ಸಾರಾಂಶ
ಹನುಮಧ್ವಜ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಸಮಸ್ತ ಭಾರತೀಯರ ಸಂಕೇತವಾಗಿದೆ. ವಿನಾಕಾರಣ ಪ್ರಕರಣವನ್ನು ಹುಟ್ಟುಹಾಕಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು.
ಬಳ್ಳಾರಿ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಿರುವ ಸರ್ಕಾರದ ಕ್ರಮ ಖಂಡಿಸಿ ಕಲ್ಯಾಣರಾಜ್ಯ ಪ್ರಗತಿ ಪಕ್ಷದ(ಕೆಆರ್‌ಪಿಪಿ) ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕೆರಗೂಡು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಎದುರುಗಿನ ರಂಗಮಂದಿರ ಆವರಣದಲ್ಲಿನ ಸರ್ಕಾರಿ ಜಾಗದಲ್ಲಿ ಗ್ರಾಮಸ್ಥರು ಸ್ವಯಂ ಆಸಕ್ತಿಯಿಂದ ಸಂಗ್ರಹಿಸಿದ ದೇಣಿಗೆಯ ಹಣದಲ್ಲಿ 108 ಅಡಿ ಎತ್ತರದ ಆಂಜನೇಯ ಧ್ವಜಸ್ತಂಭ ನಿರ್ಮಿಸಿ, ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಿಸಲಾಗಿತ್ತು. ಇದಕ್ಕೆ ಗ್ರಾಮ ಪಂಚಾಯಿತಿಯ ಅನುಮತಿಯನ್ನು ಸಹ ಪಡೆಯಲಾಗಿತ್ತು.ಆದರೆ, ಜ. 26ರಂದು ಹನುಮಧ್ವಜ ತೆರವುಗೊಳಿಸಿ, ರಾಷ್ಟ್ರಧ್ವಜ ಹಾರಿಸಿದ್ದಾರೆ. ಸಂಜೆ ಮತ್ತೆ ರಾಷ್ಟ್ರಧ್ವಜ ತೆರವುಗೊಳಿಸಿದ ಬಳಿಕ ಹನುಮಧ್ವಜ ಹಾರಿಸಲಾಗಿದೆ. ಇದನ್ನು ಸಹಿಸದ ಕೆಲವರು ಸರ್ಕಾರಿ ಜಾಗದಲ್ಲಿ ಹನುಮಧ್ವಜ ಹಾರಿಸಲಾಗಿದೆ ಎಂದು ತಾಪಂಗೆ ದೂರು ನೀಡಿದ ಹಿನ್ನೆಲೆಯಲ್ಲಿ ಹನುಮಧ್ವಜ ತೆರವುಗೊಳಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ. ಹನುಮಧ್ವಜ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಸಮಸ್ತ ಭಾರತೀಯರ ಸಂಕೇತವಾಗಿದೆ. ವಿನಾಕಾರಣ ಪ್ರಕರಣವನ್ನು ಹುಟ್ಟುಹಾಕಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ತೆರವಾದ ಹನುಮಧ್ವಜವನ್ನು ಮತ್ತೆ ಅದೇ ಸ್ಥಳದಲ್ಲಿ ಇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಗೋನಾಳ್ ರಾಜಶೇಖರಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪಕ್ಷದ ಜಿಲ್ಲಾ ಪ್ರಮುಖರಾದ ಹಂಪಿ ರಮಣ, ಅಂಜಿನಿ ಕೊಳಗಲ್, ಹನುಮೇಶ್ ಉಪ್ಪಾರ, ದರಪ್ಪ ನಾಯಕ, ವಿಜಯಕುಮಾರ್ ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದ ಪ್ರತಿಭಟನಾಕಾರರು, ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.