ಸಾರಾಂಶ
ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ ಭೇಟಿ ಮಾಡಿದ ಸಂಸದ ಬಿ.ವೈ.ರಾಘವೇಂದ್ರರ ನೇತೃತ್ವದ ನಿಯೋಗದಿಂದ ವಿಐಎಸ್ಎಲ್ ಕಾರ್ಖಾನೆ ಪುನರುಜ್ಜೀವನಗೊಳಿಸುವ ಕುರಿತು ಚರ್ಚಿಸಲಾಯಿತು.
ಕನ್ನಡಪ್ರಭ ವಾರ್ತೆ ಭದ್ರಾವತಿ
ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರ ಸಂಘದ ನಿಯೋಗ ಸಂಸದ ಬಿ.ವೈ.ರಾಘವೇಂದ್ರರವರ ನೇತೃತ್ವದಲ್ಲಿ ಮಂಗಳವಾರ ನವದೆಹಲಿ ಸಂಸತ್ ಭವನದಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣರವರನ್ನು ಮಾಡಿ ಕಾರ್ಖಾನೆ ಪುನರುಜ್ಜೀವನಗೊಳಿಸುವ ಕುರಿತು ಚರ್ಚಿಸಲಾಯಿತು.ಕಾರ್ಖಾನೆ ಪುನಶ್ಚೇತನಕ್ಕೆ 15,000 ಕೋ. ರು. ಬಂಡವಾಳ ಹೂಡಿಕೆಯೊಂದಿಗೆ ಮುಚ್ಚುವ ಪ್ರಕ್ರಿಯೆ ಮತ್ತು ಬಂಡವಾಳ ಹಿಂಪಡೆಯುವಿಕೆ ಅನುಮೋದನೆ ಮುಂಬ ರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಿಂಪಡೆಯುವ ತೀರ್ಮಾನ ತೆಗೆದುಕೊಳ್ಳುವುದು. ಬಳ್ಳಾರಿ ಜಿಲ್ಲೆ, ರಮಣದುರ್ಗದಲ್ಲಿನ ಕಾರ್ಖಾನೆಯ ಕಬ್ಬಿಣದ ಅದಿರು ಗಣಿಗಾರಿಕೆಯ ಅಭಿವೃದ್ಧಿ ಮತ್ತು ಎನ್.ಇ.ಬಿ ಕಬ್ಬಿಣದ ಅದಿರು ಗಣಿ ಬಗ್ಗೆ ನಡೆಯುತ್ತಿರುವ ನ್ಯಾಯಾಲಯದ ಪ್ರಕರಣದ ಬಗ್ಗೆ ಗಮನ ಹರಿಸುವುದು. ಗುತ್ತಿಗೆ ಕಾರ್ಮಿಕರಿಗೆ ಹೆಚ್ಚು ಕೆಲಸದ ದಿನಗಳನ್ನು ಒದಗಿಸುವ ಸಲುವಾಗಿ ಕಾರ್ಖಾನೆಯ ಉತ್ಪಾದನೆ ಹೆಚ್ಚಿಸಲು ಬಿಲಾಯಿ ಸ್ಟೀಲ್ ಪ್ಲಾಂಟ್‌ನಿಂದ ತಿಂಗಳಿಗೆ 5,000 ಟನ್ ಬ್ಲೂಮ್ಸ್ ಮತ್ತು ಎ.ಎಸ್.ಪಿಯಿಂದ 2,000 ಟನ್ ಇಂಗಾಟ್ ಮೆಟೀರಿಯಲ್ ಪೂರೈಸುವುದು ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಚರ್ಚಿಸಲಾಯಿತು.
ಸಚಿವರು ಪ್ರತಿಕ್ರಿಯಿಸಿ, ಕಾರ್ಖಾನೆ ಪುನರುಜ್ಜೀವನಗೊಳಿಸುವ ಕುರಿತು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಸ್ವಲ್ಪ ಕಾಲಾವಕಾಶ ಅಗತ್ಯ ವಿದ್ದು, ಯಾವುದೇ ಕಾರಣಕ್ಕೂ ಕಾರ್ಖಾನೆ ಮುಚ್ಚುವ ಪ್ರಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ಕಾರ್ಮಿಕರ ಸಂಘದ ನಿಯೋಗ ತಿಳಿಸಿದೆ..