ಅರ್ಜಿ ತ್ವರಿತ ವಿಲೇವಾರಿ ಮಾಡಿ: ಜಿಲ್ಲಾಧಿಕಾರಿ

| Published : May 30 2024, 12:48 AM IST

ಅರ್ಜಿ ತ್ವರಿತ ವಿಲೇವಾರಿ ಮಾಡಿ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಚೇರಿಗೆ ಸಮಸ್ಯೆ ಹೊತ್ತು ಬರುವ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಿ ಅವರಿಂದ ಸ್ವೀಕರಿಸಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಶೀಘ್ರ ವಿಲೇವಾರಿ ಮಾಡಿ ಪ್ರಗತಿ ಸಾಧಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ರೈತರ ಜಮೀನುಗಳಲ್ಲಿ ದಾರಿ ಸಮಸ್ಯೆ, ಗ್ರಾಮ ನಕಾಶೆಗಳಲ್ಲಿ ಇಲ್ಲದಿದ್ದರೂ ಹೊಲಗಳಿಗೆ ಹೋಗಲು ಪಾರಂಪರಿಕ ಕಾಲುದಾರಿ ಹಾಗೂ ಬಂಡಿ ದಾರಿಗಳಲ್ಲಿ ಸಾಗಲು ಅಡ್ಡಿಪಡಿಸುವ ಪ್ರಕರಣಗಳನ್ನು ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಹರಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಜಮೀನು ಸರ್ವೇ ಕಾರ್ಯಗಳ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ, ಇಲಾಖೆಯ ಹಾಗೂ ನೋಂದಾಯಿತ ಸರ್ವೇಯರಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡಿದ ನಂತರ, ಸಂಬಂಧಪಟ್ಟ ಸ್ಥಳಕ್ಕೆ ಭೇಟಿ ನೀಡಿ, ಶೀಘ್ರದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸರ್ವೇಯರ್‌ಗಳ ಪ್ರಗತಿಯನ್ನು ನಿರಂತರವಾಗಿ ಗಮನಿಸಲು ತಿಳಿಸಿದ ಅವರು ಎಲ್ಲಾ ತಹಸೀಲ್ದಾರರು ಸರಕಾರಿ ಜಮೀನಿಗೆ ಸಂಬಂಧಿಸಿದಂತೆ ಲ್ಯಾಂಡ್ ಬೀಟ್ ಆ್ಯಪ್ ನಲ್ಲಿ ಕಾಲೋಚಿತಗೊಳಿಸಲು ಸೂಚಿಸಿದರು.

ಆಶ್ರಯ ನಿವೇಶನ, ಬಗರ್‌ ಹುಕುಂ ಸಾಗವಳಿ ಚೀಟಿ ನೀಡುವ ಸಂಬಂಧ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದರು. ಸರಿಯಾಗಿ ಮಾಹಿತಿ ನೀಡದ ಹಾಗೂ ಸಮರ್ಪಕವಾಗಿ ಕೆಲಸ ಮಾಡದಿರುವ ಕೆಲವು ಕಂದಾಯ ನಿರೀಕ್ಷಕ ಹಾಗೂ ಗ್ರಾಮಲೆಕ್ಕಿಗರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ವ್ಯಾಪಕ ಮಳೆಯಾದ ಸಂದರ್ಭದಲ್ಲಿ ಪ್ರವಾಹ, ಜನ, ಜಾನುವಾರು ಪ್ರಾಣಹಾನಿ, ವಾಸದ ಮನೆ ಹಾನಿ ಹಾಗೂ ಸಾರ್ವಜನಿಕ ಆಸ್ತಿಹಾನಿ ಯಾಗುವ ಸಾಧ್ಯತೆಗಳಿದ್ದು, ಅಂತಹ ಸಂದರ್ಭದಲ್ಲಿ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮಕೈಗೊಳ್ಳಬೇಕು ಎಂದರು.

ಮಳೆಯಿಂದ ಜಾನುವಾರು ಪ್ರಾಣ ಹಾನಿ, ವಾಸದ ಮನೆ ಹಾನಿಯಾಗಿದ್ದಲ್ಲಿ ತಕ್ಷಣ ಪರಿಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಸೂಚನೆ ನೀಡಿದರು.

ವ್ಯಾಪಕ ಮಳೆ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಮಳೆಯಾದರೂ ಸಹ, ಕುಡಿಯುವ ನೀರಿನ ಸಮಸ್ಯೆ ಅಲ್ಲಲ್ಲಿ ಕೇಳಿಬರುತ್ತದೆ. ಆದ್ದರಿಂದ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಪ್ರಕಾಶ ಕುದರಿ ಸೇರಿದಂತೆ ಎಲ್ಲಾ ತಾಲೂಕಿನ ತಹಸೀಲ್ದಾರರು, ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.