ಸಾರಾಂಶ
-- ಇತ್ತ ಫಸಲು ಇಲ್ಲ,ಅತ್ತ ತೋಟವು ನಾಶ, ಸಂಕಷ್ಟದಲ್ಲಿರುವ ಅಡಕ ಬೆಳಗಾರ,
ನೆಮ್ಮಾರ್ ಅಬೂಬಕರ್ಕನ್ನಡಪ್ರಭ ವಾರ್ತೆ, ಶೃಂಗೇರಿ
ಅಡಕೆ ಮಲೆನಾಡಿನ ವಾಣಿಜ್ಯ ಹಾಗೂ ಜೀವನಾದಾರ ಬೆಳೆಯಾಗಿದೆ. ಈ ಭಾಗದಲ್ಲಿ ಬೆಳೆಗಾರರು ತಲತಲಾಂತರ ದಿಂದ ಪಾರಂಪರಿಕವಾಗಿ ಅಡಕೆ ಬೆಳೆ ಬೆಳೆಯುತ್ತ ಬಂದಿದ್ದಾರೆ. ಆದರೀಗ ಅಡಕೆಗೆ ಎಲೆಚುಕ್ಕಿ ರೋಗ ತಗುಲಿ ಮಲೆನಾಡಿನ ಬಹುತೇಕ ತೋಟಗಳು ವಿನಾಶದ ಅಂಟಿಗೆ ತಲುಪುತ್ತಿವೆ, ಇತ್ತ ಫಸಲು ಇಲ್ಲ. ಅತ್ತ ತೋಟವೂ ಇಲ್ಲ.ಅಡಕೆ ಬೆಳೆಗಾರರ ಬದುಕು ಆತಂತ್ರವಾಗಿ, ಸಂಕಷ್ಟದಲ್ಲಿದೆ.ಕೊಳೆ ರೋಗ, ಬೇರುಹುಳ ರೋಗ, ಹಳದಿ ಎಲೆ ರೋಗ, ಅತಿವೃಷ್ಠಿ, ನೆರೆ ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪಗಳಿಂದ ತತ್ತರಿಸಿ ಹೋಗಿ , ಇದೀಗ ಚೇತರಿಸಿಕೊಂಡಿದ್ದರೂ ಎಲೆಚುಕ್ಕಿ ರೋಗದಿಂದ ಮಾತ್ರ ಅಡಕೆ ಬೆಳೆಗಾರ ಹೊರ ಬರಲಾಗ ದಂತಹ ಪರಿಸ್ಥಿತಿ ನಿರಂತರವಾಗಿ ಮುಂದುವರೆಯುತ್ತಿದೆ. ಅಡಕೆ ಮರದ ಗರಿಗಳು ಹಳದಿ ಬಣ್ಣಕ್ಕೆ ತಿರುಗಿ, ಫಸಲು ಬಾರದೆ, ಕೆಲವೇ ಸಮಯಗಳಲ್ಲಿ ಮರಗಳು ಒಣಗುತ್ತಾ ಇಡೀ ತೋಟವೇ ಒಣಗಿ ಹೋಗುತ್ತಿವೆ.
ಮಳೆಗಾಲಕ್ಕೆ ಮುಂಚೆ ಔಷಧಿ ಸಿಂಪಡಣೆ ಮಾಡಲಾಗಿತ್ತು. ಕೆಲ ರೈತರು ಎರಡೆರೆಡು ಬಾರಿ ಔಷಧಿ ಸಿಂಪಡಣೆ ಮಾಡಿದ್ದರೂ ರೋಗಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಒಂದೆಡೆ ಔಷಧಿ ಸಿಂಪಡಣೆ, ಪ್ರಯೋಗಗಳು ನಡೆಯುತ್ತಿದ್ದರೂ ಇನ್ನೊಂದೆಡೆ ರೋಗ ವ್ಯಾಪಕವಾಗಿ ಹರಡುತ್ತಿದೆ. ಕೆಲವರು ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ವರ್ಷ ವರ್ಷ ಅಡಕೆ ಫಸಲು ಕಡಿಮೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ ಅಡಕೆ ಬೆಳೆಯೇ ಪ್ರಮುಖ ಬೆಳೆಯಾಗಿದೆ.