ಸಾರಾಂಶ
- ಬಿಜೆಪಿ, ಜೆಡಿಎಸ್ ವಿರುದ್ಧ ಕಾಂಗ್ರೆಸ್ ನೇತೃತ್ವದ ಪ್ರತಿಭಟನೆಯಲ್ಲಿ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಆರೋಪ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಿದ್ದರಾಮಯ್ಯ ಅವರು 40 ವರ್ಷಗಳ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಕಪ್ಪುಚುಕ್ಕೆ ಇಲ್ಲದಂತೆ, ಕಳಂಕ ರಹಿತ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಆಗಿರುವ ಅವರ ವಿರುದ್ಧ ಖಾಸಗಿ ವ್ಯಕ್ತಿಯೊಬ್ಬರು ನೀಡಿದ ದೂರು ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸದೇ ಕೇಂದ್ರ ಸರ್ಕಾರ, ಬಿಜೆಪಿ, ಜೆಡಿಎಸ್ ಪಕ್ಷಗಳ ಒತ್ತಡಕ್ಕೆ ಮಣಿದು ರಾಜ್ಯಪಾಲರು ಏಕಾಎಕಿಯಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಶುಕ್ರವಾರ ಕಾಂಗ್ರೆಸ್ ಪಕ್ಷ, ಅಹಿಂದ ಒಕ್ಕೂಟ, ಸಿದ್ದರಾಮಯ್ಯ ಅಭಿಮಾನಿ ಬಳಗ, ರೈತರು, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯಪಾಲರ ಕ್ರಮ ಖಂಡಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ರಾಜ್ಯಪಾಲರ ನಡೆಯಿಂದ ಪ್ರಜಾಪ್ರಭುತ್ವಡಿಯಲ್ಲಿ ಸ್ಪಷ್ಟ ಬಹುಮತ ಪಡೆದು ಆಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಅಪಮಾನವಾಗಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಸಿಎಂ ಅಧಿಕಾರದಿಂದ ಕೆಳಗಿಸಲು ಸಂಚು ರೂಪಿಸಿದ್ದಾರೆ. ಇದರ ಹಿಂದೆ ಹಲವು ಕಾರಣಗಳಿವೆ. ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಕೆಳಗಿಸಿದರೆ ಅವರನ್ನು ರಾಜಕೀಯವಾಗಿ ಮುಗಿಸಿಬಿಡಬಹುದು. ಶಾಶ್ವತವಾಗಿ ಅಹಿಂದ ವರ್ಗವನ್ನು ಅಧಿಕಾರದಿಂದ ದೂರವಿಡಬಹುದು ಎನ್ನುವ ಲೆಕ್ಕಾಚಾರ ವಿಪಕ್ಷಗಳಲ್ಲಿದೆ ಎಂದರು.ಭವಿಷ್ಯದ ಪ್ರಧಾನಿ ಸಿದ್ದರಾಮಯ್ಯ:
ಪ್ರಸ್ತುತ ದಿನಗಳಲ್ಲಿ ರಾಜಕೀಯ ಸುದೀರ್ಘ ಅನುಭವ, ಪಾರದರ್ಶಕ ರಾಜಕೀಯ ಜೀವನಶೈಲಿ ಅಧಾರದ ಮೇಲೆ ದೇಶದ ಭವಿಷ್ಯದ ಪ್ರಧಾನಮಂತ್ರಿ ಆಗುವ ಎಲ್ಲ ಅರ್ಹತೆಗಳು, ಲಕ್ಷಣಗಳು ಕರ್ನಾಟಕದ ರಾಜ್ಯದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ. ಈ ನಿರೀಕ್ಷೆ ಕರ್ನಾಟಕದ ಮಹಾಜನತೆ ಆಶೀರ್ವಾದದಿಂದ ನಿಜವಾದರೂ ಅಚ್ಚರಿಪಡಬೇಕಿಲ್ಲ ಎಂದು ಶಾಂತನಗೌಡ ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ವಾಲ್ಮೀಕಿ ನಿಗಮ ಹಗರಣ ಹಾಗೂ ಮುಡಾ ಹಗರಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ. ಈ ಹಗರಣಗಳಿಗೂ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧ ಕೂಡ ಇಲ್ಲ. ಸಿದ್ದರಾಮಯ್ಯ ಅವರು 2 ಬಾರಿ ಉಪ ಮುಖ್ಯಮಂತ್ರಿ, 2 ಮುಖ್ಯಮಂತ್ರಿಯಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿ ರಾಜ್ಯ ಸರ್ಕಾರದ ಆಡಳಿತದ ಎಲ್ಲ ಆಯಾಮಗಳ ಅನುಭವ ಹೊಂದಿದ ಆಪರೋಪದ ರಾಜಕಾರಣಿಯಾಗಿದ್ದಾರೆ ಎಂದರು.
