ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ವಜಾಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಆಗ್ರಹಿಸಿ ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಸಂದರ್ಭದಲ್ಲಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಅಸಭ್ಯ ಪದ ಬಳಸಿ ಮತ್ತು ವರ್ಣಭೇದ ನೀತಿ ಅನುಸರಿಸಿರುವ ಸಚಿವ ಜಮೀರ್ ಅಹಮ್ಮದ್ ಖಾನ್‌ರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಮೂಲಕ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.ಎಚ್.ಡಿ. ಕುಮಾರಸ್ವಾಮಿ ಅವರನ್ನು ಕರಿಯ ಎಂದು ಕರೆದಿರುವುದು ಅಕ್ಷಮ್ಯ ಅಪರಾಧ. ಈ ಘಟನೆಯಿಂದ ಇಡೀ ರಾಜ್ಯದ ಜನತೆ ತಲೆತಗ್ಗಿಸುವಂತಹ ವಾತಾವರಣ ಸೃಷ್ಟಿಯಾಗಿದೆ. ಈ ಅನಾಗರಿಕ, ಕೀಳು ಅಭಿರುಚಿಯ ಜಮೀರ್ ಅಹಮ್ಮದ್ ಖಾನ್ ಸಚಿವ ಸಂಪುಟದಲ್ಲಿ ಮುಂದುವರೆಯಲು ಶೋಭೆ ತರುವಂತಹದ್ದಲ್ಲ. ಆದ್ದರಿಂದ ರಾಜ್ಯಪಾಲರು ಅವರನ್ನು ತಕ್ಷಣವೇ ವಜಾಮಾಡಬೇಕು ಹಾಗೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಾ. ಕಡಿದಾಳ್ ಗೋಪಾಲ್, ಶಾಸಕಿ ಶಾರದಾ ಪೂರ್‍ಯನಾಯ್ಕ್, ಶಾರದಾ ಎಂ.ಜೆ. ಅಪ್ಪಾಜಿ, ಪ್ರಮುಖರಾದ ಕೆ.ಎನ್. ರಾಮಕೃಷ್ಣ, ನರಸಿಂಹ ಗಂಧದಮನೆ, ಎಚ್.ಎಂ. ಸಂಗಯ್ಯ, ಸಂಜಯ್ ಕಶ್ಯಪ್, ಎಸ್.ವಿ. ರಾಜಮ್ಮ, ದಯಾನಂದ್, ಎಸ್.ಎಲ್. ನಿಖಿಲ್, ಸಿದ್ದಪ್ಪ, ತ್ಯಾಗರಾಜ್, ಚಂದ್ರಶೇಖರ್, ಗೀತಾ ಸತೀಶ್, ಎಚ್.ಎನ್. ಧರ್ಮರಾಜ್, ಕೆ.ಎಂ. ನಾಗೇಶ್, ಡಿ. ಚಂದ್ರನಾಯ್ಕ್, ವಿನಯ್, ರಘು ಭಾಗವಹಿಸಿದ್ದರು.