ಸರ್ಕಾರದ ಮಟ್ಟದಲ್ಲಿ ಎಲೆ ಚುಕ್ಕಿ ರೋಗ ಚರ್ಚೆಗೆ ಗ್ರಾಸದ ವಿಷಯವಾಗಿತ್ತು. ಕೇಂದ್ರ ಸರ್ಕಾರ ಈ ರೋಗ ಸಂಶೋಧನೆಗೆ 5 ಜನ ವಿಜ್ಞಾನಿಗಳ ತಂಡ ನೇಮಿಸಿತ್ತು. ಸಂಶೋಧನೆ ಏನಾಯಿತೋ ಗೊತ್ತಿಲ್ಲ. ಆದರೆ ಚುಕ್ಕಿ ರೋಗ ಮಾತ್ರ ಇನ್ನಷ್ಠು ಉಲ್ಬಣಿಸಿತು. ಈ ಹಿಂದಿನ ಸರ್ಕಾರದ ಕೃಷಿ ಸಚಿವರು ಎಲೆ ಚುಕ್ಕಿ ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಆದರೆ ಇದುವರೆಗಿನ ಸರ್ಕಾರದ ಯಾವುದೇ ವರದಿಯಾಗಲೀ, ವಿಜ್ಞಾನಿಗಳ ಸಂಶೋಧನೆಗಳಾಗಲೀ ಇದಕ್ಕೆ ಯಾವುದೇ ಪರಿಹಾರ ನೀಡಿಲ್ಲ. ಎಲೆ ಚುಕ್ಕಿ ರೋಗಕ್ಕೆ ಕಾರಣವೂ ಕಂಡು ಹಿಡಿಯಲಾಗಿಲ್ಲ. ಸರ್ಕಾರದ ಚರ್ಚೆ, ಭರವಸೆಗಳು, ಅಧಿಕಾರಗಳ, ವಿಜ್ಞಾನಿಗಳ ವರದಿ, ಸಂಶೋದನೆಗಳಿಗೆ ಮಾತ್ರ ಸೀಮಿತವಾಗಿ ಎಲೆಚುಕ್ಕಿ ರೋಗ ಮುಂದುವರೆಯುತ್ತಿದೆ.ಪ್ರತಿಬಾರಿ ಚುನಾವಣೆ ವಿಷಯವಾಗಿ ಎಲೆ ಚುಕ್ಕಿ ರೋಗ ಜೀವಂತವಾಗಿ ಉಳಿದುಕೊಂಡು ಬಂದಿದೆ. ತಾಲೂಕಿನಲ್ಲಿ ಅಡಕೆ ಸಂಶೋಧನೆ ಕೇಂದ್ರ, ವಿಜ್ಞಾನಿಗಳಿದ್ದರೂ ಇದಕ್ಕೆ ಕಾರಣವಾಗಲೀ, ಪರಿಹಾರವಾಗಲೀ ಇನ್ನು ಕಂಡುಹಿಡಿಯಲಾಗಿಲ್ಲ. ದಿನೇ ದಿನೇ ರೈತರ ಬದುಕನ್ನೇ ಕಸಿದುಕೊಳ್ಳುತ್ತಿದೆ. ಅತೀಯಾದ ಮಳೆ, ಥಂಡಿ, ಹವಮಾನ ವೈಪರೀತ್ಯ ಎಂಬಿತ್ಯಾದಿ ಕಾರಣ ಗಳೆಂದು ಹೇಳುತ್ತಿದ್ದಾರೆ. ವಿನಾ ವೈಜ್ಞಾನಿಕ ಕಾರಣ ಇನ್ನು ಕಂಡುಹಿಡಿಯಲಾಗದಿರುವುದು ಆಶ್ಚರ್ಯವೇ ಸರಿ.
ಸರ್ಕಾರದ ಭರವಸೆ, ವಿಜ್ಞಾನಿಗಳ ಸಂಶೋಧನೆಗಳ ಮೇಲೆ ಕಳೆದ ಅನೇಕ ವರ್ಷಗಳಿಂದ ನಂಬಿಕೆಯಿಟ್ಟುಕೊಂಡು ಬಂದಿದ್ದ ಅಡಕೆ ಬೆಳೆಗಾರರು ಈಗ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಇತ್ತ ಅಧಿಕಾರಿಗಳ ಸೂಕ್ತ ವರದಿಯೂ ಇಲ್ಲ. ಆದರೆ ಎಕರೆಗಟ್ಟಲೆ ತೋಟಗಳನ್ನೇ ಬೆಳೆಗಾರರು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರಗಳು ಮನಸ್ಸು ಮಾಡಿದರೆ ಪರಿಹಾರ ಕಂಡುಹಿಡಿಯಲು ಕಷ್ಟವಿಲ್ಲ.ಒಟ್ಟಾರೆ ಮಳೆ, ಬಿಸಿಲು, ಹವಾಮಾನ ವೈಪರಿತ್ಯ ಏನೇ ಇದ್ದರೂ ದಿನದಿಂದ ದಿನಕ್ಕೆ ಎಲೆಚುಕ್ಕಿ ರೋಗ ಮಾತ್ರ ತನ್ನ ವ್ಯಾಪಕತೆ, ತೀವ್ರಗೊಳಿಸುತ್ತಿದೆ. ರೈತರ ನೆಮ್ಮದಿ ಕಸಿದುಕೊಳ್ಳುತ್ತಿದೆ.
