ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೊಲೀಸ್ ದೌರ್ಜನ್ಯಗಳು ಹೆಚ್ಚಿವೆ. ಪೊಲೀಸ್ ಸಿಬ್ಬಂದಿ ಮಹಿಳೆಯರು, ಮಕ್ಕಳು, ವೃದ್ಧರು ಎನ್ನದೇ ಬೇಕಾಬಿಟ್ಟಿ ಹಲ್ಲೆ, ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಧಾರವಾಡ:

ಪೊಲೀಸರು ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಹಾನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಸಮಾವೇಶಗೊಂಡ ಬಿಜೆಪಿ ಮಹಿಳಾ ಮೋರ್ಚಾದ ನೂರಾರು ಬಿಜೆಪಿ ಕಾರ್ಯಕರ್ತರು, ಒಂದು ಗಂಟೆಗೂ ಅಧಿಕ ಹೊತ್ತು ಪ್ರತಿಭಟಿಸಿ, ಪೊಲೀಸ್ ದೌರ್ಜನ್ಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೊಲೀಸ್ ದೌರ್ಜನ್ಯಗಳು ಹೆಚ್ಚಿವೆ. ಪೊಲೀಸ್ ಸಿಬ್ಬಂದಿ ಮಹಿಳೆಯರು, ಮಕ್ಕಳು, ವೃದ್ಧರು ಎನ್ನದೇ ಬೇಕಾಬಿಟ್ಟಿ ಹಲ್ಲೆ, ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಹುಬ್ಬಳ್ಳಿಯಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತೆಯನ್ನು ವಶಕ್ಕೆ ಪಡೆದು, ಆಕೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. ಕಾಂಗ್ರೆಸ್ ಪಾಲಿಕೆ ಸದಸ್ಯರ ನೀಡಿದ ದೂರಿನ ಮೇರೆಗೆ ಪೊಲೀಸರು ಇಷ್ಟೊಂದು ದರ್ಪ ತೋರುವುದು ಅಗತ್ಯವಿತ್ತಾ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಪೊಲೀಸರು ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆಯು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ. ರಾಜಕೀಯ ದ್ವೇಷಕ್ಕೆ ಮಹಿಳೆ ಮೇಲಿನ ದೌರ್ಜನ್ಯ ಅಕ್ಷಮ್ಯ ಅಪರಾಧವಾಗಿದ್ದು ಪ್ರಕರಣದಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ತಕ್ಷಣವೇ ಅಮಾನತು ಮಾಡುವಂತೆ ಆಗ್ರಹಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ಮುಖಂಡರಾದ ಸೀಮಾ ಮಸೂತಿ, ಕವಿತಾ ತೇರದಾಳ, ಶೋಭಾ ಭುಜಂಗನವರ, ಪುಷ್ಪಾ ಮಜ್ಜಗಿ, ಯಲ್ಲಮ್ಮ ಅರವಾಳದ, ಸುನೀತಾ ಮಾಳವದಕರ, ಸವಿತಾ ಅಮರಶೆಟ್ಟಿ, ರಾಜೇಶ್ವರಿ ಸಾಲಗಟ್ಟಿ, ಮಂಜುಳಾ ಅಕ್ಕೂರ, ಶಂಕರ ಶೇಳಕೆ ಇದ್ದರು.