ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮನುಷ್ಯನಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುತೇಕ ರೋಗಗಳಿಗೆ ಅಶುದ್ಧ ನೀರಿನ ಸೇವನೆ ಕಾರಣ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಪಟ್ಟಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಜಲಜೀವನ್ ಮಿಷನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಭೂಮಿಗೆ ಬಹುತೇಕ ರಾಸಾಯನಿಕಯುಕ್ತ ಪ್ಲಾಸ್ಟಿಕ್‌ನಂತಹ ವಸ್ತು ಸೇರ್ಪಡೆಯಾಗಿ ಕುಡಿಯುವ ನೀರು ಕಲುಷಿತವಾಗುತ್ತಿದೆ ಎಂದರು.
ಕ್ಷಾರಯುಕ್ತ, ಪ್ಲೋರೈಡ್ ಅಂಶದ ನೀರು ಸೇವನೆ ನಾನಾ ರೋಗ ತರುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಬಹುತೇಕ ಗ್ರಾಮಗಳಲ್ಲಿ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ಎಲ್ಲರಿಗೂ ಶುದ್ಧ ನೀರು ಸಿಗುತ್ತಿಲ್ಲ. ಈ ದೃಷ್ಟಿಯಿಂದ ಕೇಂದ್ರ, ರಾಜ್ಯ ಸರ್ಕಾರದ ಸಹಯೋಗದಲ್ಲಿ ಮನೆಮನೆಗೆ ಶುದ್ಧಗಂಗೆ ಸರಬರಾಜು ಮಾಡಲು ಕಾರ್ಯಗತವಾಗಿದೆ ಎಂದರು.ಸುಮಾರು 3 ಕೋಟಿ ರು. ಅಂದಾಜು ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ. ಗುಣಮಟ್ಟದ ಕಾಮಗಾರಿ ಜೊತೆಗೆ ಕುಡಿಯುವ ನೀರಿನ ಪೈಪ್ ಬದಲು ಹೊಸದಾಗಿ ಕುಡಿಯುವ ನೀರಿನ ಸರಬರಾಜು ಪೈಪ್ ಅಳವಡಿಸಲಾಗುವುದು. ಬೇಸಿಗೆ ಆರಂಭವಾಗಿದೆ. ನೀರಿನ ಸಂರಕ್ಷಣೆ, ಕಲುಷಿತ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದರು.
ರಸ್ತೆಗಳನ್ನು ಕಾಮಗಾರಿ ವೇಳೆ ಅಗೆದು ಗುಂಡಿ ಮಾಡಿದರೆ ನಂತರ ಮೊದಲಿನಂತೆ ರಸ್ತೆ ನಿರ್ಮಿಸಿ ಕೊಡುವುದು ಗುತ್ತಿಗೆದಾರ ಜವಾಬ್ದಾರಿಯಾಗಿದೆ. ತ್ವರಿತವಾಗಿ ಕಾಮಗಾರಿ ಮುಗಿಸಿಕೊಡಲು ತಿಳಿಸಲಾಗಿದೆ ಎಂದರು.ಈ ವೇಳೆ ಗ್ರಾಪಂ ಅಧ್ಯಕ್ಷ ಕೆ.ಆರ್.ರಾಜೇಶ್, ಉಪಾಧ್ಯಕ್ಷೆ ಸರಸ್ವತಿ, ಪಿಡಿಒ ಚಲುವರಾಜು, ಸದಸ್ಯರಾದ ಎಸ್.ಕೆ.ಬಾಲಕೃಷ್ಣ, ಕೆ.ಆರ್.ಕೃಷ್ಣ, ಕೆ.ಆರ್.ಪುಟ್ಟರಾಜು, ಚಂದ್ರಶೇಖರ್, ರೇಣುಕಾ, ಮುಖಂಡರಾದ ಕಾಯಿ ಮಂಜೇಗೌಡ, ಮಲ್ಲೇಶ್, ಶೇಖರ್, ಅಣ್ಣಯ್ಯ, ಮಂಜು, ಗೋವಿಂದರಾಜು, ದೇವರಾಜು, ಕಾರ್ಯದರ್ಶಿ ಪಾಪೇಗೌಡ, ಲೆಕ್ಕ ಸಹಾಯಕ ವಾಸು ಉಪಸ್ಥಿತರಿದ್ದರು.