ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ, ವಿದ್ಯಾಗಿರಿ ಸಮೀಪದ ಪುತ್ತಿಗೆಪದವು ನಿವಾಸಿ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾರೆ. ಅರ್ಥಶಾಸ್ತ್ರ ಪರೀಕ್ಷೆಯ ಹಿಂದಿನ ದಿನವೇ ತಾಯಿಯನ್ನು ಕಳೆದುಕೊಂಡ ನೋವಿನ ನಡುವೆಯೂ ಧೃತಿಗೆಡದೆ ಪರೀಕ್ಷೆ ಬರೆದು ಮಾದರಿಯಾಗಿದ್ದಾರೆ.

ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ, ವಿದ್ಯಾಗಿರಿ ಸಮೀಪದ ಪುತ್ತಿಗೆಪದವು ನಿವಾಸಿ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾರೆ. ಅರ್ಥಶಾಸ್ತ್ರ ಪರೀಕ್ಷೆಯ ಹಿಂದಿನ ದಿನವೇ ತಾಯಿಯನ್ನು ಕಳೆದುಕೊಂಡ ನೋವಿನ ನಡುವೆಯೂ ಧೃತಿಗೆಡದೆ ಪರೀಕ್ಷೆ ಬರೆದು ಮಾದರಿಯಾಗಿದ್ದಾರೆ.ಪರೀಕ್ಷೆಯ ಸಿದ್ಧತೆಗಾಗಿ ದಿಶಾ ಪ್ರತಿದಿನ ಮುಂಜಾನೆ 3.30 ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದರು. ಕಾಲೇಜಿನಲ್ಲಿ ನಡೆಸುತ್ತಿದ್ದ ಸರಣಿ ಪರೀಕ್ಷೆಗಳು ಹಾಗೂ ಪಠ್ಯಕ್ರಮವನ್ನು ಶೀಘ್ರವಾಗಿ ಪೂರ್ಣಗೊಳಿಸಿದ್ದು ಇವರ ಯಶಸ್ಸಿಗೆ ಪೂರಕವಾಯಿತು. ಇಂಗ್ಲಿಷ್ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸುವುದು ಕಷ್ಟ ಎಂಬ ಸಣ್ಣ ಆತಂಕವಿತ್ತಾದರೂ, ಉಪನ್ಯಾಸಕರು ನೀಡಿದ ಮಾರ್ಗದರ್ಶನದಿಂದಾಗಿ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.ಗಣಿತ ಪರೀಕ್ಷೆಯ ಮುನ್ನಾ ದಿನ ರಾತ್ರಿ ತಾಯಿ ಸವಿತಾ ಅವರು ಆಕಸ್ಮಿಕವಾಗಿ ಬಿದ್ದಿದರು. ಅರ್ಥಶಾಸ್ತ್ರ ಪರೀಕ್ಷೆಯ ಮುನ್ನಾ ದಿನ ದಿಶಾ ಅವರಿಗೆ ತಾಯಿಯ ಸಾವು ದೊಡ್ಡ ಆಘಾತ ನೀಡಿತ್ತು. ಈ ಕಠಿಣ ಸಮಯದಲ್ಲಿ ಉಪನ್ಯಾಸಕಿ ವೀಣಾ ಅವರು ದಿಶಾ ಅವರಿಗೆ ಧೈರ್ಯ ತುಂಬಿ, ತಮ್ಮ ಮನೆಯಲ್ಲೇ ಉಳಿಸಿಕೊಂಡು ಪರೀಕ್ಷೆ ಬರೆಯಲು ಪ್ರೇರೇಪಿಸಿದರು. ತಾಯಿಯ ಅಗಲಿಕೆಯ ನೋವಿದ್ದರೂ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲಿಗಿಯಾಗಿ ಹೊರಹೊಮ್ಮುವ ಮೂಲಕ ದಿಶಾ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಿಎ ಮಾಡುವ ಗುರಿಯನ್ನು ಹೊಂದಿರುವ ದಿಶಾ, ಆಳ್ವಾಸ್ ಕಾಲೇಜಿನ ಉಪನ್ಯಾಸಕ ವಿದ್ಯಾರ್ಥಿ ಸ್ನೇಹಿ ಭೋಧನೆ, ಕಲಿಕೆಗೆ ಪೂರಕ ವಾತಾವರಣ, ಸಿಲೆಬಸ್ ಬೇಗ ಮುಗಿಸಿರುವುದು, ನಿರಂತರವಾಗಿ ಪೂರಕ ಪರೀಕ್ಷೆಗಳನ್ನು ಮಾಡಿರುವುದು ಸಾಧನೆ ಮಾಡಲು ಪೂರಕವಾಯಿತು ಎಂದು ತಿಳಿಸಿದ್ದಾರೆ.