ಕಳೆದ ಚುನಾವಣೆಯಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಜನಪರ 5 ಗ್ಯಾರಂಟಿಗಳನ್ನು ಜಾರಿಗೆ ತಂದು ಯಶಸ್ವಿಯಾಗಿದ್ದಾರೆ. ಈ ಕ್ರಮವನ್ನು ದೇಶದ ಇತರೇ ರಾಜ್ಯಗಳಲ್ಲಿ ಕೂಡ 5 ಗ್ಯಾರಂಟಿಗಳನ್ನು ಚುನಾವಣೆಯಲ್ಲಿ ಘೋಷಿಸಿ, ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಮುಂಬರುವ ದಿನಗಳಲ್ಲಿ ಕೂಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಎಲ್ಲ ಸಾಧ್ಯತೆಗಳಿವೆ. ಇದರಿಂದ ಪ್ರಸ್ತುತ ಕೇಂದ್ರ ಸರ್ಕಾರಕ್ಕೆ ನಡುಕ ಉಂಟಾಗಿದೆ ಎಂದು ದೂರಿದರು.ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿಬಸನಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ವಿಶ್ವನಾಥ್, ಮುಖಂಡ ಆರ್. ನಾಗಪ್ಪ, ಅಲ್ಪಸಂಖ್ಯಾತ ಘಟಕದ ವಾಜೀದ್, ಮಹಿಳಾ ಅಧ್ಯಕ್ಷ ಪುಪ್ಪ ರವೀಶ್, ಅವಳಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ನೆಲಹೊನ್ನೆ ಮೋಹನ್ ಹಾಗೂ ಇತರರು ಮಾತನಾಡಿದರು.
ಶುಕ್ರವಾರ ಬೆಳಗ್ಗೆ ಕನಕದಾಸ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಅಗಮಿಸಿ ನಂತರ ತಾಲೂಕು ಕಚೇರಿಗೆ ಆಗವಿಸಿತು. ಬಳಿಕ ತಹಶೀಲ್ದಾರ್ ಪಟ್ಟರಾಜ ಗೌಡ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭನೆಯಲ್ಲಿ ಹಿರಿಯ ಮುಖಂಡ ಎಚ್.ಎ. ಉಮಾಪತಿ, ಮಧುಗೌಡ, ಸಾಸ್ವೇಹಳ್ಳಿ ಚಂದ್ರಶೇಖರಪ್ಪ, ಗದ್ದಿಗೇಶ್, ನ್ಯಾಮತಿ ನುಜ್ಜಿನ ವಾಗೀಶ್, ಕುಂಬಳೂರು ವಾಗೀಶ್, ದಿಡಗೂರು ತಮ್ಮಣ್ಣ, ಚೀಲೂರು ಪಾರ್ವತಮ್ಮ, ಕ್ಯಾಸಿನಕೆರೆ ಚಂದ್ರಶೇಖರಪ್ಪ, ನರಸಿಂಹಪ್ಪ, ಪುರಸಭೆ ಚುನಾಯಿತ ಪ್ರತಿನಿಧಿಗಳು, ಅವಳಿ ತಾಲೂಕುಗಳ ಅನೇಕ ಮುಖಂಡರು ಇದ್ದರು.
- - -ಕೋಟ್
ರಾಜ್ಯಪಾಲರು ಹಗರಣಗಳ ತನಿಖೆಗೆ ಅನುಮತಿ ನೀಡಿದ್ದಾರೆಯೇ ಹೊರತು, ಎಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಿಲ್ಲ. ಈ ಕಾರಣದಿಂದ ಸಿದ್ದರಾಮಯ್ಯ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವ ಆಗುವುದಿಲ್ಲ- ಡಿ.ಜಿ.ಶಾಂತನಗೌಡ, ಶಾಸಕ, ಹೊನ್ನಾಳಿ ಕ್ಷೇತ್ರ
- - - -23ಎಚ್.ಎಲ್.ಐ1:ಅವಳಿ ತಾಲೂಕುಗಳ ಕಾಂಗ್ರೆಸ್, ಆಹಿಂದ ಒಕ್ಕೂಟ, ಸಿದ್ದರಾಮಯ್ಯ ಅಭಿಮಾನಿ ಬಳಗ, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶುಕ್ರವಾರ ಬಿಜೆಪಿ, ಜೆಡಿಎಸ್ ಕುತಂತ್ರ ರಾಜಕೀಯ, ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪಟ್ಟರಾಜ ಗೌಡ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.