---ಬಾಕ್ಸ್ ---ಎಲೆಚುಕ್ಕಿ ರೋಗ ಪೀಡಿತ ಪ್ರದೇಶಗಳಿಗ ಅಧಿಕಾರಿಗಳು, ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇಲಾಖೆ ಯಿಂದ ಎಲ್ಲಾ ರೀತಿಯ ಕೆಲಸ ನಡೆಯುತ್ತಿದೆ. ಸಿಂಪಡಣೆಗೆ ಔಷಧಿಗಳನ್ನು ನೀಡಲಾಗಿದೆ. ಇದುವರೆಗೂ ಸಂಶೋಧನೆ ನಡೆದಿದ್ದು, ಈಗಲೂ ನಡೆಯುತ್ತಿದೆ. ಹವಮಾನ ವೈಪರಿತ್ಯದಿಂದ ಈ ರೋಗ ವ್ಯಾಪಕವಾಗಿ ಹರಡುತ್ತಿದೆ
ರೋಗ ನಿಂಯತ್ರಣಕ್ಕೆ ಸಂಬಂಧಿಸಿದಂತೆ ರೈತರಿಗೆ ಅನೇಕ ಮಾಹಿತಿ ನೀಡಲಾಗುತ್ತಿದೆ. ವಿಜ್ಞಾನಿಗಳ ತಂಡ,ಅಧಿಕಾರಿಗಳ ತಂಡ ಎಲೆಚುಕ್ಕಿ ರೋಗ ನಿಯಂತ್ರಿಸಲು ಕೆಲಸ ಮಾಡುತ್ತಿದೆ.-ಶ್ರೀ ಕೃಷ್ಣ.
ಸಹಾಯಕ ನಿರ್ದೇಶಕ.ತೋಟಗಾರಿಕೆ ಇಲಾಖೆ, ಶೃಂಗೇರಿ.ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು
ಕೇಂದ್ರ ಅಥವಾ ರಾಜ್ಯಸರ್ಕಾರ ಈ ವಿಷಯದ ಕುರಿತು ರಾಜಕಾರಣ ಮಾಡಬಾರದು. ಇದು ಕೇವಲ ಚರ್ಚೆ ವಿಷಯವಲ್ಲ. ರೈತರ ಬದುಕಿನ ಪ್ರಶ್ನೆ. ಅಡಕೆ ಬೆಳೆಯನ್ನೇ ನಂಬಿದ್ದ ಮಲೆನಾಡಿನ ಅಡಕೆ ಬೆಳೆಗಾರರ ಬದುಕು ಆತಂತ್ರವಾಗಿದೆ. ಈ ಹಿಂದಿನ ಅವಧಿಯಲ್ಲಿನ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಇದ್ದದ್ದು, ಸಮಸ್ಯೆ ಹೆಚ್ಚಲು ಕಾರಣವಾಗಿದೆ.ಕೇಂದ್ರ ಸರ್ಕಾರ ನೇಮಿಸಿದ 5 ವಿಜ್ಞಾನಿಗಳ ತಂಡದ ಸಂಶೋಧನೆ ಪಲಿತಾಂಶ ಬಹಿರಂಗಗೊಂಡಿಲ್ಲ. ರೈತರು ಸಂಕಷ್ಟ ದಲ್ಲಿದ್ದಾರೆ. ಕೂಡಲೇ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
-ಕೆ.ಎಂ.ರಾಮಣ್ಣ ಕರುವಾನೆ.ಅಡಕೆ ಬೆಳೆಗಾರ.ಶೃಂಗೇರಿ.27 ಶ್ರೀ ಚಿತ್ರ 1-,2.ಶೃಂಗೇರಿ ತಾಲೂಕಿನಲ್ಲಿ ಎಲೆಚುಕ್ಕಿ ರೋಗವು ವ್ಯಾಪಕವಾಗಿ ಹರಡುತ್ತಿರುವುದರಿಂದ ಒಣಗುತ್ತಿರುವ ಅಡಕೆ ತೋಟಗಳು.27 ಶ್ರೀ ಚಿತ್ರ 3-
ಶ್ರೀ ಕೃಷ್ಣ.ತೋಟಗಾರಿಕಾ ಇಲಾಖೆ.27 ಶ್ರೀ ಚಿತ್ರ 4.ಕೆ.ಎಂ .ರಾಮಣ್ಣ ಕರುವಾನೆ