ಸಾರಾಂಶ
- ಗುತ್ತಿಗೆದಾರ ಚಲುವರಾಜುಗೆ ಹೊಲೆಯ ಪದ ಬಳಸಿ ಜಾತಿ ನಿಂದನೆ ಅಕ್ಷಮ್ಯ: ಜಿಲ್ಲಾಧ್ಯಕ್ಷ ಎನ್.ರುದ್ರಮುನಿ ಆಕ್ರೋಶ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಂಗಳೂರಿನ ಆರ್.ಆರ್. ನಗರದ ಬಿಜೆಪಿ ಶಾಸಕ ಮುನಿರತ್ನ ಛಲವಾದಿ ಸಮುದಾಯ (ಹೊಲೆಯರು)ದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ರಾಜ್ಯದಿಂದಲೇ ಗಡಿಪಾರು ಮಾಡುವಂತೆ ಜಿಲ್ಲಾ ಛಲವಾದಿ ಮಹಾಸಭಾ ರಾಜ್ಯಪಾಲರಿಗೆ ಒತ್ತಾಯಿಸಿದೆ.ಮಹಾಸಭಾದ ಜಿಲ್ಲಾಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ಆರ್.ಆರ್. ನಗರದ ಬಿಜೆಪಿ ಶಾಸಕ ಮುನಿರತ್ನ ಅವರು ಗುತ್ತಿಗೆದಾರ ಚಲುವರಾಜುಗೆ ಮಾತನಾಡಿರುವ ಆಡಿಯೋ ಸೆ.13ರಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಹಣಕಾಸಿನ ವಿಚಾರ ಮಾತನಾಡುತ್ತ ಹೊಲೆಯ ಎಂಬುದಾಗಿ ಹೇಳಿ, ಅವಾಚ್ಯ ಶಬ್ಧ ಬಳಸಿರುವುದು ಅಕ್ಷಮ್ಯ ಎಂದರು.
ಸಮಾಜಕ್ಕೆ ತೀವ್ರ ನೋವಾಗಿದೆ:ತಾನು 5 ವರ್ಷ ಶಾಸಕನೆಂದು ಗುತ್ತಿಗೆದಾರ ಚಲುವರಾಜು ಅವರ ತಾಯಿ ಹಾಗೂ ಪತ್ನಿ ಬಗ್ಗೆ ಕೀಳುಭಾಷೆಯಿಂದ ನಿಂದಿಸಿ, ಅವನನ್ನು ಏನು ಮಾಡುತ್ತೇನೆ ನೋಡು ಎಂಬುದಾಗಿ ಪ್ರಾಣ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಲಾಗಿದೆ. ನಮ್ಮ ಸಮುದಾಯದ ಬಗ್ಗೆ ಮುನಿರತ್ನ ಅತಿ ಕೀಳು ಭಾಷೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನಮ್ಮ ಸಮುದಾಯ ಆಡಿಯೋ, ವೀಡಿಯೋ ನೋಡಿದೆ. ಇದರಿಂದ ಸಮಾಜ ಬಾಂಧವರಿಗೆ ತೀವ್ರ ನೋವಾಗಿದೆ ಎಂದು ಹೇಳಿದರು.
ಶಾಸಕನಾಗಿ ಮುನಿರತ್ನ ಅವರಿಗೆ ನಮ್ಮ ಸಮುದಾಯದ ಬಗ್ಗೆ ಹೊಂದಿರುವ ಕೀಳು ಭಾವನೆ ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಶಾಸಕರಾಗಿ ಆಯ್ಕೆಯಾದ ನಂತರ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಶಾಸಕರು ಇಂತಹ ಮಾತುಗಳನ್ನು ಆಡಿರುವುದು ಸಂವಿಧಾನಕ್ಕೆ ಮತ್ತು ಎಲ್ಲ ಜನಾಂಗದವರು ಮತ್ತು ಮಹಿಳೆಯರಿಗೆ, ಮತ ನೀಡಿದವರಿಗೆ ಅವಮಾನ ಮಾಡಿದಂತಾಗಿದೆ ಎಂದರು.ಉಗ್ರ ಪ್ರತಿಭಟನೆ:
ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ, ಎಫ್‌ಐಆರ್ ಮಾಡಿ, ಬಂಧಿಸಿದ ಪೊಲೀಸ್ ಇಲಾಖೆ ಕ್ರಮವನ್ನು ನಮ್ಮ ಇಡೀ ಸಮಾಜ ಸ್ವಾಗತಿಸುತ್ತದೆ. ಮುನಿರತ್ನ ಗಡಿಪಾರಿಗೆ ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಛಲವಾದಿ ಸಮಾಜದಿಂದ ಶಾಸಕ ಮುನಿರತ್ನ ಹಾಗೂ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಛಲವಾದಿ ಮಹಾಸಭಾ ಕಾರ್ಯಾಧ್ಯಕ್ಷ ಟಿ.ಎಸ್.ರಾಮಯ್ಯ, ಮುಖಂಡರಾದ ಹದಡಿ ಚಂದ್ರಪ್ಪ, ನಾಗಭೂಷಣ, ನವೀನಕುಮಾರ, ಶೇಖರಪ್ಪ ಇತರರು ಇದ್ದರು.
ಪತ್ರಿಕಾಗೋಷ್ಠಿ ಬಳಿಕ ಎನ್.ರುದ್ರಮುನಿ ನೇತೃತ್ವದಲ್ಲಿ ಸಮಾಜ ಬಾಂಧವರು ಜಿಲ್ಲಾಡಳಿತ ಭವನಕ್ಕೆ ತೆರಳಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಶಾಸಕ ಮುನಿರತ್ನ ಶಾಸಕತ್ವ ವಜಾಗೊಳಿಸಿ, ರಾಜ್ಯದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದರು.- - -ಕೋಟ್ ಶಾಸಕನಾಗಿ ಮುನಿರತ್ನ ಜೀವ ಬೆದರಿಕೆ ಹಾಕಿ, ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿರುವುದನ್ನು ಜಿಲ್ಲಾ ಛಲವಾದಿ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಈ ವಿಚಾರವನ್ನು ಇಲ್ಲಿಗೇ ಬಿಡುವುದೂ ಇಲ್ಲ. ನಮ್ಮ ಸಮುದಾಯದ ಹೆಸರನ್ನು ಬಳಸಿ, ನಿಂದನೆ ಮಾಡಿರುವ ಮುನಿರತ್ನ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು
- ಎನ್.ರುದ್ರಮುನಿ, ಜಿಲ್ಲಾಧ್ಯಕ್ಷ, ಛಲವಾದಿ ಮಹಾಸಭಾ- - - -16ಕೆಡಿವಿಜಿ1:
ದಾವಣಗೆರೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. -16ಕೆಡಿವಿಜಿ2:ದಾವಣಗೆರೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ ಅವರಿಗೆ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಎನ್.ರುದ್ರಮುನಿ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು.