ಕ್ರಿಮಿನಲ್‌ ಕೇಸಿನ ಕಾರಣ ನೌಕರನ ವಜಾ ಸರಿಯಲ್ಲ: ಕೋರ್ಟ್‌

| Published : Jan 22 2024, 02:19 AM IST

ಸಾರಾಂಶ

ಕ್ರಿಮಿನಲ್‌ ಕೇಸ್‌ ಇದ್ದ ದಕ್ಷಿಣ ಕನ್ನಡ ಜಿಲ್ಲೆಯ ಅತ್ತಿಕರಿಬೆಟ್ಟು ಗ್ರಾಪಂ ಬಿಲ್‌ ಕಲೆಕ್ಟರ್‌ ಅಮಾನತನ್ನು ಒಪ್ಪದ ಹೈಕೋರ್ಟ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ ಎಂಬ ಏಕ ಮಾತ್ರ ಕಾರಣಕ್ಕೆ ಸರ್ಕಾರದ ಕಾಯಂ ಉದ್ಯೋಗಿಯನ್ನು ಸೇವೆಯಿಂದ ವಜಾಗೊಳಿಸುವಂತಿಲ್ಲ ಎಂದು ಸ್ಪಷ್ಟಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಗಣೇಶ್‌ ಎಂಬಾತನನ್ನು ಬಿಲ್‌ ಕಲೆಕ್ಟರ್‌ ಉದ್ಯೋಗದಿಂದ ವಜಾಗೊಳಿಸಲು ತಾನು ತೆಗೆದುಕೊಂಡಿದ್ದ ನಿರ್ಣಯವನ್ನು ರದ್ದುಪಡಿಸಿದ್ದ ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಅತ್ತಿಕರಿಬೆಟ್ಟು ಗ್ರಾಮ ಪಂಚಾಯತಿ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಸಾಮಾನ್ಯವಾಗಿ ಅಪರಾಧ ಪ್ರಕರಣಗಳಲ್ಲಿ ದೋಷಿಯಾಗಿ ತೀರ್ಮಾನಿಸಲ್ಪಟ್ಟು ಶಿಕ್ಷೆಗೆ ಒಳಗಾದ ಸಂದರ್ಭದಲ್ಲಿ ಉದ್ಯೋಗಿಯನ್ನು ಉದ್ಯೋಗದಾತರು, ಸೇವೆಯಿಂದ ವಜಾಗೊಳಿಸುತ್ತಾರೆ. ಆದರೆ, ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ವಿಚಾರಣೆಗೆ ಬಾಕಿಯಿದೆ ಎಂಬ ಕಾರಣಕ್ಕೆ ಉದ್ಯೋಗಿಯನ್ನು ವಜಾಗೊಳಿಸಲಾಗದು. ಹಾಗಾಗಿ ಅತ್ತಿಕರಿಬೆಟ್ಟು ಗ್ರಾ.ಪಂ. ಉದ್ಯೋಗಿಯಾದ ಗಣೇಶ್‌ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಆತನನ್ನು ಸೇವೆಯಿಂದ ವಜಾಗೊಳಿಸಿರುವುದು ದೋಷಪೂರಿತವಾಗಿದೆ ಎಂದು ವಿಭಾಗೀಯ ಪೀಠ ಆದೇಶದಲ್ಲಿ ನುಡಿದಿದೆ.

