ಬರಗಾಲ ಸಮಸ್ಯೆಗಳ ಕುರಿತು ವಿವಿಧ ಸಂಘಟನೆಗಳ ಚರ್ಚೆ

| Published : May 14 2024, 01:00 AM IST

ಸಾರಾಂಶ

ಭೀಕರ ಬರಗಾಲದ ಹಿನ್ನೆಲೆಯಲ್ಲಿ ಕೃಷಿ ಸಂಬಂಧಿತ ಅಲ್ಪಾವಧಿ ಮಧ್ಯಮಾವಧಿ, ದೀರ್ಘಾವಧಿ ಸಾಲಗಳನ್ನು ಮನ್ನಾ ಮಾಡಬೇಕು. ಹೊಸ ಬೆಳೆ ಬಿತ್ತನೆಗೆ ಸಾಲ ಮಂಜೂರು ಮಾಡಬೇಕು ಎಂದು ರೈತರ ಸಂಕಷ್ಟ ಕುರಿತು ಸಂಘಟನೆಯ ಸದಸ್ಯರು ವಿವರಿಸಿದರು.

ತೆಂಗು ಸೇರಿ ತೋಟಗಾರಿಕೆ ಬೆಳೆಗಳನ್ನು ಬರಪರಿಹಾರ ವ್ಯಾಪ್ತಿಗೆ ಸೇರಿಸಲು ಆಗ್ರಹ । ಬರ ಪರಿಣಾಮಕಾರಿ ನಿರ್ವಹಣೆಗೆ ತಾಲೂಕು ಆಡಳಿತ ಸಹಮತ

ಕನ್ನಡಪ್ರಭ ವಾರ್ತೆ ಮದ್ದೂರು

ಭೀಕರ ಬರದಿಂದಾಗಿ ತಾಲೂಕಿನಲ್ಲಿ ಎದುರಾಗಿರುವ ಹಲವು ಸಮಸ್ಯೆಗಳ ಕುರಿತು ತಹಸೀಲ್ದಾರ್ ಸೊಮಶೇಖರ್ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಚರ್ಚೆ ನಡೆಸಲಾಯಿತು.

ಬರಗಾಲದಿಂದ ರೈತರ ವರಮಾನಗಳಿಗೆ ಪೆಟ್ಟು ಬಿದ್ದಿದ್ದು, ಜೀವನ ನಡೆಸುವುದು ದುಸ್ಥರವಾಗಿದೆ. ಸ್ವ- ಸಹಾಯ ಸಂಘಗಳಿಗೆ ನೀಡಿರುವ ಸಾಲದ ಕಂತು ಪಾವತಿಸಲು ಬರ ನೀಗುವವರೆಗೆ ಮರುಪಾವತಿ ಅವಧಿ ವಿಸ್ತರಣೆಗೊಳಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ತೆಂಗು, ರೇಷ್ಮೆ, ಹೈನುಗಾರಿಕೆಯು ರೈತರ ಆದಾಯಕ್ಕೆ ಮೂಲವಾಗಿತ್ತು. ಬರದಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ತೆಂಗು ಸೇರಿ ತೊಟಗಾರಿಕೆ ಬೆಳೆಗಳನ್ನು ಬರ ಪರಿಹಾರ ವ್ಯಾಪ್ತಿಗೆ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಭೀಕರ ಬರಗಾಲದ ಹಿನ್ನೆಲೆಯಲ್ಲಿ ಕೃಷಿ ಸಂಬಂಧಿತ ಅಲ್ಪಾವಧಿ ಮಧ್ಯಮಾವಧಿ, ದೀರ್ಘಾವಧಿ ಸಾಲಗಳನ್ನು ಮನ್ನಾ ಮಾಡಬೇಕು. ಹೊಸ ಬೆಳೆ ಬಿತ್ತನೆಗೆ ಸಾಲ ಮಂಜೂರು ಮಾಡಬೇಕು ಎಂದು ರೈತರ ಸಂಕಷ್ಟ ಕುರಿತು ಸಂಘಟನೆಯ ಸದಸ್ಯರು ವಿವರಿಸಿದರು.

ಗುಣಮಟ್ಟದ ವಿದ್ಯುತ್ ಹಾಗೂ ಅಕ್ರಮ ಸಕ್ರಮ ಯೊಜನೆ ಮುಂದುವರಿಕೆ, ಸೊಲಾರ್ ಪಂಪ್ ಸೆಟ್ ಗಳಿಗೆ ಪ್ರೋತ್ಸಾಹ ಧನ ಹೆಚ್ಚಳ ಮಾಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಾಲೂಕು ಆಡಳಿತ ಶಾಲಾ ಶುಲ್ಕ ನಿಗಧಿಗೊಳಿಸಲು ಮತ್ತು ಬರದ ಹಿನ್ನೆಲೆಯಲ್ಲಿ ಆರಂಭಿಕ ಶುಲ್ಕ ಪಾವತಿಗೆ ಕಾಲಾವಕಾಶ ಕೊಡಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಬೋರ್ ವೆಲ್ ಕೊರೆಸುವ ರೈತರಿಗೆ ಖುಷ್ಕಿ, ತರಿ ಭೇದ ಇಲ್ಲದೇ ಸಹಾಯ ಧನ ನೀಡಬೇಕು. ಬರ, ಕೃಷಿ ಹಾಗೂ ಕೃಷಿಕರನ್ನು ಮಾತ್ರ ಬಾಧಿಸಿಲ್ಲ. ಕೃಷಿಕಾರ್ಮಿಕರು ಸೇರಿ ಕೃಷಿವಲಯವನ್ನೇ ಬಾಧಿಸಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಜೀವನಾವಶ್ಯಕ ಪದಾರ್ಥಗಳನ್ನು ಉಚಿತವಾಗಿ ವಿತರಿಸಬೇಕು. ಬಡಜನರಿಗೆ ಆಹಾರ ಭದ್ರತೆ ಖಾತರಿ ಒದಗಿಸಬೇಕು. ಇಂದಿರಾ ಕ್ಯಾಂಟಿನ್ ನಲ್ಲಿ ಆಹಾರ ವಿತರಣೆ ಹೆಚ್ಚಿಸಲು ತಾಲೂಕು ಆಡಳಿತದ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಎಂದರು.

ಕಬ್ಬು ಬೆಳೆಗಾರರನ್ನು ರಕ್ಷಿಸಲು ಸಕ್ಕರೆ ಕಾರ್ಖಾನೆಗಳು ಧಾವಿಸಬೇಕು. ಕಬ್ಬಿನ ಬಿತ್ತನೆ, ರಸಗೊಬ್ಬರ ಹಾಗೂ ಬೇಸಾಯದ ಖರ್ಚಿಗೆ ಬಡ್ಡಿರಹಿತ ಸಾಲ ನೀಡಬೇಕು. ಮನ್ಮುಲ್ ಪಶು ಆಹಾರದಲ್ಲಿ ಇಳಿಕೆ, ಹಾಲಿನ ಬೆಲೆ ಏರಿಕೆ, ಹಾಲಿನ ಪ್ರೊತ್ಸಾಹ ಧನ ಬಾಕಿ, ಜಾನುವಾರು ಮರಣ ಪರಿಹಾರ ಬಾಕಿ ಶೀಘ್ರ ಬಿಡುಗಡೆ ಮಾಡಿ ರೈತನ ಹಿತಕಾಯಬೇಕು ಎಂದು ಸಭೆಯಲ್ಲಿ ಅಧಿಕಾರಿಗಳ ಗಮನ ಸೆಳೆಯಲಾಯಿತು.

ರೈತರ ಭೂ ಕಂದಾಯ, ನೀರು ಹಾಗೂ ಮನೆ ತೆರಿಗೆ ಮನ್ನಾ ಮಾಡುವುದು, ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳು ನೀರಿಗಾಗಿ ಗ್ರಾಮ ಪ್ರವೇಶ ತಡೆಯಲು ನೀರಿನ ತೊಟ್ಟಿ ನಿರ್ಮಾಣ ಮಾಡಲು ಕ್ರಮ ವಹಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ಸಭೆ ನಂತರ ಸಮಗ್ರ ಬರ ನಿರ್ವಹಣೆ, ಪರಿಣಾಮಕಾರಿಯಾಗಿಸಲು ಗ್ರಾಮ ಪಂಚಾಯ್ತಿ ಹಂತದಲ್ಲಿ ವಿಶೇಷ ಗ್ರಾಮ ಸಭೆ ನಡೆಸಲು ತಾಲೂಕು ಆಡಳಿತ ಸಹಮತ ವ್ಯಕ್ತಪಡಿಸಿತು. ಆತಗೂರು ಗೋಶಾಲೆಯಲ್ಲಿ ಮೇವಿಲ್ಲದ ಜಾನುವಾರಗಳ ಪಾಲನೆಗೆ ತೀರ್ಮಾನಿಸಿತು. ಖಾಸಗಿ ಬೋರ್ ವೆಲ್ ಗಳಿಂದ ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಸರಬರಾಜು ಮಾಡಲು ಕ್ರಮ ವಹಿಸಲು ತೀರ್ಮಾನಿಸಿತು.

ಸಭೆಯಲ್ಲಿ ತಾಪಂ ಇಒ ಮಂಜುನಾಥ. ಕೃಷಿ ಅಧಿಕಾರಿ ಪರಮೇಶ್. ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ರೇಖಾ. ಪಶು ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಸಂಘಟನೆಗಳ ಮುಖಂಡರಾದ ನ.ಲಿ.ಕೃಷ್ಣ, ಶ್ರೀಕಾ ಶ್ರೀನಿವಾಸ್, ವಿ.ಸಿ.ಉಮಾಶಂಕರ್, ಅವಿನಾಶ್, ರಾಕೇಶ್ ಕುದರಗುಂಡಿ, ಸೊ.ಶಿ.ಪ್ರಕಾಶ್, ಅಣ್ಣೂರು ಮಹೇಂದ್ರ, ಮರಳಿಗ ಶಿವರಾಜ್, ಕ್ರಾಂತಿಸಿಂಹ, ವಳಗೆರೆಹಳ್ಳಿ ವೆಂಕಟೇಶ್, ಬೊಪ್ಪಸಂದ್ರ ನರಸಿಂಹ, ಚನ್ನಸಂದ್ರ ಲಕ್ಷ್ಮಣ, ಪ್ರಭುಲಿಂಗು, ಶಿವಲಿಂಗಯ್ಯ, ಕೊತ್ತನಹಳ್ಳಿ ಉಮೇಶ್, ರಾಮಲಿಂಗೇಗೌಡ, ಟಿ.ಎಸ್.ಪ್ರಸನ್ನಕುಮಾರ್, ಮರಲಿಂಗು, ಮಲವರಾಜ್ , ವೆಂಕಟೇಶ್, ಕೀಳಘಟ್ಟ ನಂಜುಂಡಯ್ಯ, ಸಾದಳೊಲು ಪುಟ್ಟಸ್ವಾಮಿ, ರಾಮಲಿಂಗೇಗೌಡ ದೇಶಹಳ್ಳಿ ರಾಮಕೃಷ್ಣ ಇತರರು ಇದ್ದರು.