ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಅಗತ್ಯ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು. ಅವರು ತುಮಕೂರಿನಲ್ಲಿ ಆರಂಭವಾದ ರಾಜ್ಯ ಮಟ್ಟದ ಪತ್ರಕರ್ತರ ಸಮಾವೇಶದಲ್ಲಿ ಮಾತನಾಡಿದರು.
ದೇಶದಲ್ಲಿ ಆತಂಕಕ್ಕೆ ಒಳಗಾಗಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿಚಾರಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಯಾಗಲಿದ್ದು ಇದರ ಬಗ್ಗೆ ಮಾಧ್ಯಮದ ವಿಶ್ಲೇಷಕರು ಮತ್ತು ಇತರರು ಇದರ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಬೇಕಾಗಿದೆ ಎಂದರು. ಹಿಂದಿನ ಮಾಧ್ಯಮ ಕವಲು ದಾರಿಯಲ್ಲಿದ್ದು ಅನೇಕ ಸವಾಲುಗಳಿವೆ. ಸೋಶಿಯಲ್ ಮೀಡಿಯಾಗಳ ಬದಲಾವಣೆಗಳಿಂದ ದಿನಪತ್ರಿಕೆಗಳ ಮುಂದೆ ಅನೇಕ ಸವಾಲುಗಳಿವೆ, ಪತ್ರಕರ್ತರು ಬರೆಯುವ ಲೇಖನಗಳು ಸರ್ಕಾರ ಸಮಾಜ ಸೇರಿದಂತೆ ವ್ಯಕ್ತಿಗಳನ್ನು ಬದಲಿಸುವ ಶಕ್ತಿ ಇದೆ ಎಂದರು.ರಾಜ್ಯದ ಕಾರ್ಯನಿರತ ಪತ್ರಕರ್ತರ ಸಂಘ ಮಹತ್ತರವಾದ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಡೆಮಾಕ್ರಸಿ ಬಗ್ಗೆ ಇಂದು ಅನೇಕ ಚರ್ಚೆಗಳಾಗುತ್ತಿದ್ದು ವ್ಯಕ್ತಿಯ ಸ್ವಾತಂತ್ರ್ಯದ ಹರಣವಾಗುತ್ತಿದೆ ಭಾರತ ಶಾಂತಿಯ ನಾಡು. ಸರ್ವಧರ್ಮಗಳ ನೆಲೆಬೀಡಾಗಿದ್ದು ಏಕತೆಯಲ್ಲಿ ವಿವಿಧತೆ ಎಂಬ ಸಂಸ್ಕೃತಿಗಳಿರುವ ಈ ದೇಶದಿಂದ ವಿಶ್ವಕ್ಕೆ ಶಾಂತಿಯ ಸಂದೇಶವನ್ನು ಸಾರಬೇಕಾಗಿದೆ. ಇಂತಹ ಅನೇಕ ಮಹತ್ತರವಾದ ಬದಲಾವಣೆ ಮತ್ತು ಹೊಸತನಗಳನ್ನು ಪತ್ರಕರ್ತರು ಸಮಾಜಕ್ಕೆ ನೀಡಬೇಕಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ 10 ವರ್ಷಗಳ ಹಿಂದೆ ನಡೆದ ರಾಷ್ಟ್ರೀಯ ಸಮ್ಮೇಳನ ಕೂಡ ಬಹಳ ಸುಂದರವಾಗಿ ನಡೆಸಲಾಗಿತ್ತು. ಅದೇ ರೀತಿಯಲ್ಲಿ ಈ ಸಮ್ಮೇಳನ ಕೂಡ ಬಹಳ ಅದ್ದೂರಿ ಮತ್ತು ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದರು.
ಸಮ್ಮೇಳನದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ ಪತ್ರಕರ್ತರ ಮುಂದೆ ಅನೇಕ ಸವಾಲುಗಳಿದ್ದು ಇಂದಿಗೂ ಪತ್ರಕರ್ತರು ಕಷ್ಟಪಡುತ್ತಿದ್ದಾರೆ. ಸಮಾಜಮುಖಿಯಾಗಿ ಅನೇಕ ವಿಚಾರಧಾರೆಗಳಿಂದ ಲೇಖನಗಳಿಂದ ಅನೇಕ ಜನಪರ ಕೆಲಸಗಳಾಗುತ್ತಿವೆ ನಮ್ಮಂತ ರಾಜಕಾರಣಿಗಳು ಅದರಿಂದ ತಿಳಿಯುವಂತಾಗಿದೆ ಎಂದರು.ತಾಂತ್ರಿಕ ವ್ಯವಸ್ಥೆಗಳು ಬದಲಾಗಿರುವ ಈ ಕಾಲಘಟ್ಟದಲ್ಲಿ ಮತ್ತು ದೃಶ್ಯ ಮಾಧ್ಯಮ ಪತ್ರಿಕೆಗಳಿಗೆ ಅನೇಕ ಸವಾಲುಗಳಿವೆ. ಈ ಪೈಪೋಟಿಯನ್ನುಎದುರಿಸುವ ಸವಾಲಿನ ಕೆಲಸ ಇಂದಿನ ಪತ್ರಕರ್ತರದ್ದಾಗಿದೆ ಎಂದರು. ಸಮಾಜದಲ್ಲಿರುವ ಕೆಟ್ಟಕಸವನ್ನು ತೆಗೆಯುವ ಕೆಲಸವನ್ನು ಪತ್ರಕರ್ತರು ಮಾಡಬೇಕಾಗಿದೆ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮಾತನಾಡಿ ಕಲ್ಪತರು ನಾಡಿನಲ್ಲಿ ಎರಡು ದಿನಗಳ ಸಮಾವೇಶದಲ್ಲಿ ಹಬ್ಬದ ವಾತಾವರಣದಂತೆ ಸುದ್ದಿ ಮನೆಯ ಎಲ್ಲಾ ಸದಸ್ಯರು ಭಾಗಿಯಾಗಿದ್ದಾರೆ ಎಂದರು. ನಮ್ಮ ನಾಡಿನಲ್ಲಿ ಅನೇಕ ಸಮ್ಮೇಳನಗಳು ನಡೆಯುತ್ತವೆ ಹಾಗೆಯೇ ಪತ್ರಕರ್ತರ ಸವಾಲು ಸಮಸ್ಯೆ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿಯೇ ಸಮ್ಮೇಳನಗಳನ್ನ ನಡೆಸಲಾಗುತ್ತಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘ ಹುಟ್ಟಿ ಸುಮಾರು 93 ವರ್ಷಗಳ ಈ ಹಾದಿಯಲ್ಲಿ ಅನೇಕರು ಸಂಘವನ್ನು ಕಟ್ಟಿ ಬೆಳೆಸಿದ್ದಾರೆ ವೃತ್ತಿ ಬದುಕನ್ನು ಉಳಿಸಿಕೊಳ್ಳಬೇಕಾದ ಪತ್ರಕರ್ತರು ಈ ಸಂಘವನ್ನು ಅಪ್ಪಿಕೊಂಡಿದ್ದಾರೆ ಸಂಘದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಸದಸ್ಯರು ಸಕ್ರಿಯವಾಗಿ ನೊಂದಾಯಿಸಿಕೊಂಡು ಸುದ್ದಿ ಮನೆಯಲ್ಲಿ ಕಾರ್ಯನಿರತರಾಗಿದ್ದಾರೆ ಎಂದರು. ವೇದಿಕೆಯಲ್ಲಿ ಐಎಫ್ ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್, ರಾಷ್ಟ್ರೀಯ ಮಂಡಳಿ ಸದಸ್ಯ ಮಧುಕರ್, ಎಸ್. ನಾಗಣ್ಣ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಶ್ರೀನಿವಾಸ್, ವೆಂಕಟೇಶ್, ಮಾಜಿ ಸಚಿವ ಹಾಗೂ ಶಾಸಕ ಜಯಚಂದ್ರ, ಕೆ. ಷಡಕ್ಷರಿ, ಚಿದಾನಂದಗೌಡ, ರಾಜೇಂದ್ರ ಇಕರರಿದ್ದರು.