ಸಚಿವ ಸಂಪುಟದಿಂದ ಬಿ.ನಾಗೇಂದ್ರ ವಜಾಗೊಳಿಸಿ: ಕೆ.ಬಿ.ಪ್ರಸನ್ನಕುಮಾರ್ ಒತ್ತಾಯ

| Published : May 29 2024, 12:57 AM IST

ಸಾರಾಂಶ

ಬೆಂಗಳೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಇಲಾಖೆಯಲ್ಲಿನ ಭ್ರಷ್ಟಾಚಾರ ಪ್ರಸ್ತಾಪಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿ ಸಚಿವರ ಹೆಸರು ಪ್ರಸ್ತಾಪಿಸಿರುವುದರಿಂದ ನಾಗೇಂದ್ರರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪರಿಶಿಷ್ಟ ಅಭಿವೃದ್ಧಿ ಇಲಾಖೆ ಸಚಿವ ಬಿ.ನಾಗೇಂದ್ರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಇಲಾಖೆಯಲ್ಲಿನ ಭ್ರಷ್ಟಾಚಾರ ಪ್ರಸ್ತಾಪಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿ ಸಚಿವರ ಹೆಸರು ಪ್ರಸ್ತಾಪಿಸಿರುವುದರಿಂದ ನಾಗೇಂದ್ರರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರುವುದು ರಾಜ್ಯ ಸರ್ಕಾರದ ಕಾರ್ಯವೈಖರಿ ಭಯ ತರಿಸುವ ವಾತಾವರಣ ನಿರ್ಮಾಣವಾಗಿದೆ. ಅಧಿಕಾರಿಯ ಆತ್ಮಹತ್ಯೆಯು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಪರಿಶಿಷ್ಟ ಸಮುದಾಯಕ್ಕೆ ಬಳಕೆಯಾಗಬೇಕಿದ್ದ ಅನುದಾನ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿರುವುದು ಖಂಡನೀಯ ಎಂದರು.ಹಿರಿಯ ಅಧಿಕಾರಿಗಳ ಶಂಕೆ:

ಚಂದ್ರಶೇಖರನ್‌ ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ಈ ಅಕ್ರಮಕ್ಕೆ ನಾನು ಹೊಣೆಯಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಆದ್ದರಿಂದ ಅಧಿಕಾರಿಯ ಸಾವಿನ ತನಿಖೆ ಪಾರದರ್ಶಕವಾಗಿ ನಡೆಸಬೇಕು. ಎಸ್.ಸಿ.,ಎಸ್.ಟಿ. ಹೆಸರಿನಲ್ಲಿ ನಡೆಯುತ್ತಿರುವ ದುರಾಚಾರ ಮತ್ತು ಭ್ರಷ್ಟಾಚಾರದಲ್ಲಿ ಇಲಾಖೆಯ ಸಚಿವರೇ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ನಿಗಮದಲ್ಲಿ ಸುಮಾರು ₹80 ಕೋಟಿ ದುರುಪಯೋಗ ನಡೆದಿರುವ ಶಂಕೆ ಇದ್ದು, ನಿಗಮದ ಹಿರಿಯ ಅಧಿಕಾರಿಗಳು ಭಾಗಿಯಾಗಿರುವುದು ಕಂಡು ಬರುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು.ರಾಜ್ಯದ ಜನತೆ ಹಾಗೂ ಸರ್ಕಾರಿ ನೌಕರರಿಗೆ ಧೈರ್ಯ ತರಬೇಕಾದರೆ ಕೂಡಲೇ ಈ ಅವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ರೇವ್ ಪಾರ್ಟಿ, ಇಸ್ಪೀಟ್ ದಂಧೆ, ಗಾಂಜಾ, ಗ್ಯಾಂಗ್ ವಾರ್, ಕೊಲೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಾ.ಕಡಿದಾಳ್ ಗೋಪಾಲ್, ನಗರಾಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಕೆ.ಎನ್. ರಾಮಕೃಷ್ಣ, ನರಸಿಂಹ ಗಂಧದಮನೆ, ತ್ಯಾಗರಾಜ್, ಸಿದ್ದಪ್ಪ, ಎಚ್.ಎಂ. ಸಂಗಯ್ಯ, ಬೊಮ್ಮನಕಟ್ಟೆ ಮಂಜುನಾಥ್, ದಯಾನಂದ್, ಗೋಪಿ, ಕೃಷ್ಣ, ರಘು, ವೆಂಕಟೇಶ್ ಮತ್ತಿತರರಿದ್ದರು. ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡು ಎರಡು ದಿನವಾಗಿದ್ದರೂ ಸರ್ಕಾರ ಏನೂ ನಡೆದಿಲ್ಲ ಎಂಬಂತೆ ತನ್ನ ನಡೆ ತೋರಿಸುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಶೇ.40 ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಾಗ ಕಾಂಗ್ರೆಸ್ ನವರು ಕೆ.ಎಸ್.ಈಶ್ವರಪ್ಪ ಅವರು ರಾಜೀನಾಮೆ ನೀಡುವವರೆಗೂ ಹೋರಾಟ ಮಾಡಿದ್ದರು. ಈಗ ತಮ್ಮದೇ ಸರ್ಕಾರದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಈ ಇಲಾಖೆಗೆ ಸಂಬಂಧಪಟ್ಟ ಸಚಿವರ ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು.

ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ----

ನನ್ನ ಪತಿ ಸಾವಿಗೆ ನ್ಯಾಯ ಕೊಡಿಸಿ: ಚಂದ್ರಶೇಖರನ್‌ ಪತ್ನಿ ಕವಿತಾ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನನ್ನ ಪತಿ ತುಂಬಾ ನಿಯತ್ತಿನವರು ಅವರ ಮೇಲೆ ಅಪಾದನೆ ಹೊರಿಸಲು ನಾವು ಬಿಡುವುದಿಲ್ಲ. ನಾವು ಬೇರೇನು ಕೇಳುತ್ತಿಲ್ಲ ನಮ್ಮ ಮನೆಯವರ ಸಾವಿಗೆ ನ್ಯಾಯ ಸಿಗಬೇಕು ಎಂದು ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್‌ ಪತ್ನಿ ಕವಿತಾ ಒತ್ತಾಯಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಎರಡು ಮಕ್ಕಳ ಜೀವನ ನೋಡಬೇಕಿದೆ. ನಾನು ತೊಂದರೆಯನ್ನು ಅನುಭವಿಸುತ್ತಿದ್ದೇನೆ. ಸರ್ಕಾರ ನಡೆಸುವ ತನಿಖೆಯಿಂದ ಅವರ ಮೇಲೆ ಯಾವುದೇ ಆಪಾದನೆಗಳಿಲ್ಲ ಎಂಬುದು ಬಹಿರಂಗವಾಗಬೇಕಿದೆ. ಅವರು ಡೆತ್‌ನೋಟ್‌ನಲ್ಲಿ ತಮ್ಮ ಸಾವಿಗೆ ಕಾರಣರಾದ ಮೂವರು ಅಧಿಕಾರಿಗಳ ಹೆಸರನ್ನು ಬರೆದಿದ್ದಾರೆ. ವಾಲ್ಮೀಕಿ ನಿಗಮದ ವ್ಯವಹಾರದ ಕುರಿತು ವಿವರವಾಗಿ ಬರೆದಿದ್ದಾರೆ. ಅವರ ಸಾವಿಗೆ ನ್ಯಾಯ ಕೊಡಿಸಬೇಕು ಎಂದರು.

ಹಣ ವರ್ಗಾವಣೆಯ ಕುರಿತು ನನಗೇನು ಮಾಹಿತಿ ಇಲ್ಲ. ನನಗೆ ಡೆತ್ ನೋಟ್ ನಲ್ಲಿ ಬರೆದಿರುವ ವಿಚಾರ ಮಾತ್ರ ಗೊತ್ತು. ಕಚೇರಿಯ ವಿಷಯಗಳು ಕೆಲವೊಂದು ಕಾನ್ಫಿಡೆನ್ಶಿಯಲ್ ಆಗಿರುವ ಕಾರಣ ನಮ್ಮ ಬಳಿ ಹೆಚ್ಚು ಚರ್ಚೆ ಮಾಡುತ್ತಿರಲಿಲ್ಲ. ಅವರು ಕಚೇರಿ ಆಯ್ತು ಮನೆ ಆಯ್ತು ಬೇರೆ ಯಾವುದೇ ವಿಷಯಕ್ಕೂ ಹೋಗುತ್ತಿರಲಿಲ್ಲ. ಯಾವುದೇ ಹವ್ಯಾಸಗಳು ಇರಲಿಲ್ಲ. ಒಳ್ಳೆಯ ಅಧಿಕಾರಿಯಾಗಿದ್ದರು. 50 ಕೋಟಿ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ನಮ್ಮ ಬ್ಯಾಂಕ್ ಖಾತೆಯ ವಿವರವನ್ನು ಕೊಡುತ್ತೇವೆ ಅದನ್ನು ಪರಿಶೀಲನೆ ನಡೆಸಲಿ ಎಂದು ಹೇಳಿದರು.

