ಗೋವಾ ಸರ್ಕಾರ ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆಗೆ ಕರವೇ ಆಗ್ರಹ

| Published : Apr 18 2024, 02:27 AM IST

ಸಾರಾಂಶ

ಗೋವಾದಲ್ಲಿ ಕನ್ನಡಿಗರನ್ನು ಗುರಿಯಾಗಿಟ್ಟುಕೊಂಡು ಅಲ್ಲಿನ ಸರ್ಕಾರ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಇದೇ ಮೊದಲೇನಲ್ಲ, ಆರನೇ ಬಾರಿ ಇಂತಹ ದುಷ್ಕೃತ್ಯ ಎಸಗುತ್ತಿದ್ದು

ಗದಗ: ಗೋವಾದಲ್ಲಿ ನಾಲ್ಕು ದಶಕಗಳಿಂದ ವಾಸವಿರುವ ಕನ್ನಡಿಗರನ್ನು ಒಕ್ಕಲೆಬ್ಬಿಸುತ್ತಿರುವ ಅಲ್ಲಿನ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಕರವೇ ರಾಜ್ಯ ಕಾರ್ಯದರ್ಶಿ ಹನಮಂತಪ್ಪ ಅಬ್ಬಿಗೇರಿ, ಇಡೀ ಗೋವಾದಲ್ಲಿ ಕನ್ನಡಿಗರು ಯಾರೂ ಇರಬಾರದು ಎಂಬ ತೀರ್ಮಾನಕ್ಕೆ ಅಲ್ಲಿನ ಸರ್ಕಾರ ಬಂದಂತಿದೆ. ರಾಷ್ಟ್ರಪತಿಗಳು ಕೂಡಲೇ ಮಧ್ಯ ಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾಗೊಳಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು. ಉತ್ತರ ಗೋವಾದ ಸಾಂಗೋಲ್ಡಾ ಪ್ರದೇಶದಲ್ಲಿ ಭಾನುವಾರ 15ಕ್ಕೂ ಹೆಚ್ಚು ಕನ್ನಡಿಗರ ಮನೆಗಳನ್ನು ಜೆಸಿಬಿ ಬಳಿಸಿ ಧ್ವಂಸಗೊಳಿಸಲಾಗಿದೆ. ಅವರಿಗೆ ಅನ್ನ, ನೀರು, ಸೂರು ಇಲ್ಲದಂತೆ ಮಾಡಲಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಾಲ್ಕು ದಶಕಗಳಿಂದ ಆ ಪ್ರದೇಶದಲ್ಲಿ ವಾಸವಾಗಿದ್ದ ಕನ್ನಡಿಗರನ್ನು ಏಕಾಏಕಿ ತೆರವುಗೊಳಿಸಲಾಗಿದೆ.

ಗೋವಾದಲ್ಲಿ ಕನ್ನಡಿಗರನ್ನು ಗುರಿಯಾಗಿಟ್ಟುಕೊಂಡು ಅಲ್ಲಿನ ಸರ್ಕಾರ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಇದೇ ಮೊದಲೇನಲ್ಲ, ಆರನೇ ಬಾರಿ ಇಂತಹ ದುಷ್ಕೃತ್ಯ ಎಸಗುತ್ತಿದ್ದು, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಉತ್ತರ ಕರ್ನಾಟಕದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ದುಡಿಯಲಿಕ್ಕೆ ಹೋಗಿ ನೆಲೆಸಿದ್ದಾರೆ. ಕೂಡಲೇ ಗೋವಾ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಆ ಕುಟುಂಬಗಳಿಗೆ ಸೂರು ಒದಗಿಸಿ ನೆಲೆಸಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.