ಅಲ್ಲದೆ, ವಿವರಣೆ ನೀಡಲು ಅವಕಾಶ ಕಲ್ಪಿಸದೆ ಸೇವೆಯಿಂದ ಉದ್ಯೋಗಿಯನ್ನು ವಜಾಗೊಳಿಸುವುದು ಸಂವಿಧಾನದ ಪರಿಚ್ಛೇದ 14ರ ಅಡಿಯಲ್ಲಿ ಅಡಕಗೊಳಿಸಿರುವ ಸಹಜ ನ್ಯಾಯದ ತತ್ವದ ಸ್ಪಷ್ಟ ಉಲ್ಲಂಘನೆ. ಪ್ರಕರಣದಲ್ಲಿ ನಡೆದಿರುವಂತೆ ಉದ್ಯೋಗವನ್ನು ಕಸಿದುಕೊಳ್ಳುವುದು ಉದ್ಯೋಗಿಯ ಜೀವನೋಪಾಯವನ್ನು ಕಸಿದುಕೊಂಡಂತೆ. ಅದು ಸಂವಿಧಾನದ ಪರಿಚ್ಛೇದ 21ರಲ್ಲಿ ಕಲ್ಪಿಸಿರುವ ಮೂಲಭೂತ ಹಕ್ಕುಗಳಾದ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆ ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಇನ್ನು ಸೇವೆಯಿಂದ ವಜಾಗೊಂಡ ನಂತರ ಗಣೇಶ್‌ ಉದ್ಯೋಗದಿಂದ ಹೊರಗುಳಿದ ಅವಧಿಯಲ್ಲಿ ಆತನಿಗೆ ಹಿಂಬಾಕಿ ಪಾವತಿಸುವ ವಿಚಾರ ಕುರಿತು ಗ್ರಾ.ಪಂ. ತನ್ನ ವಿವೇಚನೆ ಮೇರೆಗೆ ನಿರ್ಧಾರ ಕೈಗೊಳ್ಳಬಹುದು ಎಂದು ನ್ಯಾಯಪೀಠ ಮುಕ್ತ ಅವಕಾಶ ಕಲ್ಪಿಸಿದೆ.

ಪ್ರಕರಣದ ಹಿನ್ನೆಲೆ:

ಮೂಲ್ಕಿ ತಾಲೂಕು ನಿವಾಸಿ ಗಣೇಶ್‌, ದಕ್ಷಿಣ ಕನ್ನಡದ ಅತ್ತಿಕರಿಬೆಟ್ಟು ಗ್ರಾ.ಪಂ. ಕಚೇರಿಯ ಬಿಲ್‌ ಕಲೆಕ್ಟರ್‌ ಉದ್ಯೋಗ ಮಾಡುತ್ತಿದ್ದರು. ಅವರ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಹೀಗಾಗಿ ಉದ್ಯೋಗದಿಂದ ಗಣೇಶ್‌ ಅವರನ್ನು ವಜಾಗೊಳಿಸಲು 2020ರ ಜ. 23ರಂದು ಗ್ರಾ.ಪಂ. ನಿರ್ಣಯಿಸಿತ್ತು. ಈ ನಿರ್ಣಯ ಪ್ರಶ್ನಿಸಿ ಗಣೇಶ್‌ ಸಲ್ಲಿಸಿದ್ದ ಮನವಿಯನ್ನು 2021ರ ನ. 24ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಸಹ ತಿರಸ್ಕರಿಸಿತ್ತು. ಇದರಿಂದ ಆತ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ಇ.ಎಸ್‌. ಇಂದಿರೇಶ್‌ ಅವರ ಏಕ ಸದಸ್ಯ ಪೀಠ, ಕಾಯಂ ಉದ್ಯೋಗಿಯನ್ನು ಸಂಬಂಧಪಟ್ಟ ಪ್ರಾಧಿಕಾರವು ತನ್ನ ನಿಯಮಗಳಿಗೆ ಅನುಸಾರ ವಿಚಾರಣೆ ನಡೆಸಿದ ನಂತರ ಸೇವೆಯಿಂದ ವಜಾಗೊಳಿಸಬೇಕಾಗುತ್ತದೆ. ವಿಚಾರಣೆ ನಡೆಸದೇ ಗಣೇಶ್‌ನನ್ನು ಸೇವೆಯಿಂದ ಅರ್ಜಿದಾರರನ್ನು ವಜಾಗೊಳಿಸಿರುವುದು ತಪ್ಪು ಎಂದು 2023ರ ಏ. 6ರಂದು ಆದೇಶಿಸಿತ್ತು. ಜತೆಗೆ, ಕೂಡಲೇ ಗಣೇಶ್‌ನನ್ನು ಸೇವೆಗೆ ಮರು ನಿಯೋಜಿಸಬೇಕು. ಸಹಜ ನ್ಯಾಯದ ತತ್ವಗಳನ್ನು ಪಾಲಿಸಿದ ನಂತರವೇ ಅರ್ಜಿದಾರರ ವಿರುದ್ಧ ಸರ್ಕಾರಿ ಪ್ರಾಧಿಕಾರ ಕ್ರಮ ತೆಗೆದುಕೊಳ್ಳಬಹುದು ಎಂದು ತಿಳಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಗ್ರಾ.ಪಂ. ಹಾಗೂ ಅದರ ಪಿಡಿಒ ಮೇಲ್ಮನವಿ ಸಲ್ಲಿಸಿದ್ದರು.