Display sportsmanship without being disheartened by defeat.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕ್ರೀಡಾಕೂಟದಲ್ಲಿ ಸೋತವರು ಧೃತಿಗೆಡದೆ ಕ್ರೀಡಾ ಮನೋಭಾವದಿಂದ ಭಾಗವಹಿಸುವುದು ಮುಖ್ಯ. ಅಂತೆಯೇ ಜೀವನದಲ್ಲಿ ಸಹ ಯಾವುದೇ ಕಠಿಣ ಸಂದರ್ಭಗಳು ಒದಗಿದರೂ ಕಂಗೆಡದೆ ಕ್ರೀಡಾ ಮನೋಭಾವದಿಂದ ಎದುರಿಸಬೇಕು ಎಂದು ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಗುರುವಾರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆಗಳು ನಶಿಸಿ ಹೋಗುವ ಪರಿಸ್ಥಿತಿ ಎದುರಾದಾಗ ಸರ್ಕಾರ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ನಡೆಯುವ ಸಾಂಪ್ರದಾಯಿಕ ದಸರಾ ಉತ್ಸವದ ನೆನಪಿನಲ್ಲಿ ಕ್ರೀಡಾಕೂಟವನ್ನು ಸುಮಾರು ೪೦ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ದೇಹವನ್ನು ಸದೃಢಗೊಳಿಸಲು, ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು, ಸ್ವಾಸ್ಥ್ಯ, ಸುಂದರ ಸಮಾಜವನ್ನು ನಿರ್ಮಾಣ ಮಾಡಲು ಕ್ರೀಡೆಯನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ. ಪ್ರತಿನಿತ್ಯ ಅಭ್ಯಾಸದ ಮೂಲಕ ಮತ್ತು ದೈಹಿಕ ಶ್ರಮದ ಮುಖೇನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.ಇದೇ ಕ್ರೀಡಾಂಗಣದಲ್ಲಿ ಆಟವಾಡಿ ಬಹಳಷ್ಟು ಜನ ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಏಷ್ಯನ್ ಕ್ರೀಡಾಕೂಟದ ಭಾರದ ಕಲ್ಲು ಎಸೆತದಲ್ಲಿ ಬಿ.ಪಿ. ಉಮಾದೇವಿ ಮೂರನೇ ಬಹುಮಾನವನ್ನು ಪಡೆದಿದ್ದರು. ವಾಲಿಬಾಲ್ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ ಚೆಲುವಯ್ಯ ಕ್ರೀಡಾ ಕೋಟಾದ ಮೂಲಕವೇ ರೈಲ್ವೆಯಲ್ಲಿ ಉದ್ಯೋಗ ಪಡೆದಿದ್ದರು. ಅಂತೆಯೇ ಈ ಜಿಲ್ಲೆಯ ಸುಪ್ರಿಯಾ ಬಸವರಾಜು ಹಾಗೂ ಶೃಂಗೇರಿಯ ಸ್ನೇಹ ಇವರು ಇದೀಗ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ನಮ್ಮ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಇವರೆಲ್ಲ ಈ ಕ್ರೀಡಾಂಗಣದಿಂದ ಹೊರಹೊಮ್ಮಿದ ಪ್ರತಿಭೆಗಳು. ಹಾಗಾಗಿ ಇಲ್ಲಿ ನಡೆಯುವ ಕ್ರೀಡಾಕೂಟ ಪ್ರತಿಭಾವಂತರಿಗೆ ಕನ್ನಡಿ ಹಿಡಿಯುತ್ತಿದೆ. ಒಂದು ವೇದಿಕೆಯನ್ನು, ಸದವಕಾಶವನ್ನು ಕಲ್ಪಿಸಿಕೊಡುತ್ತಿದೆ ಎಂದು ತಿಳಿಸಿದರು.ತಾಲೂಕು ಮಟ್ಟದ ಕ್ರೀಡಾಕೂಟ ನಡೆದು ಅಲ್ಲಿ ವಿಜೇತರಾದವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಇಂದು ಮತ್ತು ನಾಳೆ ಎರಡು ದಿನ ನಡೆಯುವ ಕ್ರೀಡೆಯಲ್ಲಿ ಕ್ರೀಡಾಪಟುಗಳಿಂದ ಪದಕ ಗೆಲ್ಲುವ ಪ್ರಯತ್ನ ನಡೆಯಲಿ. ಯಶಸ್ವಿಯಾಗಿ ಪಂದ್ಯಾವಳಿಗಳು ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರೇಗೌಡ, ತಾಲೂಕು ದೈಹಿಕ ಶಿಕ್ಷಕರ ಸಂಘದ ಕುಮಾರಸ್ವಾಮಿ, ಅಥ್ಲೆಟಿಕ್ಸ್ ಸಂಘದ ಫ್ರಾನ್ಸಿಸ್, ಜಿಲ್ಲಾ ಅಥ್ಲೆಟಿಕ್ಸ್ ಸಂಘದ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಕಬಡ್ಡಿ ಸಂಘದ ತರಬೇತುದಾರ ಕುಮಾರ್ ಕಾರ್ಯಕ್ರಮದಲ್ಲಿದ್ದರು.

--------

ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಗುರುವಾರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಉದ್ಘಾಟಿಸಿದರು.