ಅಷ್ಟಾಗಿ ಮಾತನಾಡಿಲ್ಲ, ಊಟ ಕೂಡ ಮಾಡಿಲ್ಲ

ಒಬ್ಬ ಅಧಿಕಾರಿಯ ಪತ್ನಿಯಾಗಿ ದಿನಗೂಲಿ ಲೆಕ್ಕದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರೆ ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ, ಸರ್ಕಾರ ಸಿಐಡಿ ತನಿಖೆಗೆ ಆದೇಶ ಮಾಡಿದ್ದು, ನನ್ನ ಪತಿಯ ಸಾವಿಗೆ ನ್ಯಾಯ ಸಿಗಬೇಕು. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಅವರು ಹೇಡಿಯಲ್ಲ. ಬೆಂಗಳೂರಿನಿಂದ ಶುಕ್ರವಾರ ಶತಾಬ್ದಿ ರೈಲಿಗೆ ಬಂದಾಗಿನಿಂದ ಮನೆಯವರು ಬಳಿ ಅಷ್ಟಾಗಿ ಮಾತನಾಡಲಿಲ್ಲ. ಊಟ ಕೂಡ ಮಾಡಿರಲಿಲ್ಲ. ಮೌನವಾಗಿ ಲ್ಯಾಪ್ಟಾಪ್ ನೋಡುತ್ತಾ ಕುಳಿತಿದ್ದರು.

ಕವಿತಾ, ಚಂದ್ರಶೇಖರನ್‌ ಪತ್ನಿ

ನನ್ನ ತಂದೆ ಯಾವ ತಪ್ಪು ಮಾಡಿಲ್ಲ: ಪುತ್ರ ಶಿಶಿರ

ನನ್ನ ತಂದೆ ಯಾವುದೇ ತಪ್ಪು ಮಾಡಿಲ್ಲ ಹಗರಣದಲ್ಲಿ ಯಾವ ಪಾತ್ರವೂ ಇಲ್ಲ. ಡೆತ್ ನೋಟ್ ನಲ್ಲಿ ಕ್ಲಿಯರ್ ಆಗಿ ಎಲ್ಲ ಬರೆದಿಟ್ಟಿದ್ದಾರೆ ಎಂದು ಸಚಿವ ನಾಗೇಂದ್ರ ಆರೋಪಕ್ಕೆ ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಪುತ್ರ ಶಿಶಿರ ಪ್ರತಿಕ್ರಿಸಿದರು. ನನ್ನ ತಂದೆ ಯಾವುದೇ ರೀತಿ ಹಣವನ್ನು ಕಚೇರಿಯಿಂದ ಪಡೆದಿಲ್ಲ. ವಾಲ್ಮೀಕಿ ನಿಗಮದ ಇಬ್ಬರು ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ಈ ಹಗರಣದಲ್ಲಿ ಪಾಲ್ಗೊಂಡಿದ್ದಾರೆ. ಅವರ ಮೇಲೆ ಆರೋಪ ಮಾಡಿ ಈ ಅಧಿಕಾರಗಳ ಹೆಸರನ್ನು ನಮ್ಮ ತಂದೆ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ನಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ. ಆದರೂ ಅವರ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ. ತಪ್ಪು ಮಾಡದಿದ್ದರೂ ನಮ್ಮ ಮೇಲೆ ಆಪಾದನೆ ಮಾಡುವುದು ಯಾವ ನ್ಯಾಯ? ವಿನೋಬನಗರ ಪೊಲೀಸರು ಬಂದು ತನಿಖೆ ಮಾಡಿದ್ದಾರೆ. ತಂದೆ ಮನೆಯಲ್ಲಿದ್ದಾಗ ಕಚೇರಿಯ ಯಾವುದೇ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರಲಿಲ್ಲ. ಯಾರು ಹಣವನ್ನು ಲೂಟಿ ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದರು.