ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಲವು ಸೌಲಭ್ಯಗಳ ಕೊರತೆಯಿಂದಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು, ಸಾರ್ವಜನಿಕರು ಚಿಕಿತ್ಸೆಗಾಗಿ ಬರುವಂತಾಗಿದೆ. ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ದೊರೆಯವ ಹಲವು ಸೌಲಭ್ಯಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒದಗಿಸಿಕೊಟ್ಟರೆ ತಾಲೂಕು ಮಟ್ಟದ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಹಾಗಾಗಿ ಆರೋಗ್ಯಾಧಿಕಾರಿಗಳು, ವೈದ್ಯರು ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಪಟ್ಟಿಮಾಡಿ ಕೊಡಿ, ಜತೆಗೆ ಆಸ್ಪತ್ರೆಗಳಲ್ಲಿ ಕೊರತೆ ಇರುವ ವೈದ್ಯರು, ಸ್ಟಾಫ್ ನರ್ಸ್‌ಗಳು, ಲ್ಯಾಬ್ ಟೆಕ್ನಿಷಿಯನ್‌ಗಳು ಸೇರಿ ಸಿಬ್ಬಂದಿ ನೇಮಕಕ್ಕೆ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಸರಕಾರಿ ವ್ಯವಸ್ಥೆಯಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸುವುದು ಸುಲಭ. ಆದರೆ, ಅವುಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದು ಬಹಳ ಕಷ್ಟವಾಗುತ್ತಿದೆ. ಎಲ್ಲವನ್ನು ಸರಕಾರಗಳೇ ಮಾಡಲು ಸಾಧ್ಯವಿಲ್ಲ ಹಾಗಾಗಿ ಸರಕಾರಿ ಶಾಲೆಗಳು, ಆಸ್ಪತ್ರೆಗಳ ಅಭಿವೃದ್ಧಿಗೆ ಸಮುದಾಯಗಳು ಸಹ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎ. ಅರವಿಂದ್ ಮಾತನಾಡಿ, ಚಿಕ್ಕಬ್ಯಾಡರಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವು ಈ ಭಾಗದ ಹಳ್ಳಿಗಳ ಜನರಿಗೆ ಕಳೆದ 40 ವರ್ಷಗಳಿಂದಲೂ ಉತ್ತಮ ಸೇವೆ ನೀಡಿದೆ, ಆಸ್ಪತ್ರೆಗೆ ಹೊಸಕಟ್ಟಡ ನಿರ್ಮಾಣ ಮಾಡಬೇಕೆನ್ನುವುದು ಈ ಭಾಗದ ಜನರ ಆಶಯವಾಗಿತ್ತು. ಅದರಂತೆ ಮಾದರಿ ಹೊಸಕಟ್ಟಡ ನಿರ್ಮಿಸಲಾಗಿದೆ. ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷ ಕಠಾರಿ ಶಂಕರ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ಸಿಬ್ಬಂದಿ ಕೊರತೆ ಹಾಗೂ ಆಂಬ್ಯುಲೆನ್ಸ್ ಅವಶ್ಯಕತೆಯಿದೆ. ಜತೆಗೆ ಆಸ್ಪತ್ರೆಯ ಸುತ್ತಲು ಕಾಂಪೌಂಡ್ ನಿರ್ಮಿಸಿ ಸಾರ್ವಜನಿಕರು, ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಸಮಾರಂಭದಲ್ಲಿ ಪ್ರಭಾರಿ ಟಿಎಚ್‌ಒ ಧನಂಜಯ್, ಗ್ರಾಪಂ ಉಪಾಧ್ಯಕ್ಷೆ ಕುಮಾರಿ, ಸದಸ್ಯರಾದ ಮಂಗಳಮ್ಮ, ಮಹದೇವಮ್ಮ, ಆನಂದ್, ಲಿಂಗರಾಜು, ಶಿವಲಿಂಗು, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಟಿ.ಎಚ್.ದೀಪಕ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಕಾಂತರಾಜು, ಎಸ್.ಜೆ.ನರಸಿಂಹಮೂರ್ತಿ, ಶಿವಮ್ಮ, ಪುಟ್ಟಸ್ವಾಮಿ, ಮುಖಂಡರಾದ ಮಹದೇವಪ್ಪ, ಶಿವಣ್ಣ, ಶಂಕರೇಗೌಡ ಸೇರಿದಂತೆ ಮುಖಂಡರು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.