ಕುದೂರು: ಕನ್ನಡ ಶಾಲೆಯಲ್ಲಿ ಓದಿದ ಮಕ್ಕಳು ಇಂದು ವೈದ್ಯರಾಗಿ ಸ್ವಗ್ರಾಮದ ಜನರಿಗೆ ಚಿಕಿತ್ಸೆ ನೀಡುತ್ತಿರುವ ಕುದೂರು ಗ್ರಾಮದ ಡಾ.ದಿವಾಕರ್ ಮತ್ತು ಅವರ ಗೆಳೆಯರ ಕಾರ್ಯ ಶ್ಲಾಘನೀಯ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ಕುದೂರು: ಕನ್ನಡ ಶಾಲೆಯಲ್ಲಿ ಓದಿದ ಮಕ್ಕಳು ಇಂದು ವೈದ್ಯರಾಗಿ ಸ್ವಗ್ರಾಮದ ಜನರಿಗೆ ಚಿಕಿತ್ಸೆ ನೀಡುತ್ತಿರುವ ಕುದೂರು ಗ್ರಾಮದ ಡಾ.ದಿವಾಕರ್ ಮತ್ತು ಅವರ ಗೆಳೆಯರ ಕಾರ್ಯ ಶ್ಲಾಘನೀಯ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ಕುದೂರು ಸ್ಟೆಷಾಲಿಟಿ ಆಸ್ಪತ್ರೆ ಉದ್ಘಾಟನೆ, ಸಜ್ಜನ ಟ್ರಸ್ಟ್ ಮತ್ತು ಡಾ.ಮಧುಕರ ಶೆಟ್ಟಿ ಬಳಗದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಆರೋಗ್ಯ ಶಿಬಿರ ಮತ್ತು ಕೃತಜ್ಞತಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜೀವನವೆಲ್ಲಾ ಆರೋಗ್ಯವನ್ನು ಕಡೆಗಣಿಸಿ ದುಡಿಮೆ ಕಡೆಗೆ ಮನುಷ್ಯ ಗಮನ ಕೊಡುತ್ತಾನೆ. ನಂತರ ದುಡಿದದ್ದೆಲ್ಲವನ್ನು ಆರೋಗ್ಯ ಸರಿಪಡಿಸಿಕೊಳ್ಳುವುದಕ್ಕಾಗಿ ಖರ್ಚು ಮಾಡುತ್ತಾನೆ. ಇದು ನಿಜಕ್ಕೂ ವಿಪರ್ಯಾಸ. ಸದೃಢ ದೇಹದಲ್ಲಿ ಸದೃಢ ಮನಸಿರುತ್ತದೆ. ಕಾಯಿಲೆ ದೇಹದ ಸ್ಥಿತಿಯಿಂದ ಮಾನಸಿಕ ಸ್ಥಿತಿಗೆ ವಿಸ್ತರಿಸಬಾರದು. ದೇಹದ ಕಾಯಿಲೆಗಳನ್ನು ವಾಸಿ ಮಾಡುವುದು ನಿಜಕ್ಕೂ ಸುಲಭ. ಆದರೆ ಮಾನಸಿಕ ಕಾಯಿಲೆ ವಾಸಿ ಮಾಡುವುದು ಕಷ್ಟಸಾಧ್ಯ ಎಂದು ಹೇಳಿದರು.ಆದಿಚುಂದನಗಿರಿ ಮಹಾಸಂಸ್ಥಾನ ಮಠದ ಶ್ರೀ.ಡಾ.ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಹೆಚ್ಚು ಆಸ್ಪತ್ರೆಗಳು ಬರುತ್ತಿವೆ ಅಂದರೆ ನಾವು ಹೆಚ್ಚು ಪ್ರಬುದ್ದರಾಗಿಲ್ಲ ಎಂದರ್ಥ. ಆರೋಗ್ಯದ ಕಡೆಗೆ ಕಾಳಜಿ ಕೊಟ್ಟಿಲ್ಲ ಎಂಬುದು ವೇದ್ಯವಾಗುತ್ತದೆ. ದೇಹದ ಕಾಯಿಲೆಗಳು ಪ್ರಕಟವಾಗುವ ಮುನ್ನ ಮಾನಸಿಕವಾಗಿ ಅದು ಸೂಚನೆ ನೀಡಿರುತ್ತದೆ. ಆದರೆ ಆಗ ನಾವು ಎಚ್ಚರವಾಗುವುದೇ ಇಲ್ಲ. ಇಲ್ಲಿನ ಸ್ಪೆಷಾಲಿಟಿ ಆಸ್ಪತ್ರೆ ಸುತ್ತಲಿನ ನಲವತ್ತು ಗ್ರಾಮಸ್ಥರಿಗೆ ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ. ನಮ್ಮ ಬಿಜಿಎಸ್ ಆಸ್ಪತ್ರೆಯೂ ನಿಮ್ಮ ಸೇವೆಯಲ್ಲಿ ಕೈಜೋಡಿಸುತ್ತದೆ ಎಂದು ಹೇಳಿದರು.
