಾರವೇ ಎಲ್ಲಿ ಕಾಮಗಾರಿ ನಡೆಯಬೇಕೆಂದು ನಿರ್ಧರಿಸಲಿದೆ. ಬೃಹತ್ ಕೆಲಸಗಳನ್ನು ಗುತ್ತಿಗೆದಾರರಿಗೆ ನೀಡಲಿದೆ. ಇದರಿಂದ ಗ್ರಾಮೀಣ ಆಸ್ತಿಯನ್ನು ಸೃಷ್ಟಿಸಲು ಶ್ರಮಿಸಿದ್ದ ಕಾರ್ಮಿಕರು ಗುತ್ತಿಗೆದಾರರ ಬಳಿ ಕೆಲಸ ಮಾಡುವಂತಾಗಲಿದೆ ಎಂದು ಹೇಳಿದರು.

ತಾಲೂಕಿನ 33 ಗ್ರಾಪಂಗಳ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಈ ವೇಳೆ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆಗ್ರೋಶಿವಣ್ಣ, ಕಾಂಗ್ರೆಸ್ ಅಧ್ಯಕ್ಷ ಪದ್ಮನಾಬ್, ಮಹಿಳಾ ಘಟಕದ ಅಧ್ಯಕ್ಷೆ ದೀಪಿಕಾ ಸತೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಹಮದ್ ಇಸ್ಮಾಯಿಲ್, ಕೆಪಿಸಿಸಿ ಸದಸ್ಯರಾದ ಎಂ.ಪಿ.ಶಂಕರ್, ಅಲ್ತಾಪ್ ಪಾಷಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಬಿ.ಮಂಜುನಾಥ್, ಡಾ.ಕೆ.ಅನಂತ್, ಶಿಮುಲ್ ನಿರ್ದೇಶಕ ರವಿಕುಮಾರ್, ಲೊಕೇಶಪ್ಪ, ನಾಯಿಗೆರೆ ಚಂದ್ರಶೇಖರ್ ಮತ್ತಿತರರಿದ್ದರು.