ಸಾರಾಂಶ
ಹುಬ್ಬಳ್ಳಿ: ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಕಿರಿಯ ವೈದ್ಯರು ಕಳೆದ ಒಂದು ವಾರದಿಂದ ಮುಷ್ಕರ ನಡೆಯುತ್ತಿದ್ದು, ಇಲ್ಲಿನ ಕಿಮ್ಸ್ ಮುಂಭಾಗದಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರ ಸ್ಥಳಕ್ಕೆಶಾಸಕ, ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಈ ವೇಳೆ ಕಿರಿಯ ವೈದ್ಯರು ತಮಗೆ ಆಗಿರುವ ಸಮಸ್ಯೆ ಕುರಿತು ಶಾಸಕರ ಎದುರು ಅಳಲು ತೋಡಿಕೊಂಡರು. ಕಳೆದ 12 ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದರೂ ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿಲ್ಲ. ಪ್ರತಿ ಬಾರಿಯೂ ನಾವು ಹೋರಾಟ ನಡೆಸಿ ನಮ್ಮ ಬೇಡಿಕೆ ಈಡೇರಿಸಿಕೊಳ್ಳುವಂತಾಗಿದೆ.ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಸಂಘಟನೆಯ ನೇತೃತ್ವದಲ್ಲಿ ಎಲ್ಲೆಡೆಯೂ ತುರ್ತುಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆ ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದರೂ ನಮ್ಮ ಬಳಿ ಯಾವೊಬ್ಬ ಶಾಸಕರಾಗಲಿ, ಸಚಿವರಾಗಲಿ ಬಂದು ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿಲ್ಲ. ಚಿಕಿತ್ಸೆ ಕೈಬಿಟ್ಟು ಹೋರಾಟ ನಡೆಸುತ್ತಿರುವ ವೇದಿಕೆಯ ಬಳಿ ನಮ್ಮನ್ನು ನೋಡಿ ರೋಗಿಗಳು ಬಂದು ಆರೋಗ್ಯ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲೂ ಆಗದಂತಹ ಸ್ಥಿತಿಗೆ ಸರ್ಕಾರ ತಂದೊಡ್ಡಿದೆ ಎಂದು ಶಾಸಕರ ಮುಂದೆ ವೈದ್ಯ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ವೈದ್ಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ವೈದ್ಯರು ನಡೆಸುತ್ತಿರುವ ಮುಷ್ಕರದಿಂದಾಗಿ ಎಲ್ಲಡೆ ರೋಗಿಗಳ ಚಿಕಿತ್ಸೆ ನೀಡುವಲ್ಲಿ ಸಮಸ್ಯೆಯಾಗುತ್ತಿದೆ. ಈ ಕುರಿತು ಸರ್ಕಾರದ ಗಮನಕ್ಕೆ ಬಂದರೂ ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ. ಈ ಕೂಡಲೇ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರೊಂದಿಗೆ ಮಾತನಾಡಿ, ಆದಷ್ಟು ಬೇಗನೆ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.ಈ ವೇಳೆ ಪ್ರತಿಭಟನಾ ನಿರತ ವೈದ್ಯ ವಿದ್ಯಾರ್ಥಿಗಳು ಅರವಿಂದ ಬೆಲ್ಲದ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಿಮ್ಸ್ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ. ಸುಹಾಸ್ ಎಸ್.ಟಿ., ಡಾ. ದೀಪಾ, ಡಾ. ಆದರ್ಶ ಇ.ಎಚ್., ಡಾ. ಹರ್ಷಿತಾ, ಡಾ. ಶಶಾಂಕ, ಡಾ. ರಕ್ಷಿತ್ ಎಂ.ಸಿ., ಪ್ರದೀಪ, ದಿವ್ಯ ಸಿ.ಆರ್. ಸೇರಿದಂತೆ ಹಲವರಿದ್ದರು.