ಸಂಸದ ಡಾ.ಮಂಜುನಾಥ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡುವ ವೈದ್ಯರಿಗೆ ಖಾಸಗಿ ಮತ್ತು ಸರ್ಕಾರ ಜಂಟಿ ಪ್ರಾಯೋಜಕತ್ವದಲ್ಲಿ ಹತ್ತು ವರ್ಷಗಳ ಕಾಲ ಟ್ಯಾಕ್ಸ್ ಪ್ರೀ ಎಂದು ಮಾಡಿದರೆ ಗ್ರಾಮೀಣರಿಗೆ ಆರೋಗ್ಯ ಚಿಕಿತ್ಸೆಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ. ಇಂದು ರೋಗ ಇಲ್ಲದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಅರ್ಥ ಬೇರೊಬ್ಬರ ಏಳಿಗೆ ಕಂಡು ಹೊಟ್ಟೆ ಕಿಚ್ಚು ಪಡುವವರು ಎಂದರ್ಥ. ಇಂತಹವರು ಬಹುಬೇಗ ಮಾನಸಿಕ ಅಸ್ವಸ್ಥರಾಗುತ್ತಾರೆ. ಐಸಿಯುನಲ್ಲಿರುವ ರೋಗಿಯನ್ನು ಕಂಡಾಗ ಆರೋಗ್ಯದ ಮಹತ್ವ ತಿಳಿಯುತ್ತದೆ. ಜೈಲಿನಲ್ಲಿರುವ ಕೈದಿಗಳನ್ನು ಕಂಡಾಗ ಸ್ವಾತಂತ್ರ್ಯದ ಬೆಲೆ ಗೊತ್ತಾಗುತ್ತದೆ. ಸ್ಮಶಾನದಲ್ಲಿ ಗೋರಿಗಳನ್ನು ಕಂಡಾಗ ಜೀವನದ ಮಹತ್ವ ಗೊತ್ತಾಗುತ್ತದೆ ಎಂದು ಹೇಳಿದರು.ಡಾ.ದಿವಾಕರ್ ಮಾತನಾಡಿ, ಮನುಷ್ಯ ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರು, ತನ್ನ ಹುಟ್ಟೂರಿನ ಸೆಳೆತ ಕಳೆದುಕೊಳ್ಳಬಾರದು. ಇಡೀ ಊರೇ ನಮ್ಮನ್ನು ಆಡಿಸಿ ಬೆಳೆಸಿ ಹರಸಿದಾಗ ಅನ್ನಹಾಕಿದ ಋಣವನ್ನು ತೀರಿಸಬೇಕು. ಅದಕ್ಕಾಗಿ ನನ್ನ ಹುಟ್ಟೂರಿಗೆ ಸುಸಜ್ಜಿತ ಆಸ್ಪತ್ರೆ ತರಬೇಕೆಂದು ತೀರ್ಮಾನಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಗೋವಿಂದರಾಜ್ ರಾಮಯ್ಯ, ಡಾ.ಕೆ.ಶಂಕರಪ್ರಸಾದ್, ಎಸ್.ಆರ್.ರಘುನಾಥ್. ಡಾ.ಮಂಜುನಾಥ್, ಡಾ.ಸುರೇಖಾ, ಜಯಚಂದ್ರಬಾಬು, ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಕೆ.ಸಿ.ದಯಾನಂದ್, ಮಲ್ಲೇಶ್ ಮತ್ತಿತರರು ಭಾಗವಹಿಸಿದ್ದರು.21ಕೆಆರ್ ಎಂಎನ್ 6.ಜೆಪಿಜಿ
ಕುದೂರು ಗ್ರಾಮದಲ್ಲಿ ಸಜ್ಜನ ಟ್ರಸ್ಟ್ ಮತ್ತು ಡಾ.ಕೆ.ಮಧುಕರಶೆಟ್ಟಿ ಬಳಗ ಏರ್ಪಡಿಸಿದ್ದ ಆರೋಗ್ಯ ಶಿಬಿರ ಮತ್ತು ಕೃತಜ್ಞತಾ ಸಮಾರಂಭ ಹಾಗೂ ಕುದೂರು ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.